ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 6, 2026
ನಗರದಲ್ಲಿ ಮೇಲಿಂದ ಮೇಲೆ ವಿದ್ಯುತ್ ಕಡಿತವಾಗುತ್ತಿದ್ದು ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಬೆಳಿಗ್ಗೆಯಿಂದಲೇ ಹತ್ತಾರು ಬಾರಿ ವಿದ್ಯುತ್ ವ್ಯತ್ಯಯವಾಗುತ್ತಿರುವುದರಿಂದ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
‘ಜನರೇಟರ್ ಆಫ್-ಆನ್ ಮಾಡಿ ಸಾಕಾಗಿದೆ’
“ಇವತ್ತು ಬೆಳಿಗ್ಗೆಯಿಂದಲೇ ಮರ‍್ನಾಲ್ಕು ಬಾರಿ ಪವರ್ ಕಟ್ ಆಗಿದೆ. ಈಗಾಗಿ ಅಂಗಡಿಯ ಜನರೇಟರ್ ಆಫ್-ಆನ್ ಮಾಡಿ ಸಾಕಾಗಿ ಹೋಗಿದೆ. ಕಳೆದೊಂದು ತಿಂಗಳಿನಿAದ ಇದೇ ಪರಿಸ್ಥಿತಿಯಾಗಿದೆ. ಇನ್ನೂ ಸಂಜೆಯ ಒಳಗೆ ಮರ‍್ನಾಲ್ಕು ಬಾರಿ ಕರೆಂಟ್ ಕೈಕೊಡುತ್ತದೆ. ಈ ಬಗ್ಗೆ ಜೆಸ್ಕಾಂ ಸಿಬ್ಬಂದಿಗೆ ಹೇಳಿದರೆ ಗಾಳಿ ನೆಪ ಹೇಳುತ್ತಾರೆ.” ಎಂದು ನಗರದ ರಾಯಚೂರು ಮಾರ್ಗದಲ್ಲಿರುವ ವಾಣಿಜ್ಯ ಅಂಗಡಿಯೊಂದರ ವ್ಯಾಪಾರಸ್ಥರೊಬ್ಬರು ದೂರುತ್ತಾರೆ.
“ಎಲೆಕ್ಟ್ರಾನಿಕ್ ಉಪಕರಣಗಳು ಹಾಳು”
“ಕೆಲ ದಿನಗಳಿಂದ ವಿದ್ಯುತ್ ಮೇಲಿಂದ ಮೇಲೆ ಹೋಗಿ ಬರುತ್ತಿರುವುದರಿಂದ ಮನೆಯಲ್ಲಿನ ಬಲ್ಬ್ಗಳು, ಕೆಲ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣಗಳು ಹಾಳಾಗುತ್ತಿವೆ. ಇನ್ನೂ ಪ್ರೀಡ್ಜ್ ಸೇರಿದಂತೆ ಇನ್ನಿತರೆ ವಸ್ತುಗಳು ರಿಪೇರಿಗೆ ಬರುತ್ತಿವೆ. ಎಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗುತ್ತದೆಯೋ ಎಂಬ ಭಯ ಕಾಡುತ್ತಿದೆ. ವಿದ್ಯುತ್ ಘಟಕದಲ್ಲಿ ಯಾವುದೇ ರೀತಿಯ ಸಮಸ್ಯೆಯಿದ್ದರೆ ಮುಂಚಿತವಾಗಿಯೇ ಸಾರ್ವಜನಿಕ ಪ್ರಕಟಣೆಯ ಮೂಲಕ ಸೂಚನೆ ನೀಡಿ, ದುರಸ್ತಿ ಕೆಲಸ ಮಾಡಲಿ. ಅದುಬಿಟ್ಟು ಪದೇ ಪದೆ ವಿದ್ಯುತ್ ಕಡಿತ ಮಾಡುವುದರಿಂದ ಉಂಟಾಗುವ ಹಾನಿಗೆ ಯಾರು ಹೊಣೆ” ಎಂದು ನಗರದ ನಾಗರಿಕರೊಬ್ಬರು ಪ್ರಶ್ನಿಸುತ್ತಾರೆ.
“ಗಾಳಿ ನೆಪ, ಪವರ್ ಕಟ್ ಖಾಯಂ”
“ಇತ್ತೀಚಿಗೆ ಪವರ್ ಕಟ್ ಸಮಸ್ಯೆ ಸಾಮಾನ್ಯವಾಗಿದೆ. ಯುಪಿಎಸ್ ಬ್ಯಾಕ್ ಅಪ್ ಹೆಚ್ಚು ಸಮಯ ಬರುವುದಿಲ್ಲ, ಕೇವಲ ಬಲ್ಬ್ ಬೆಳಕಿಗೆ ಸೀಮಿತವಾಗಿದೆ. ಒಂದು ವೇಳೆ ಫ್ಯಾನ್ ಹಚ್ಚಿದರೆ ಬೇಗನೆ ಬ್ಯಾಕ್ ಅಪ್ ಖಾಲಿಯಾಗುತ್ತದೆ. ಇನ್ನೂ ಪರ್ಯಾಯ ವ್ಯವಸ್ಥೆ ಇಲ್ಲದ ಬಡ, ಮಧ್ಯಮ ವರ್ಗದ ಕುಟುಂಬಗಳು ರಾತ್ರಿ ವೇಳೆ ಕತ್ತಲಲ್ಲೇ ಜೀವನ ಕಳೆಯುವಂತಾಗಿದೆ. ಕೆಲವೊಂದು ಬಾರಿ ಊಟ ಮಾಡುವ ಸಂದರ್ಭದಲ್ಲಿ ವಿದ್ಯುತ್ ಕೈಕೊಡುವುದರಿಂದ ಮೊಬೈಲ್ ಟಾರ್ಚ್ ಅವಲಂಬಿಸುವಂತಾಗಿದೆ” ಎಂದು ಗ್ರಾಹಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಆಸ್ಪತ್ರೆಗಳಿಗೆ ಸಮಸ್ಯೆ
“ಪದೇ ಪದೆ ವಿದ್ಯುತ್ ಕೈಕೊಡುವುದರಿಂದ ನಗರದ ತಹಸಿಲ್ ಕಾರ್ಯಾಲಯದ ಪಕ್ಕದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ, ಆದರ್ಶ ಕಾಲೋನಿ ವ್ಯಾಪ್ತಿಯಲ್ಲಿರುವ ಬಹಳಷ್ಟು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಸಮಸ್ಯೆಯಾಗಿದೆ. ವಿದ್ಯುತ್ ಹೋಗಿ ಬರುವುದು ಮಾಡುವುದರಿಂದ ಕೆಲವೊಂದು ಬಾರಿ ಜನರೇಟರ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ವೈದ್ಯರು, ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಗೊಂದಲಕ್ಕೀಡಾಗುತ್ತಿದ್ದಾರೆ” ಎಂದು ನಾಗರಿರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
