ಸಿಂಧನೂರು: ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಉಪನ್ಯಾಸಕರ ಕೊರತೆ, 332 ವಿದ್ಯಾರ್ಥಿಗಳಿಗೆ ನಾಲ್ವರೇ ಉಪನ್ಯಾಸಕರು !

Spread the love

ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು ಜುಲೈ 2, 2026

ನಗರದ ಪಿಡಬ್ಲ್ಯುಡಿ ಕ್ಯಾಂಪಿನ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ 550ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಪನ್ಯಾಸಕರಿಲ್ಲ. ಅದರಲ್ಲೂ ವಿಜ್ಞಾನ ವಿಭಾಗದಲ್ಲಿ ಬರೋಬ್ಬರಿ 332ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಕೇವಲ 4 ಉಪನ್ಯಾಸಕರು ಪಾಠ ಬೋಧನೆಗೆ ದಿನವೂ ಹರಸಾಹಸ ಪಡುತ್ತಿದ್ದಾರೆ.
2025-26ನೇ ಸಾಲಿನಲ್ಲಿ ಈ ಕಾಲೇಜಿನ ವಿವಿಧ ವಿಭಾಗದ ದ್ವಿತೀಯ ಪಿಯಸಿ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ಪಾಸಾದ ಹಿನ್ನೆಲೆಯಲ್ಲಿ, ಪ್ರಸ್ತುತ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಹೆಚ್ಚು ವಿದ್ಯಾರ್ಥಿಗಳು ಪ್ರವೇಶಾವಕಾಶ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಉಪನ್ಯಾಸಕರನ್ನು ನೇಮಕ ಮಾಡದೇ ಇರುವುದರಿಂದ ಪಠ್ಯ ಹಾಗೂ ಲ್ಯಾಬ್ (ಪ್ರಯೋಗಾಲಯ) ಚಟುವಟಿಕೆಗಳನ್ನು ನಿಗದಿಯಂತೆ ಕೈಗೊಳ್ಳಲು ಉಪನ್ಯಾಸಕರಿಗೆ ಹೊರೆಯಾಗಿದ್ದು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಬಡ ಮತ್ತು ಮಧ್ಯ ವರ್ಗದ ಮಕ್ಕಳ ನೆಚ್ಚಿನ ಕಾಲೇಜ್
ಖಾಸಗಿ ಕಾಲೇಜುಗಳಲ್ಲಿ ಹೆಚ್ಚಿನ ಶುಲ್ಕ ಪಾವತಿಸಿ ಅಭ್ಯಾಸ ಮಾಡಲಾಗದ ಬಡ ಮತ್ತು ಮಧ್ಯಮ ವರ್ಗದ ಬಹಳಷ್ಟು ವಿದ್ಯಾರ್ಥಿಗಳಿಗೆ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಶೈಕ್ಷಣಿಕವಾಗಿ ಆಧಾರಸ್ತಂಭವಾಗಿದೆ. ಆದರೆ ಈ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಡಕಾಗಿದೆ.
ಉಪನ್ಯಾಸಕರ ಕೊರತೆ, ಬೋಧನೆಗೆ ತೊಡಕು
ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಪ್ರಥಮ ಪಿಯುಸಿ 208, ದ್ವಿತೀಯ ಪಿಯುಸಿ 124 ಒಟ್ಟು 332, ಕಲಾ 120 ಹಾಗೂ ವಾಣಿಜ್ಯ ವಿಭಾಗದಲ್ಲಿ 85 ವಿದ್ಯಾರ್ಥಿಗಳು ಕಲಿಯುತ್ತಾರೆ. ವಿಜ್ಞಾನ ವಿಭಾಗ ಮತ್ತು ಕಲಾ ವಿಭಾಗದಲ್ಲಿ ಉಪನ್ಯಾಸಕರ ಕೊರತೆ ಉಂಟಾಗಿದೆ.
ವಿಜ್ಞಾನ ವಿಭಾಗಕ್ಕೆ 2 ಸೆಕ್ಷನ್, 4 ಉಪನ್ಯಾಸಕರು ಅವಶ್ಯಕ
“ವಿಜ್ಞಾನ ವಿಭಾಗಕ್ಕೆ ಪ್ರಸಕ್ತ ಸಾಲಿನಲ್ಲಿ 208 ವಿದ್ಯಾರ್ಥಿಗಳು ನೋಂದಣಿ ಪಡೆದುಕೊಂಡಿದ್ದಾರೆ. 170ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಿನವೂ ತರಗತಿಗಳಿಗೆ ಹಾಜರಾಗುತ್ತಾರೆ. ಇಷ್ಟು ವಿದ್ಯಾರ್ಥಿಗಳಿಗೆ ಒಂದೇ ಬಾರಿಗೆ ಕ್ಲಾಸ್ ಮಾಡಲಾಗುತ್ತಿದ್ದು, ಎರಡು ಸೆಕ್ಷನ್ ಆದರೆ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಾಧ್ಯ. ಈಗ ಸದ್ಯ ಕೇವಲ ಇಬ್ಬರು ಖಾಯಂ ಹಾಗೂ ಇಬ್ಬರು ಅತಿಥಿಗಳು ಸೇರಿ ಒಟ್ಟು ನಾಲ್ಕು ಜನ ಉಪನ್ಯಾಸಕರಿದ್ದು, ಆದಷ್ಟು ಬೇಗ ಹೆಚ್ಚುವರಿ ಉಪನ್ಯಾಸಕರನ್ನು ನೇಮಕ ಮಾಡಬೇಕು” ಎಂದು ವಿದ್ಯಾರ್ಥಿ ಪಾಲಕರೊಬ್ಬರು ಒತ್ತಾಯಿಸಿದ್ದಾರೆ.
ಕಲಾ ವಿಭಾಗದ ವಿದ್ಯಾರ್ಥಿಗಳ ಗೋಳು
“ಕಲಾ ವಿಭಾಗಕ್ಕೆ ಒಬ್ಬರೇ ಸಮಾಜಶಾಸ್ತç ಉಪನ್ಯಾಸಕರಿದ್ದು, ಆದರೆ ಅವರನ್ನೂ ಸಹ 3 ದಿನ ಅಂಬಾಮಠದ ಕಾಲೇಜಿಗೆ ಎರವಲು ಸೇವೆಗೆ ನಿಯೋಜಿಸಲಾಗಿದೆ. ಇದರಿಂದ ಪಠ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಸಮಸ್ಯೆಯಾಗಿದೆ. ಪ್ರಥಮ ಮತ್ತು ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 120 ವಿದ್ಯಾರ್ಥಿಗಳಿದ್ದು, ಅವರಿಗೆ ಪಾಠ ಬೋಧನೆ ಜೊತೆಗೆ ಗ್ರಾಮೀಣ ಪ್ರದೇಶದ ಇನ್ನೊಂದು ಕಾಲೇಜಿಗೆ ಬೋಧಿಸಲು ಉಪನ್ಯಾಸಕರು ಅಲೆದಾಡುವಂತಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಮಸ್ಯೆಯಾಗಿದೆ. ಹಾಗಾಗಿ ಸಮಾಜಶಾಸ್ತ್ರ ಉಪನ್ಯಾಸಕರನ್ನು ಪ್ರಸ್ತುತ ಕಾಲೇಜಿನಲ್ಲೇ ಉಳಿಸಿ, ಅಂಬಾಮಠ ಕಾಲೇಜಿಗೆ ಬೇರೊಬ್ಬ ಅತಿಥಿ ಉಪನ್ಯಾಸಕರನ್ನು ನೇಮಿಸಿ ಸಮಸ್ಯೆ ಪರಿಹರಿಸಬೇಕೆಂದು ವಿದ್ಯಾರ್ಥಿ ಪಾಲಕರೊಬ್ಬರು” ಮನವಿ ಮಾಡಿದ್ದಾರೆ.
ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಮೀನಮೇಷ ಯಾಕೆ ?
“ವರ್ಷದಿಂದ ವರ್ಷಕ್ಕೆ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿರುವುದರಿಂದ ಇತ್ತೀಚಿಗೆ ದಿನಗಳಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಚಾರಾಂದೋಲನ ಶುರುಮಾಡಿದೆ. ಆದರೆ ಸರಕಾರಿ ಪದವಿ ಪೂರ್ವ ಬಾಲಕರ ಕಾಲೇಜಿಗೆ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆದರೂ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಪನ್ಯಾಸಕರು ಹಾಗೂ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸದೇ ಇರುವುದು ಯಾಕೆ ?. ಪ್ರಚಾರಾಂದೋಲನ ಕೇವಲ ನೆಪಕ್ಕೆ ಮಾತ್ರವೇ ?” ಎಂದು ವಿದ್ಯಾರ್ಥಿ ಪಾಲಕರೊಬ್ಬರು ಪ್ರಶ್ನಿಸಿದ್ದಾರೆ.
“ಶಾಸಕರು, ವಿಧಾನ ಪರಿಷತ್ ಸದಸ್ಯರು ಕಾಲೇಜಿನ ಬಗ್ಗೆ ಗಮನಹರಿಸಲಿ”
ಕಳೆದ ಕೆಲವು ದಿನಗಳಿಂದ ಕಾಲೇಜು ತರಗತಿಗಳು ಆರಂಭವಾಗಿದ್ದು, ಆದಷ್ಟು ಶೀಘ್ರ ಸ್ಥಳೀಯ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನ ಸೆಳೆದು ವಿಜ್ಞಾನ ವಿಭಾಗಕ್ಕೆ ಇನ್ನೂ 4 ಜನ ಉಪನ್ಯಾಸಕರನ್ನು ನೇಮಿಸಬೇಕು ಹಾಗೂ ಕಲಾ ವಿಭಾಗದ ಸಮಾಜಶಾಸ್ತç ಉಪನ್ಯಾಸಕರನ್ನು ಬೇರೆ ಕಾಲೇಜಿಗೆ ಎರವಲು ಸೇವೆಗೆ ನಿಯೋಜಿಸಿರುವುದನ್ನು ರದ್ದುಪಡಿಸಬೇಕು ಹಾಗೂ ಕಾಲೇಜಿಗೆ ಅವಶ್ಯವಿರುವ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ವಿದ್ಯಾರ್ಥಿ ಪಾಲಕರು ಆಗ್ರಹಿಸಿದ್ದಾರೆ.


Spread the love

Leave a Reply

Your email address will not be published. Required fields are marked *