ಲೋಕಲ್ ನ್ಯೂಸ್: ಬಸವರಾಜ ಹಳ್ಳಿ, ಹಸಮಕಲ್
ನಮ್ಮ ಸಿಂಧನೂರು, ಮೇ 24, 2026
ಸಿಂಧನೂರು ಹಾಗೂ ಮಸ್ಕಿ ತಾಲ್ಲೂಕು ವ್ಯಾಪ್ತಿಯಲ್ಲಿ ಶನಿವಾರ ರಾತ್ರಿಯಿಂದ ಬೆಳಗಿನವರೆಗೂ ಧೋ ಎಂದು ಸುರಿದ ಮಳೆಗೆ ಸಿಂಧನೂರು ಹಳ್ಳ ತುಂಬಿ ಹರಿಯುತ್ತಿದೆ. ಶನಿವಾರ ಸಂಜೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ರಾತ್ರಿ 7.30ರ ಸುಮಾರು ಜೋರು ಗಾಳಿಯೊಂದಿಗೆ ಜಿಟಿ ಜಿಟಿ ಆರಂಭವಾದ ಮಳೆ 9 ಗಂಟೆ ಸುಮಾರು ಜೋರಾಯಿತು. ತದನಂತರ 10 ಗಂಟೆಯಿಂದ 1 ಗಂಟೆಯವರೆಗೂ ಜೋರು ಮಳೆಯಾಯಿತು. ಬೆಳಗ್ಗೆ 6 ಗಂಟೆಯವರೆಗೂ ಬಿಟ್ಟು ಬಿಟ್ಟು ಮಳೆ ಸುರಿಯಿತು. ಜೋರು ಮಳೆಯಿಂದಾಗಿ ಸಣ್ಣಪುಟ್ಟ ಹಳ್ಳಗಳಲ್ಲಿ ನೀರಿನ ಹರಿವು ಹೆಚ್ಚಿದ್ದು, ಎರೆ ಹೊಲಗಳ ಒಡ್ಡುಗಳಲ್ಲಿ ನೀರು ಸಂಗ್ರಹಗೊಂಡಿದೆ, ಇನ್ನು ಒಳಗಟ್ಟಿಗಳಲ್ಲಿ ಭಾನುವಾರ ಬೆಳಿಗ್ಗೆ ನೀರು ಹರಿಯವುದು ಕಂಡುಬಂತು.
ಹಸಿಮಳೆ
ನಾಲ್ಕಾರು ಗಂಟೆ ಜೋರು ಮಳೆ ಸುರಿದಿದ್ದರಿಂದ ಹಸಿ ಮಳೆಯಾಗಿದ್ದು, ರೈತರು ಹರ್ಷಗೊಂಡಿದ್ದಾರೆ. ಈಗಾಗಲೇ ಹಲವು ಸುತ್ತಿನ ಕೃಷಿ ಚಟುವಟಿಕೆ ಕೈಗೊಂಡಿರುವ ರೈತರು ಬಿತ್ತನೆ ಪ್ರಕ್ರಿಯೆ ಶುರುಮಾಡಲು ಆಲೋಚಿಸುತ್ತಿದ್ದಾರೆ.

