ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 9, 2026
“ತಾಲ್ಲೂಕಿನಲ್ಲಿ ಡ್ರಗ್ಸ್, ಗಾಂಜಾ ಹಾಗೂ ಅಕ್ರಮ ಮದ್ಯ ಮಾರಾಟದ ಹಾವಳಿ ಹೆಚ್ಚಿದೆ” ಎಂದು ಜೂನ್ 28, 2026ರಂದು ವಿಧಾನ ಪರಿಷತ್ ಸದಸ್ಯರಾದ ಬಸನಗೌಡ ಬಾದರ್ಲಿ ಅವರು ಆರೋಪಿಸಿದ ಬೆನ್ನಲ್ಲೇ, ಪೊಲೀಸ್ ಇಲಾಖೆಯಿಂದ ಚುರುಕಿನ ಕಾರ್ಯಾಚರಣೆ ನಡೆಯುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
“ತಾಲ್ಲೂಕಿನಲ್ಲಿ ಹೆಚ್ಚಿರುವ ಡ್ರಗ್ಸ್, ಗಾಂಜಾ ಹಾಗೂ ಮದ್ಯದ ಹಾವಳಿ ತಡೆಗೆ ಬಸನಗೌಡ ಬಾದರ್ಲಿ ಫೌಂಡೇಶನ್ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಜುಲೈ 13ರಿಂದ 31ರವರೆಗೆ ನಗರ ಸೇರಿ ತಾಲ್ಲೂಕಿನ ವಿವಿಧ ಕಾಲೇಜುಗಳಲ್ಲಿ ಡ್ರಗ್ಸ್ ಮುಕ್ತ ಅಭಿಯಾನ ಹಮ್ಮಿಕೊಂಡಿದ್ದು, ಡ್ರಗ್ಸ್ ಮುಕ್ತ ಸಿಂಧನೂರು ತಾಲ್ಲೂಕು ನಿರ್ಮಾಣಕ್ಕಾಗಿ ಆಗಸ್ಟ್ 10ರಂದು ಮ್ಯಾರಾಥಾನ್ ಕೈಗೊಂಡು, ಬಹಿರಂಗ ಸಭೆ ಆಯೋಜಿಸಲಾಗುವುದು” ಎಂದು ಆಯೋಜಕರು ಈಗಾಗಲೇ ಘೋಷಿಸಿದ್ದು, ಈ ಕುರಿತು ಚರ್ಚೆ ಬಿರುಸು ಪಡೆದುಕೊಂಡಿದೆ.
ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ಪ್ರಕರಣಗಳು
ರಾಯಚೂರು ಜಿಲ್ಲೆಯಲ್ಲೇ ನಗರ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಶೈಕ್ಷಣಿಕ ಹಬ್ ಆಗಿದೆ. ಹೆಚ್ಚು ಶಿಕ್ಷಣ ಸಂಸ್ಥೆಗಳು ಇಲ್ಲಿರುವುದರಿಂದ ವಿದ್ಯಾಥಿ, ವಿದ್ಯಾರ್ಥಿನಿಯರ ಸಂಖ್ಯೆ ಜಾಸ್ತಿಯಿದೆ. ಹೀಗಾಗಿ ಮಾದಕ ವಸ್ತು ಮಾರಾಟ ಮಾಡುವ ಪೆಡ್ಲರ್‌ಗಳು ಮುಗ್ದ ಯುವಕರು, ವಿದ್ಯಾರ್ಥಿಗಳನ್ನು ಪುಸಲಾಯಿಸಿ ದುಶ್ಚಟಕ್ಕೀಡು ಮಾಡುತ್ತಿದ್ದಾರೆಂಬ ಆರೋಪ ಇದೆ. ನಗರ ವ್ಯಾಪ್ತಿಯಲ್ಲಿ ಕಳೆದ ಜನವರಿ 2026ರಿಂದ ಫೆಬ್ರವರಿ24, 2026ರ ಅವಧಿಯಲ್ಲಿ ಗಾಂಜಾ ಹಾಗೂ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟದ 15 ಪ್ರಕರಣಗಳು ದಾಖಲಾಗಿದ್ದವು. ಪ್ರಸ್ತುತವಾಗಿ ಆ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಿದೆ ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತವಾಗಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಶಾಸಕರಿಗೆ ಮನವಿ
ನಗರದಲ್ಲಿ ಹೆಚ್ಚುತ್ತಿರುವ ಗಾಂಜಾ ಮತ್ತು ಮಾದಕ ವಸ್ತುಗಳ ಹಾವಳಿಯಿಂದ ವಿದ್ಯಾರ್ಥಿ/ಯುವಜನರು ದುಶ್ಚಟಕ್ಕೆ ಒಳಗಾಗಿದ್ದು, ಇದನ್ನು ತಡೆಯಲು ಪೊಲೀಸ್, ಅಬಕಾರಿ ಸೇರಿದಂತೆ ವಿವಿಧ ಇಲಾಖೆಗಳನ್ನೊಳಗೊಂಡ ಸಭೆ ಕರೆದು ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಬೇಕೆಂದು ಒತ್ತಾಯಿಸಿ ದಿನಾಂಕ: 24-12-2025ರಂದು ಮಾದಕ ದ್ರವ್ಯ ನಿರ್ಮೂಲನಾ ಒಕ್ಕೂಟದಿಂದ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಮನವಿಪತ್ರ ಸಲ್ಲಿಸಲಾಗಿತ್ತು. ತದನಂತರ ಕಠಿಣ ಕ್ರಮಕ್ಕೆ ಮುಂದಾಗಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಕಾಣದ ಕೈಗಳು ?
ಗಾಂಜಾ ಹಾಗೂ ಮಾದಕ ವಸ್ತುಗಳ ಮಾರಾಟದ ಹಿಂದೆ ಕೆಲ ಕಾಣದ ಕೈಗಳು ಇದ್ದು, ಯಾವುದೇ ಪ್ರಭಾವ, ಒತ್ತಡಕ್ಕೆ ಮಣಿಯದೇ ಪೊಲೀಸ್ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ, ಅಂತವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವ ಮೂಲಕ ವಿದ್ಯಾರ್ಥಿ, ಯುವಜನರು ದುಶ್ಚಟಕ್ಕೆ ಬಲಿಯಾಗದಂತೆ ತಡೆಯಬೇಕೆನ್ನುವ ಕೂಗು ವ್ಯಕ್ತವಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟದ ಹಾವಳಿ
ತಾಲ್ಲೂಕಿನ ಹಳ್ಳಿ ಹಳ್ಳಿಗಳಿಗೂ ಅಕ್ರಮ ಮದ್ಯ ಸಾಗಣೆಯಾಗುತ್ತಿದೆ ಮತ್ತು ವ್ಯಾಪಕವಾಗಿ ಮಾರಾಟವಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದ ಯುವಕರು, ಮಧ್ಯ ವಯಸ್ಕರು ಸೇರಿದಂತೆ ಹಲವು ವಯೋಮಾನದವರು ಮದ್ಯವ್ಯಸನಿಗಳಾಗಿದ್ದಾರೆ. ಅಕ್ರಮ ಮದ್ಯಕ್ಕೆ ಕಡಿವಾಣ ಹಾಕದೇ ಹೋದರೆ ಹಳ್ಳಿಗಳಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವುದರಲ್ಲಿ ಎರಡು ಮಾತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಪೊಲೀಸರು ಭೇದಿಸಿದ ಹಲವು ಪ್ರಕರಣಗಳು
- ಸಿಂಧನೂರು ತಾಲ್ಲೂಕಿನ ಕೆ.ಹಂಚಿನಾಳ ಗ್ರಾಮದಲ್ಲಿ ಅಕ್ರಮವಾಗಿ ಬೆಳೆದಿದ್ದ 66 ಸಾವಿರ ಮೌಲ್ಯದ ಗಾಂಜಾ ಗಿಡಗಳನ್ನು ಕಾರ್ಯಾಚರಣೆ ನಡೆಸಿದ ತುರ್ವಿಹಾಳ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದರು.
- ದಿನಾಂಕ:29-11-2025 ಹಾಗೂ ದಿ.30-11-2025 ರಂದು ಪ್ರತ್ಯೇಕ ಗಾಂಜಾ ಪ್ರಕರಣಗಳಲ್ಲಿ ನಗರ ಪೊಲೀಸ್ ಠಾಣೆ ಸಿಬ್ಬಂದಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ದಾಳಿ ನಡೆಸಿ, 5 ಜನ ಆರೋಪಿಗಳನ್ನು ಬಂಧಿಸುವ ಮೂಲಕ ನ್ಯಾಯಾಂಗ ವಶಕ್ಕೆ ಒಪ್ಪಿಸಿದ ಘಟನೆ ನಡೆದಿತ್ತು
- ಕಳೆದ ಜೂನ್ 21, 2026ರಂದು ತಾಲ್ಲೂಕಿನ ಆರ್‌ಎಚ್ ಕ್ಯಾಂಪ್ ನಂ 1 ಮತ್ತು 3ರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸುಳಿವು ಹಿಡಿದು 4 ಜನ ಆರೋಪಿಗಳನ್ನು ಬಂಧಿಸಿ 3,09,000 ಮೌಲ್ಯದ 3.90 ಕೆ.ಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ
- ಗಾಂಜಾ ಸಾಗಣೆ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ರೂ. 20,07,400 ಬೆಲೆಬಾಳುವ ಒಣ ಗಾಂಜಾ ಹಾಗೂ ಬೈಕ್‌ವೊಂದನ್ನು ಬಳಗಾನೂರು ಠಾಣೆ ಪೊಲೀಸರು ದಿನಾಂಕ: 06-07-2026ರಂದು ಜಪ್ತಿ ಮಾಡಿಕೊಂಡಿದ್ದಾರೆ.

