ಸಿಂಧನೂರು : ಸಿಎಂ ಡಿ.ಕೆ.ಶಿವಕುಮಾರರನ್ನು ಭೇಟಿಯಾದ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ : ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 12, 2026

ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹಿರಿಯ ರೈತ ಮುಖಂಡರಾದ ಹನುಮನಗೌಡ ಬೆಳಗುರ್ಕಿ ಅವರು, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರೊಂದಿಗೆ ಸಿಎಂ ಡಿ.ಕೆ.ಶಿವಕುಮಾರ ಅವರನ್ನು ಇತ್ತೀಚಿಗೆ ಭೇಟಿಯಾಗಿರುವುದು ತಾಲ್ಲೂಕಿನ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಕಚೇರಿ ಕುಮಾರಕೃಪಾದಲ್ಲಿ ಸಿಎಂ ಡಿ.ಕೆ.ಶಿವಕುಮಾರ ಅವರನ್ನು ಭೇಟಿಯಾಗಿರುವ ಹನುಮನಗೌಡ ಬೆಳಗುರ್ಕಿ ಅವರು ನೂತನ ಸಿಎಂ ಅವರನ್ನು ಅಭಿನಂದಿಸಿದ್ದಾರೆ. ಈ ವೇಳೆ ವಿಧಾನ ಪರಿಷತ್ ಸದಸ್ಯ ಹಾಗೂ ಸಿಎಂ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬಸನಗೌಡ ಬಾದರ್ಲಿ ಅವರು ಸೇರಿದಂತೆ ಇನ್ನಿತರರು ಇದ್ದರೆಂದು ತಿಳಿದುಬಂದಿದೆ.
ಪ್ರಭಾವಿ ಹಿರಿಯ ನಾಯಕ
ಪ್ರೊ.ನಂಜುಂಡಸ್ವಾಮಿಯವರ ಅತ್ಯಾಪ್ತ ಒಡನಾಡಿಯಾಗಿದ್ದ ಹಿರಿಯ ರೈತ ಮುಖಂಡ ಹನುಮನಗೌಡ ಬೆಳಗುರ್ಕಿ ಅವರು ರಾಜ್ಯಮಟ್ಟದಲ್ಲಿ ರೈತ ಚಳವಳಿಯ ಮೂಲಕ ಗುರುತಿಸಿಕೊಂಡಿದ್ದಾರೆ. 1992 ರಿಂದ 1996ರ ವರೆಗೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, 2014 ರಿಂದ 2017 ರವರೆಗೆ ಕರ್ನಾಟಕ ಕೃಷಿ ಬೆಲೆ ಆಯೋಗದ ಸದಸ್ಯರಾಗಿ, 2019ರಿಂದ 2022ರವರೆಗೆ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಕೃಷಿ ತಜ್ಞರಾಗಿ 8ಕ್ಕೂ ಹೆಚ್ಚು ವರದಿಗಳನ್ನು ಸಿಎಂ ಅವರಿಗೆ ಸಲ್ಲಿಸಿರುವ ಅವರು, ಹಲವು ವರದಿಗಳು ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸುವ ಮೂಲಕ ಸರ್ಕಾರಗಳು ರೈತರ ಬಗೆಗೆ ಯೋಜನೆಗಳನ್ನು ರೂಪಿಸಲು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅಲ್ಲದೇ ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತ ಮುಖಂಡರು, ಕಾರ್ಯಕರ್ತರಲ್ಲಿ ಪ್ರಭಾವವನ್ನು ಹೊಂದಿದ್ದಾರೆ.
ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೊನ್ನಗೌಡ ಬೆಳಗುರ್ಕಿ ಅವರು, ಹನುಮನಗೌಡ ಬೆಳಗುರ್ಕಿ ಅವರ ಸಹೋದರರಾಗಿದ್ದು, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಹನುಮನಗೌಡ ಬೆಳಗುರ್ಕಿ ಅವರು ಸಿಎಂ ಅವರನ್ನು ಭೇಟಿಯಾಗಿರುವುದು ರಾಜಕೀಯ ಪಡಸಾಲೆಯಲ್ಲಿ ವ್ಯಾಪಕ ಚರ್ಚೆಗೆ ಈಡುಮಾಡಿದೆ.
ಎಮ್ಮೆಲ್ಲೆ ಚುನಾವಣೆಗೆ ಮುನ್ನವೇ ತಾಲೀಮು !?
ಮುಂಬರುವ ವಿಧಾನಸಭೆ ಚುನಾವಣೆಯ ದೃಷ್ಟಿಯನ್ನಿಟ್ಟುಕೊಂಡು, ಈಗಿನಿಂದಲೇ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರು ಹಲವು ಹಿರಿಯ ನಾಯಕರನ್ನು ಭೇಟಿ ಮಾಡುತ್ತಿದ್ದು, ವಿಶ್ವಾಸ ಗಳಿಸಲು ಮುಂದಾಗಿದ್ದಾರೆ. ಅಲ್ಲದೇ ವಿವಿಧ ಪಕ್ಷಗಳ ಕಿರಿಯ ನಾಯಕರು ಹಾಗೂ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ತಾಲೀಮು ನಡೆಸುತ್ತಿದ್ದಾರೆನ್ನುವ ಮಾತುಗಳು ಕೇಳಿಬಂದಿವೆ.


Spread the love

Leave a Reply

Your email address will not be published. Required fields are marked *