ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 20, 2026
“ನೀಟ್ ಅಕ್ರಮ ಖಂಡಿಸಿ, ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಹೊಸದಿಲ್ಲಿಯ ಜಂತರ್-ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳು, ಯುವಕರು ಹಾಗೂ ಹೋರಾಟಗಾರರ ಮೇಲೆ ಮೋದಿ ನೇತೃತ್ವದ ಆರ್‌ಎಸ್‌ಎಸ್–ಹಿಂದೂತ್ವ ಸರ್ಕಾರವು ಪೊಲೀಸರ ಮೂಲಕ ನಡೆಸಿರುವ ಲಾಠಿ ಚಾರ್ಜ್ ಪ್ರಜಾಪ್ರಭುತ್ವದ ಹಕ್ಕುಗಳ ಮೇಲಿನ ನೇರ ದಾಳಿ” ಎಂದು ಸಿಪಿಐ(ಎಂಎಲ್) ರಾಜ್ಯ ಕಾರ್ಯದರ್ಶಿ ಗಂಗಾಧರ.ಎಂ ಖಂಡಿಸಿದ್ದಾರೆ.
ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, “ಜನರ ಪ್ರಶ್ನೆಗಳಿಗೆ ಉತ್ತರ ನೀಡಲು ವಿಫಲವಾಗಿರುವ ಕೇಂದ್ರ ಸರ್ಕಾರವು ಸಂವಾದದ ಬದಲಿಗೆ ದಮನವನ್ನು ಆಯ್ಕೆ ಮಾಡಿಕೊಂಡಿದೆ. ಲಾಠಿಚಾರ್ಜ್, ಬಂಧನ ಮತ್ತು ಬೆದರಿಕೆಗಳ ಮೂಲಕ ಜನರ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಇಂತಹ ಫ್ಯಾಸಿಸ್ಟ್ ದಮನವನ್ನು ದೇಶದ ಪ್ರಜಾಪ್ರಭುತ್ವವಾದಿ, ಪ್ರಗತಿಪರ ಹಾಗೂ ದುಡಿಯುವ ಜನತೆ ಒಗ್ಗಟ್ಟಿನಿಂದ ಸೋಲಿಸಬೇಕು” ಎಂದು ಕರೆ ನೀಡಿದ್ದಾರೆ.
“ದಮನಕಾರಿ ಘಟನೆಯ ನೈತಿಕ ಹೊಣೆಯನ್ನು ಹೊತ್ತು ಕೇಂದ್ರ ಶಿಕ್ಷಣ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು, ಬಂಧಿತರನ್ನು ತಕ್ಷಣ ಬಿಡುಗಡೆ ಮಾಡಬೇಕು, ಲಾಠಿ ಚಾರ್ಜ್ಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಪ್ರತಿಭಟನಾಕಾರರೊಂದಿಗೆ ತಕ್ಷಣ ಸಂವಾದ ನಡೆಸಬೇಕು ಎಂದು ಕೇಂದ್ರ ಸರ್ಕಾರವನ್ನು” ಗಂಗಾಧರ್ ಅವರು ಆಗ್ರಹಿಸಿದ್ದಾರೆ.
