ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಗಸ್ಟ್ 03, 2026
ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 03-08-2026 ಸೋಮವಾರದÀಂದು 40,705 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಕಳೆದೊಂದು ವಾರದಿಂದ ಶಿವಮೊಗ್ಗ ಭಾಗದ ಮಲೆನಾಡ ಪ್ರದೇಶ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿಯುತ್ತಿರುವುದರಿಂದ ಒಳಹರಿವಿನಲ್ಲಿ ಏರಿಕೆಯಾಗಿದೆ.
ಜಲಾಶಯದಲ್ಲಿ ಇಂದು 44.19 ಟಿಎಂಸಿ ನೀರು ಸಂಗ್ರಹವಿದೆ. 1390 ಕ್ಯೂಸೆಕ್ ನೀರನ್ನು ಹೊರಗೆ ಹರಿಬಿಡಲಾಗುತ್ತಿದೆ. ಹೊರ ಹರಿವಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 80.00 ಟಿಎಂಸಿ ನೀರು ಸಂಗ್ರಹವಿತ್ತು. 43,736 ಕ್ಯೂಸೆಕ್ ನೀರು ಒಳಹರಿವಿತ್ತು, 23,399 ಕ್ಯೂಸೆಕ್ ನೀರು ಹೊರಗೆ ಹರಿಬಿಡಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿ ನೋಡಿದರೆ ಈ ಬಾರಿ ಜಲಾಶಯದಲ್ಲಿ ಅಂದಾಜು 35 ಟಿಎಂಸಿ ನೀರು ಕಡಿಮೆ ಸಂಗ್ರಹ ದಾಖಲಾಗಿದೆ.
ರೈತರಲ್ಲಿ ಆಶಾಭಾವ:
ತುಂಗಭದ್ರ ಯೋಜನೆಯಿಂದ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಬಯಲುಸೀಮೆಯ ಬರಪೀಡಿತ ಒಟ್ಟು 600 ಹಳ್ಳಿಗಳ 16,38,921 ಎಕರೆ ಜಮೀನಿಗಳಿಗೆ ನೀರೊದಗಿಸಲಾಗುತ್ತಿದೆ. ಅಷ್ಟೇ ಅಲ್ಲದೇ ತುಂಗಭದ್ರ ಯೋಜನೆಯಲ್ಲಿ ವಿಜಯನಗರದ ಕಾಲದಲ್ಲಿ ನಿರ್ಮಿಸಲಾಗಿದ್ದ 18 ಕಾಲುವೆಗಳ ಅಚ್ಚುಕಟ್ಟು ಪ್ರದೇಶಕ್ಕೂ ನೀರು ಪೂರೈಕೆ ಮಾಡಲಾಗುತ್ತಿದೆ. ರಾಜ್ಯದ ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ತುಂಗಭದ್ರಾ ನದಿ ಜೀವನಾಡಿ ಯಾಗಿದೆ. ಆದರೆ ಮುಂಗಾರು ಮಳೆ ಕೊರತೆಯಿಂದ ರೈತರಲ್ಲಿ ಆತಂಕದ ಛಾಯೆ ಇದ್ದು, ಕಳೆದೊಂದು ವಾರದಿಂದ ನದಿಮೂಲದಲ್ಲಿ ಮಳೆ ಸುರಿಯುತ್ತಿರುವುದರಿಂದ ಒಳಹರಿವಿನಲ್ಲಿ ಏರಿಕೆಯಾಗುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆಶಾಭಾವ ಮೂಡಿದೆ.
