ಸಿಂಧನೂರು: ಬೀದಿ ವ್ಯಾಪಾರಸ್ಥರು ಬೆಂಕಿಯಿಂದ ಬಾಣಲೆಗೆ, ಮೇಲಿಂದ ಮೇಲೆ ಕೇಸ್ ಹಾಕಿ ಹೋರಾಟ ಹತ್ತಿಕ್ಕುವ ತಂತ್ರ, ಆರೋಪ

Spread the love

ಲೋಕಲ್ ನ್ಯೂಸ್: ಬಸವರಾಜ ಹಸಮಕಲ್
ನಮ್ಮ ಸಿಂಧನೂರು, ಏಪ್ರಿಲ್ 27

ಉದ್ಯೋಗವಿಲ್ಲದೇ, ಮಾಡಿದ ಸಾಲ ತೀರಿಸಲಾಗದೇ ಕುಟುಂಬ ನಿರ್ವಹಣೆ ಮಾಡಲು ಪರಿತಪಿಸುತ್ತಿರುವ ಬೀದಿ ಬದಿ ವ್ಯಾಪಾರಸ್ಥರ ಮೇಲೆ ಕೇಸ್ ದಾಖಲಿಸಿ, ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿವೆ.
ಡಿಸೆಂಬರ್ 25, 2024ರಂದು ಬೀದಿ ಬದಿ ವ್ಯಾಪಾರಸ್ಥರನ್ನು ತೆರವು ಕಾರ್ಯಾಚರಣೆ ಮೂಲಕ ಏಕಾಏಕಿ ಒಕ್ಕಲೆಬ್ಬಿಸಲಾಗಿಯಿತು. ಇದರಿಂದ 1000ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಮತ್ತು ಅವರನ್ನು ಅವಲಂಬಿಸಿದ 5000ಕ್ಕೂ ಹೆಚ್ಚು ಕುಟುಂಬ ಸದಸ್ಯರು ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಕಳೆದ 16 ತಿಂಗಳುಗಳಿಂದ ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ನಿರಂತರ ಹೋರಾಟ ನಡೆಸುತ್ತಿದ್ದೇವೆ. ಆದರೂ ಇಲ್ಲಿಯವರೆಗೂ ಜಿಲ್ಲಾ, ತಾಲೂಕು ಆಡಳಿತ ಸೇರಿದಂತೆ ಶಾಸಕರು ಸಬೂಬು ಹೇಳುವ ಮೂಲಕ ಕಾಲಹರಣ ಮಾಡುತ್ತಿದ್ದಾರೆ ಎಂದು ಬೀದಿ ಬದಿ ವ್ಯಾಪಾರಸ್ಥರು ದೂರುತ್ತಾರೆ.
ಎರಡು ಕೇಸ್ ದಾಖಲು
ಗಂಗಾವತಿ ಮಾರ್ಗದ ರಸ್ತೆಯ ತೋಟಗಾರಿಕೆಯ ಇಲಾಖೆಯ ಕಾಂಪೌಂಡ್‌ಗೆ ಹೊಂದಿಕೊಂಡು ಇರುವ ಜಾಗೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸುವಂತೆ ನಿರಂತರ ಒತ್ತಾಯ ಮಾಡುತ್ತ ಬರಲಾಗಿದೆ. ಆದರೂ ಇಲ್ಲಿಯವರೆಗೂ ನಾನಾ ನೆಪ ಹೇಳುವ ಮೂಲಕ ಸಾಗಹಾಕಲಾಗುತ್ತಿದೆ. ಅಲ್ಲದೇ ಈ ಹಿಂದೆ ಹೋರಾಟಗಾರರು ಹಾಗೂ ಬೀದಿ ಬದಿ ವ್ಯಾಪಾರಸ್ಥರ ಮೇಲೆ 1 ಕೇಸ್ ದಾಖಲಿಸಲಾಗಿದ್ದು, ಈಗ ಪುನಃ 24-04-2026ರಂದು ಬೀದಿ ಬದಿ ವ್ಯಾಪಾರಿಗಳ ಹೋರಾಟ ಸಮಿತಿಯವರ ಮೇಲೆ ಮತ್ತೊಂದು ದಾಖಲಿಸಲಾಗಿದೆ. ಕೆಲವರ ಚಿತಾವಣೆಯಿಂದ ಹೀಗೆ ಕೇಸ್ ಮೇಲೆ ಕೇಸ್ ದಾಖಲಿಸುವ ಮೂಲಕ ಹೋರಾಟ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ಬೀದಿ ಬದಿ ವ್ಯಾಪಾರಸ್ಥರೊಬ್ಬರು ಆಪಾದಿಸಿದರು.

Namma Sindhanuru Click For Breaking & Local News

‘ಶಾಸಕರು ಒಂದ್ ಹೇಳ್ತಾರೆ, ಅಧಿಕಾರಿಗಳು ಇನ್ನೊಂದು ಮಾಡ್ತಾರೆ’
“ಶಾಸಕರ ಹತ್ರ ಹೋಗಿ ಪರಿಸ್ಥಿತಿ ತಿಳಿಸಿ ಹೇಳಿ ಡಬ್ಬಿ ಅಕ್ಕೆಂಡ್ರ, ಅಧಿಕಾರಿಗಳು ಬಂದು ಕಿತ್ತಿ ಹೊಗಸ್ತಾರ. ಅಂಗದ್ರ ಶಾಸಕರ ಮಾತಿಗೆ ಬೆಲಿ ಇಲ್ಲನ್ರಿ. ಎಮ್ಮೆಲ್ಲೇರು ಹೇಳಿದ್ರಂತ ನಾವು ಹೋಗೋದು, ಅಧಿಕಾರಿಗಳು ಕೇಸ್ ಮಾಡೋದು, ಇದೊಂಥರಾ ಇಚಿತ್ರ ಇದೆ. ಈ ರಾಜಕಾರಣ ಯಾರಿಗೆ ಅರ್ಥಾಗಲ್ಲೇನ್ರಿ. ಹಂಗಾಗಿ ನಮ್ಮ ಬೇಡಿಕೆ ಈಡೇರವರೆಗೂ ನಾವು ಶಾಂತಿಯುತವಾಗಿ ಧರಣಿ ನಡಿಸ್ತೀವಿ” ಎಂದು ಬೀದಿ ಬದಿ ವ್ಯಾಪಾರಿಯೊಬ್ಬರು ಹೇಳುತ್ತಾರೆ.
‘ಬೆಳಗಾವಿ ಇಲ್ಲವೇ ಹುಬ್ಳಿ-ಧಾರವಾಡ ಮಾದರಿಯಲ್ಲಿ ಮಳಿಗೆ ನಿರ್ಮಿಸಲಿ’
ಗಂಗಾವತಿ ಮಾರ್ಗದ ಬೀದಿ ಬದಿ ವ್ಯಾಪಾರಸ್ಥರಿಗೆ ಶಾಶ್ವತ ಪರಿಹಾರ ಕಲ್ಪಿಸುವ ದೃಷ್ಟಿಯಿಂದ ಅತ್ಯಾಧುನಿಕವಾಗಿ ಬೆಳಗಾವಿ ಮಹಾನಗರ ಪಾಲಿಕೆ ಇಲ್ಲವೇ ಹುಬ್ಳಿ-ಧಾರವಾಡ ಮಾದರಿಯಲ್ಲಿ ಮಳಿಗೆಗಳನ್ನು ನಿರ್ಮಿಸಿ ಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಲಿ. ಇದರಿಂದ ಬೀದಿ ಬದಿ ವ್ಯಾಪಾರಸ್ಥರು ಜೀವನೋಪಾಯ ಮಾಡಿಕೊಳ್ಳಲು ಸುಲಭವಾಗುತ್ತದೆ. ವಿನಾಃಕಾರಣ ಬೀದಿ ಬದಿ ವ್ಯಾಪಾರಸ್ಥರನ್ನು ದಿಕ್ಕುತಪ್ಪಿಸುವ ಇಲ್ಲವೇ ಅವರನ್ನು ಪುನಃ ಬೆಂಕಿಯಿಂದ ಬಾಣಲೆಗೆ ತಳ್ಳುವುದು ಸರಿಯಲ್ಲ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *