ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು / ಮಸ್ಕಿ ಜೂನ್ 29, 2026
ಮಸ್ಕಿ ತಾಲ್ಲೂಕಿನ ಗುಡದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಸಮಕಲ್ ಗ್ರಾಮದ ಕುಡಿವ ನೀರಿನ ಕೆರೆ ಕಳೆದ ಮರ‍್ನಾಲ್ಕು ದಿನಗಳಿಂದ ತಳಕಂಡಿದೆ. ಇದರಿಂದ 4 ಗ್ರಾಮ ಸೇರಿ 2 ಕ್ಯಾಂಪ್‌ಗಳ ಹತ್ತಾರು ಸಾವಿರ ಜನ ಹಾಗೂ ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗ್ರಾಮದ ಕೆರೆಯಿಂದ ಗುಡದೂರು, ಹಸಮಕಲ್, ರಂಗಾಪುರ, ಪಾಂಡುರಂಗಕ್ಯಾಂಪ್, ಮುದ್ದಾಪುರ ಹಾಗೂ ಮಲ್ಲಿಕಾರ್ಜುನ ಕ್ಯಾಂಪ್‌ಗಳಿಗೆ ನೀರು ಸರಬರಾಜು ವ್ಯವಸ್ಥೆ ಇದ್ದು, ಕೆರೆ ನೀರು ಖಾಲಿಯಾಗಿರುವುದರಿಂದ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಈ ನಾಲ್ಕು ಗ್ರಾಮ ಹಾಗೂ ಕ್ಯಾಂಪ್‌ಗಳಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಿದ್ದು, ದಿನವೂ ಅವುಗಳಿಗೆ ಎರಡು ಬಾರಿ ಇರಲಿ ಒಂದು ಬಾರಿ ನೀರು ಕುಡಿಸುವುದು ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ವಾಂತಿ-ಭೇದಿ ಪ್ರಕರಣ ಸಂಭವ ಸಾಧ್ಯತೆ ?:
ಕೆರೆ ಬತ್ತಿ ಪರ್ಯಾಯ ನೀರಿನ ಮೂಲಗಳ ಕೊರತೆಯಿಂದ ಸಮಸ್ಯೆ ಎದುರಿಸುತ್ತಿರುವ ಈ ಗ್ರಾಮಸ್ಥರು ಅಲ್ಲಲ್ಲಿ ಫ್ಲೋರೈಡ್, ಲವಣಾಂಶವುಳ್ಳ ನೀರನ್ನು ಕುಡಿಯುತ್ತಿದ್ದು, ವಾಂತಿಭೇದಿ ಪ್ರಕರಣಗಳು ಸಂಭವಿಸುವ ಸಾಧ್ಯತೆ ಇದೆ. ಜಿಲ್ಲಾ ಮತ್ತು ತಾಲ್ಲೂಕು ಆಡಳಿತಗಳು ಎಚ್ಚೆತ್ತು ಸಮಸ್ಯೆ ಪರಿಹರಿಸಲು ಮುಂದಾಗದೇ ಹೋದರೆ ಯಾವುದೇ ರೀತಿಯ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆಯಾಗಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
‘ವಾರದೊಳಗಾಗಿ ತುಂಗಭದ್ರಾ ಕಾಲುವೆಗೆ ನೀರು ಹರಿಸಿ’
“ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವದ ಹಿನ್ನೆಲೆಯಲ್ಲಿ ಈ ಹಿಂದೆ ನಾಲೆಗಳಿಗೆ ನೀರು ಹರಿಸಲಾಗಿತ್ತು. ಆದರೆ ಅತಿಯಾದ ಬಿಸಿಲು ಹಾಗೂ ಬೇಸಿಗೆಯಿಂದಾಗಿ ನೀರು ಬೇಗನೆ ಖಾಲಿಯಾಗಿದ್ದು, ಈ ಬಾರಿ ಮುಂಗಾರು-ಹಂಗಾಮು ಕೈಕೊಡುವ ಭೀತಿ ಉಂಟಾಗಿರುವುದರಿಂದ ಜನ-ಜಾನುವಾರುಗಳು ಸಮಸ್ಯೆ ಅನುಭವಿಸುವಂತಾಗಿದೆ. ತುಂಗಭದ್ರಾ ಡ್ಯಾಮಿನಿಂದ ವಾರದ ಒಳಗಾಗಿ ಕುಡಿಯುವ ನೀರಿನ ಉದ್ದೇಶಕ್ಕೆ ಉಪ ಕಾಲುವೆಗಳಿಗೆ ನೀರು ಹರಿಸದೇ ಹೋದಲ್ಲಿ ಸಮಸ್ಯೆ ಇನ್ನಷ್ಟು ಜಠಿಲವಾಗಲಿದೆ” ಎಂದು ಗ್ರಾಮಸ್ಥರು ಹೇಳುತ್ತಾರೆ.
