ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 16, 2026
ಶಿಕ್ಷಣತಜ್ಞ ಹಾಗೂ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಹಾಗೂ ವಿದ್ಯಾರ್ಥಿ ಸಂಘಟನೆಗಳು ಹೊಸದಿಲ್ಲಿಯ ಜಂತರ್ ಮಂತರ್‌ನಲ್ಲಿ ಕಳೆದ 18 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಈ ಹೋರಾಟವನ್ನು ಬೆಂಬಲಿಸಿ ಜುಲೈ 17ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ತಹಸಿಲ್ ಕಾರ್ಯಾಲಯದ ಮುಂದೆ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕರಾದ ಚಂದ್ರಶೇಖರ ಗೊರಬಾಳ, ಡಿ.ಎಚ್.ಕಂಬಳಿ, ಎಸ್.ದೇವೇಂದ್ರಗೌಡ, ನಾಗರಾಜ ಪೂಜಾರ್, ಬಸವರಾಜ ಬಾದರ್ಲಿ ತಿಳಿಸಿದ್ದಾರೆ.
ಈ ಕುರಿತು ಗುರುವಾರ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಘಟಕರು, “ಕೇಂದ್ರ ಸರ್ಕಾರದ ಶಿಕ್ಷಣ ನೀತಿ, ಪದೇ ಪದೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳಿಗೆ ಆಗಿರುವ ತೊಂದರೆ ಹಾಗೂ ದೇಶದ ಶಿಕ್ಷಣ ವ್ಯವಸ್ಥೆಯ ಹಲವು ಲೋಪದೋಷಗಳನ್ನು ಖಂಡಿಸಿ ಮತ್ತು ನೈತಿಕ ಹೊಣೆ ಹೊತ್ತು ಕೇಂದ್ರ ಸರ್ಕಾರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ, ಸೋನಮ್ ವಾಂಗ್‌ಚುಕ್ ಮತ್ತು ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಗಳು ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದು, ಆದರೆ ಕೇಂದ್ರ ಸರ್ಕಾರ ಕನಿಷ್ಠ ಸೌಜನ್ಯಕ್ಕಾದರೂ ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತರ ಅಹವಾಲುಗಳನ್ನು ಆಲಿಸಿಲ್ಲ. ಇದು ಸರ್ವಾಧಿಕಾರಿ ಮತ್ತು ಫ್ಯಾಸಿಸ್ಟ್ ಸರ್ಕಾರದ ಶಿಕ್ಷಣ ಮತ್ತು ಜನವಿರೋಧಿ ನೀತಿಗೆ ಜ್ವಲಂತ ಸಾಕ್ಷಿಯಾಗಿದೆ. ಹಾಗಾಗಿ ಸರ್ಕಾರದ ಈ ಬೇಜವಾಬ್ದಾರಿಯನ್ನು ವಿರೋಧಿಸಿ, ಸಾರ್ವಜನಿಕ ಶಿಕ್ಷಣ ಬಲಪಡಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದ್ದು, ನಂತರ ತಹಸೀಲ್ದಾರ್ ಮೂಲಕ ರಾಷ್ಟçಪತಿಗಳಿಗೆ ಹಕ್ಕೊತ್ತಾಯಗಳ ಮನವಿಪತ್ರವನ್ನು ರವಾನಿಸಲಾಗುವುದು. ಈ ಹೋರಾಟದಲ್ಲಿ ರೈತರು, ಕಾರ್ಮಿಕರು, ವಿದ್ಯಾರ್ಥಿ ಯುವಜನರು, ಮಹಿಳೆಯರು ಹಾಗೂ ಪ್ರಜಾಸತ್ತಾತ್ಮಕ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ” ಅವರು ಮನವಿ ಮಾಡಿದ್ದಾರೆ.
