ಸಿಂಧನೂರು : ಪಿಲ್ಲರ್ ಹಂತದಲ್ಲಿ ಜಿಲ್ಲಾಮಟ್ಟದ ಆಸ್ಪತ್ರೆ, ಕಾಮಗಾರಿ ಚುರುಕುಗೊಳಿಸಲು ಒತ್ತಾಯ

Spread the love

ವಿಶೇಷ ವರದಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 15, 2026

ನಗರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಕಟ್ಟಡಕ್ಕೆ ಹೊಂದಿಕೊಂಡು ನಿರ್ಮಿಸಲಾಗುತ್ತಿರುವ 200 ಹಾಸಿಗೆ ಸಾಮರ್ಥ್ಯದ ಜಿಲ್ಲಾಮಟ್ಟದ ಆಸ್ಪತ್ರೆ ಕಾಮಗಾರಿ ಪಿಲ್ಲರ್ ಹಂತದಲ್ಲಿದ್ದು, ಕೆಲಸ ಚುರುಕುಗೊಳಿಸಿ ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಸಿಂಧನೂರು ತಾಲೂಕು ರಾಯಚೂರು ಜಿಲ್ಲೆಯಲ್ಲೇ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಸುತ್ತಮುತ್ತಲಿನ ಜಿಲ್ಲಾ ಕೇಂದ್ರಗಳಿಂದ ಅಂದಾಜು 90 ಕಿ.ಮೀ ಗೂ ಹೆಚ್ಚಿನ ಅಂತರದಲ್ಲಿದೆ. ಜನಸಾಮಾನ್ಯರಿಂದ ಆರೋಗ್ಯ ಸೇವೆಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗ್ರಾಮೀಣ ಪ್ರದೇಶ ಮತ್ತು ಪಟ್ಟಣಗಳ ಜನರು ಆರೋಗ್ಯ ಸೇವೆ ಪಡೆಯಲು ಜಿಲ್ಲಾ ಕೇಂದ್ರಕ್ಕೆ ಪದೇ ಪದೆ ಭೇಟಿ ಕೊಡುವುದು ಕಷ್ಟಸಾಧ್ಯವಾಗಿದೆ. ಈಗಾಗಿ ಆದಷ್ಟು ಬೇಗ ಸಿಂಧನೂರು ಜಿಲ್ಲಾಮಟ್ಟದ ಆಸ್ಪತ್ರೆ ನಿರ್ಮಾಣ ಮಾಡಿ ಸಾರ್ವಜನಿಕ ಸೇವೆಗೆ ಒದಗಿಸಬೇಕೆನ್ನುವ ಕೂಗು ಕೇಳಿಬಂದಿದೆ.
ಮೇಲ್ದರ್ಜೆಗೇರಿಸಿ ಸರ್ಕಾರದ ಆದೇಶ
ಕಲ್ಯಾಣ ಕರ್ನಾಟಕ ಸಂಪೂರ್ಣ ಆರೋಗ್ಯ ಅಭಿವೃದ್ಧಿ ಯೋಜನೆಯಡಿ ಸಿಂಧನೂರು ತಾಲೂಕು ಆಸ್ಪತ್ರೆಯನ್ನು 100 ಹಾಸಿಗೆಯಿಂದ 200 ಹಾಸಿಗೆಗಳ ಜಿಲ್ಲಾಮಟ್ಟದ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ, ಸರ್ಕಾರದ ಆದೇಶ ಮತ್ತು ಸಂಪುಟದ ತೀರ್ಮಾನದಂತೆ, ಸರ್ಕಾರದ ಅಧೀನ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಆರೋಗ್ಯ 1&2) ಇವರು ದಿ:28-05-2025ರಂದು ಆದೇಶ ಹೊರಡಿಸಿದ್ದರು. ಇದರನ್ವಯ ಜಿಲ್ಲಾಮಟ್ಟದ ಆಸ್ಪತ್ರೆ ನಿರ್ಮಾಣ ಕಾರ್ಯ ಕಳೆದ ಮಾರ್ಚ್ನಲ್ಲಿ ಆರಂಭವಾಗಿದೆ.
ಜಿಲ್ಲಾಮಟ್ಟದ ಆಸ್ಪತ್ರೆ ನಿರ್ಮಾಣವಾದರೆ ಸಾರ್ವಜನಿಕರಿಗೆ ಅನುಕೂಲ
2027ರ ಸಿಂಧನೂರಿನ ಯೋಜಿತ ಜನಸಂಖ್ಯೆ 3,55,396 ಇದ್ದು, ತಾಲೂಕಿನಿಂದ ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗಳನ್ನು ಶಿಫಾರಸ್ಸು ಮಾಡಬೇಕಾದರೆ ರಾಯಚೂರು ಮತ್ತು ಬಳ್ಳಾರಿ ನಗರದ ಜಿಲ್ಲಾ ಆಸ್ಪತ್ರೆಗಳಿಗೆ ಮಾಡಬೇಕಿದೆ. ಈ ಎರಡೂ ನಗರಗಳು ಸುಮಾರು 90 ಕಿ.ಮೀ ಅಂತರದಲ್ಲಿವೆ. ಹೊರರೋಗಿ, ಒಳರೋಗಿಗಳ ವಿಭಾಗ ಮತ್ತು ಹೆರಿಗೆ ಪ್ರಮಾಣಗಳು ಸಿಂಧನೂರಿನಲ್ಲಿ ಹೆಚ್ಚಿಗೆ ದಾಖಲಾಗುತ್ತಿರುವುದರಿಂದ ಸಿಂಧನೂರು ತಾಲೂಕಿನ ಸಾರ್ವಜನಿಕರಿಗೆ ಗುಣಮಟ್ಟದ ಮತ್ತು ಹೆಚ್ಚಿನ ಚಿಕಿತ್ಸೆಯನ್ನು ನೀಡಲು ತೀವ್ರ ಸಮಸ್ಯೆಯಾಗುತ್ತಿದೆ. ನಗರದಲ್ಲಿ 200 ಹಾಸಿಗೆಗಳ ಜಿಲ್ಲಾ ಮಟ್ಟದ ಆಸ್ಪತ್ರೆ ಕಾರ್ಯಾರಂಭಗೊAಡರೆ, ನಗರ ಮತ್ತು ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರಿಗೆ ಸಕಾಲಕ್ಕೆ ಉತ್ತಮ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ.
ಹೆಚ್ಚಿದ ವಾಹನಗಳ ಅಪಘಾತ
ಸಿಂಧನೂರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ನಗರದ ಮೂಲಕ 3 ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು ಹಾದುಹೋಗಿವೆ. ಅತೀ ಹೆಚ್ಚು ವಾಹನಗಳ ಅಪಘಾತ ಇಲ್ಲಿ ದಾಖಲಾಗಿವೆ. ಅಲ್ಲದೇ ನಗರದ ಸಾರ್ವಜನಿಕ ಆಸ್ಪತ್ರೆಗೆ 500ಕ್ಕೂ ಹೆಚ್ಚು ಹೊರ ರೋಗಿಗಳು ಹಾಗೂ 150ಕ್ಕೂ ಹೆಚ್ಚು ಒಳರೋಗಿಗಳು ಮತ್ತು ಅತೀ ಹೆಚ್ಚಿ ಅಪಘಾತ ಪ್ರಕರಣಗಳು ದಾಖಲಾಗುತ್ತಿವೆ. ಸಿಂಧನೂರು ತಾಲ್ಲೂಕಿನಲ್ಲಿ 1 ಲಕ್ಷ ಜನಸಂಖ್ಯೆ ಮಸ್ಕಿ ಕ್ಷೇತ್ರಕ್ಕೆ ಬರುವುದರಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಸಿಗೆಗಳ, ವೈದ್ಯರ ಹಾಗೂ ಉಪಕರಣಗಳ ಉಪಕರಣಗಳ ಕೊರತೆ ಕಾಡುತ್ತಿದೆ.
ಆಸ್ಪತ್ರೆಗೆ ಕೆಕೆಆರ್‌ಡಿಬಿ ಅನುದಾನ
ಸಿಂಧನೂರು ತಾಲ್ಲೂಕು ಆಸ್ಪತ್ರೆಯನ್ನು 100 ಹಾಸಿಗೆಗಳಿಂದ 200 ಹಾಸಿಗೆಗಳ ಜಿಲ್ಲಾ ಮಟ್ಟದ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಹಾಗೂ ಈ ಆಸ್ಪತ್ರೆಯ ಕಾಮಗಾರಿಯ ರೂ.28,75,00,032.00 ಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಮತ್ತು ಸಿಂಧನೂರು ಜಿಲ್ಲಾ ಮಟ್ಟದ ಆಸ್ಪತ್ರೆಗೆ ಸೃಜಿಸಲಾಗುವ ಹೆಚ್ಚುವರಿ ಹುದ್ದೆಗಳಿಗೆ ತಗಲುವ ವೆಚ್ಚವನ್ನು ಮೊದಲ 3 ವರ್ಷ ಕೆ.ಕೆ.ಆರ್.ಡಿ.ಬಿ. ಅನುದಾನದಿಂದ ಭರಿಸಲು ಹಾಗೂ ನಂತರ ರಾಜ್ಯ ಸರ್ಕಾರದ ಅನುದಾನದಿಂದ ಭರಿಸಲು ತೀರ್ಮಾನಿಸಲಾಗಿದೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *