ಸಿಂಧನೂರು: ಕೃಷಿ ಹೊಂಡದಲ್ಲಿ ಕಾಲುಜಾರಿ ಬಿದ್ದು ಉಮಲೂಟಿಯ ಯುವ ವಕೀಲ ದಾರುಣ ಸಾವು

Spread the love

ಲೋಕಲ್ ನ್ಯೂಸ್
ನಮ್ಮ ಸಿಂಧನೂರು, ಜುಲೈ 16, 2026

ತಾಲ್ಲೂಕಿನ ಉಮಲೂಟಿ ಗ್ರಾಮದ ಕೃಷಿಹೊಂಡದಲ್ಲಿ ಕಾಲುಜಾರಿ ಬಿದ್ದು ಯುವ ವಕೀಲರೊಬ್ಬರು ಮೃತಪಟ್ಟ ದಾರುಣ ಘಟನೆ ದಿನಾಂಕ: 15-07-2026ರಂದು ನಡೆದಿದೆ. ಅನೀಪ ಬೀರಮಲ್ಲಪ್ಪ ನಾಯ್ಕರ (30) ಮೃತಪಟ್ಟ ವಕೀಲರಾಗಿದ್ದಾರೆ.
ಗ್ರಾಮದ ಕೃಷಿ ಹೊಂಡವೊಂದರಲ್ಲಿ ಕುರಿಗಳಿಗೆ ಮೈ ತೊಳೆಯಲು ಹೋದ ವೇಳೆ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾರೆಂದು ಹೇಳಲಾಗಿದ್ದು, ಹೊಂಡದ ಹುದುಲಿನಲ್ಲಿ ಸಿಲುಕಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಈ ಕುರಿತು ಗ್ರಾಮಸ್ಥರಿಗೆ ಮಾಹಿತಿ ಗೊತ್ತಾಗಿ ಮೃತ ಅನೀಪ ಅವರ ಕಳೇಬರವನ್ನು ಹೊಂಡದಿಂದ ಗ್ರಾಮಸ್ಥರು ಹೊರ ತೆಗೆದಿದ್ದಾರೆ.
ಮುಗಿಲು ಮುಟ್ಟಿದ ಕುಟುಂಬದವರ ಆಕ್ರಂದನ
ಉಮಲೂಟಿಯ ಯುವ ವಕೀಲ ಅನೀಪ ಅವರು ಕಳೆದ ಮೇ 2026ರಲ್ಲಿ ವಿವಾಹವಾಗಿದ್ದರು. ಯುವ ವಕೀಲ ಅನೀಪ ಅವರು ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು. ಇಡೀ ಗ್ರಾಮದಲ್ಲಿ ಗುರುವಾರ ಸ್ಮಶಾನ ಮೌನ ಕಂಡುಬಂತು.
ಪ್ರಕರಣ ದಾಖಲು
ಘಟನಾ ಸ್ಥಳಕ್ಕೆ ತುರ್ವಿಹಾಳ ಪೊಲೀಸ್ ಠಾಣೆಯ ಪಿಎಸ್‌ಐ ಸುಜಾತಾ ಅವರು ಬುಧವಾರ ಭೇಟಿ ನೀಡಿದ್ದಾರೆ. ಮೃತ ದೇಹವನ್ನು ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ಕೈಗೊಳ್ಳಲಾಗಿದೆ. ಈ ಬಗ್ಗೆ ಮೃತರ ತಂದೆ ಬೀರಮಲ್ಲಪ್ಪ ನಾಯ್ಕರ ಅವರ ದೂರು ಆಧರಿಸಿ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


Spread the love

Leave a Reply

Your email address will not be published. Required fields are marked *