ಲೋಕಲ್ ನ್ಯೂಸ್: ಬಸವರಾಜ ಹಳ್ಳಿ, ಹಸಮಕಲ್
ನಮ್ಮ ಸಿಂಧನೂರು, ಮೇ 24, 2026
ಸಿಂಧನೂರು-ಮಸ್ಕಿ ರಾಷ್ಟ್ರೀಯ ಹೆದ್ದಾರಿ 150ಎ ಮಾರ್ಗದಲ್ಲಿನ 7 ಸಂಪರ್ಕ ರಸ್ತೆಗಳಲ್ಲಿ ಇನ್ನೂ 3 ಸಂಪರ್ಕ ಸೇತುವೆಗಳ ನಿರ್ಮಾಣ ಕಾರ್ಯ ನಿಧಾನವಾಗಿ ಸಾಗಿದ್ದು, ಈ ಮಾರ್ಗದಲ್ಲಿ ವಾಹನ ಚಲಾಯಿಸಲು ಚಾಲಕರಿಗೆ ಸವಾಲಾಗಿ ಪರಿಣಮಿಸಿದೆ.

ಆಮೆಗತಿಯಲ್ಲಿ ನಿರ್ಮಾಣ
ಗುಡದೂರು ಗ್ರಾಮದ ಬಳಿಯ ಸೇತುವೆ ಕಾಮಗಾರಿ ಮುಗಿದಿದೆ. ಆದರೆ ಮಲ್ಲಿಕಾರ್ಜುನ ಕ್ಯಾಂಪ್ ಬಳಿ ಇರುವ 54ನೇ ಉಪ ಕಾಲುವೆಗೆ ಇತ್ತೀಚಿಗೆ ಸಿಮೆಂಟ್ ಪೈಪ್‌ಲೈನ್ ಅಳವಡಿಸಿ ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ಇನ್ನೂ ಸೇತುವೆ ನಿರ್ಮಾಣ ಯಾವಾಗ ಎನ್ನುವುದು ಪ್ರಶ್ನೆಯಾಗಿದೆ. ಇನ್ನೂ ಮುದ್ದಾಪುರ ಕ್ರಾಸ್ ಹಾಗೂ ಕಲ್ಲೂರು ಕ್ರಾಸ್ ಪೆಟ್ರೋಲ್ ಬಂಕ್ ಬಳಿಯಿರುವ ಸೇತುವೆ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ನಡೆದಿದೆ.

ತಾತ್ಕಾಲಿಕ ಸೇತುವೆಯಲ್ಲಿ ಸಂಚಾರ
ಈ ಸೇತುವೆಗಳ ಬಳಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ರಸ್ತೆಗಳನ್ನು ನಿರ್ಮಿಸಿದ್ದು, ಜೋರು ಮಳೆ ಬಂದರೆ ಈ ತಾತ್ಕಾಲಿಕ ರಸ್ತೆಗಳು ಕೊಚ್ಚಿಹೋಗುವ ಆತಂಕ ಎದುರಾಗಿದೆ. ತಾತ್ಕಾಲಿಕ ರಸ್ತೆಗಳಲ್ಲಿ ಮಳೆ ನೀರು ನಿಂತು ಕಂದಕ ನಿರ್ಮಾಣವಾಗಿದ್ದು ಭಾನುವಾರ ಬೆಳಿಗ್ಗೆ ಕಂಡುಬಂತು. ಇನ್ನೂ ಸರಕು-ಸಾಗಣೆ ವಾಹನಗಳು ಹಾಗೂ ಬೃಹತ್ ಲಾರಿಗಳು ಈ ಮಾರ್ಗದಲ್ಲಿ ಚಲಾಯಿಸಲು ಚಾಲಕರು ಏದುಸಿರುಬಿಡುತ್ತಿದ್ದಾರೆ. ಹಲವು ವಾಹನಗಳು ತಾತ್ಕಾಲಿಕ ರಸ್ತೆಗಳ ಅಧ್ವಾನ ಸ್ಥಿತಿಯಿಂದ ಉರುಳಿಬಿದ್ದ ಘಟನೆಗಳನ್ನು ಸಾರ್ವಜನಿಕರು ಉದಾಹರಿಸುತ್ತಾರೆ. ಈ ಮಳೆಗಾಲ ಶುರುವಾಗುವುದರೊಳಗೆ ಸೇತುವೆಗಳ ನಿರ್ಮಾಣ ಪೂರ್ಣಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

