ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 21, 2026
ನಗರದ ಬಪ್ಪೂರು ಮಾರ್ಗದ ರಸ್ತೆಯಲ್ಲಿ ಹಳ್ಳಕ್ಕೆ ನಿರ್ಮಿಸಿರುವ ಬ್ರಿಡ್ಜ್ ಶಿಥಿಲಗೊಂಡಿದ್ದು, ಈ ಮಾರ್ಗದಲ್ಲಿ ವಾಹನ ಸಂಚರಿಸುವವರಿಗೆ ಅಪಾಯ ಭೀತಿ ಕಾಡುತ್ತಿದೆ. ಬ್ರಿಡ್ಜ್‌ಗೆ ತಡೆಗೋಡೆ ಇಲ್ಲ, ಸಿಮೆಂಟ್ ಬಾಂಡುಗಲ್ಲುಗಳನ್ನು ಹಾಕಿದ್ದು ಕಿತ್ತಿ ಹೋಗಿವೆ. ರಾತ್ರಿ ವೇಳೆ ಎದುರು-ಬದುರು ವಾಹನಗಳು ಚಲಿಸುವ ವೇಳೆ ಅವಘಡ ಸಂಭವಿಸುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಹೇಳುತ್ತಾರೆ.
ಶಾಲಾ ವಾಹನ, ಸರಕು ಲಾರಿಗಳ ಓಡಾಟ ಜಾಸ್ತಿ
ಈ ಮಾರ್ಗದಲ್ಲಿ ದಿನವೂ ಕೃಷಿ ಉತ್ಪನ್ನಗಳನ್ನು ಸಾಗಿಸುವ ಸರಕು ಲಾರಿಗಳು, ಬೆಳಿಗ್ಗೆ ಮತ್ತು ಸಂಜೆ ಶಾಲಾ-ಕಾಲೇಜು ವಾಹನಗಳು ಹಾಗೂ ಸಾರಿಗೆ ಬಸ್ಸುಗಳು ಸಂಚರಿಸುತ್ತವೆ. ಹಳ್ಳದ ಬ್ರಿಡ್ಜ್ ಶಿಥಿಲಗೊಂಡಿರುವ ಕಾರಣ ಆತಂಕದಿಂದ ವಾಹನ ಚಲಾಯಿಸುತ್ತೇವೆ ಎಂದು ಚಾಲಕರೊಬ್ಬರು ತಿಳಿಸಿದ್ದಾರೆ.

ಈ ಸೇತುವೆ ಹತ್ತಾರು ಹಳ್ಳಿ ಹಾಗೂ ಕ್ಯಾಂಪುಗಳ ಪ್ರಮುಖ ಸಂಪರ್ಕ ಕೊಂಡಿ
ಗೀತಾಕ್ಯಾಂಪ್, ತಿಡಿಗೋಳ, ನಿಡಿಗೋಳ, ಕುರಕುಂದಾ, ಬೊಮ್ಮನಾಳ, ಬಪ್ಪೂರು, ಗುಂಡಾ, ಮಾಟೂರು, ಉಪ್ಪಲದೊಡ್ಡಿ, ಕನಿಗನಹಾಳ, ಗುಡದಮ್ಮನಕ್ಯಾಂಪ್, ದೇವರಗುಡಿ ಸೇರಿದಂತೆ ಹತ್ತಾರು ಕ್ಯಾಂಪ್ ಹಾಗೂ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಅಲ್ಲದೇ ಮಸ್ಕಿ ತಾಲ್ಲೂಕಿನ ಹಲವು ಗ್ರಾಮಗಳಿಗೂ ಸಂಪರ್ಕ ಕೊಂಡಿಯಾಗಿದೆ. ಈ ಮಾರ್ಗದಲ್ಲಿರುವ ಬಹುತೇಕ ಗ್ರಾಮಗಳು ನೀರಾವರಿ ಪ್ರದೇಶ ಹೊಂದಿದ್ದು, ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಬೃಹತ್ ಲಾರಿಗಳು ಭತ್ತದ ಲೋಡುಗಳನ್ನು ಹೊತ್ತು ಸಾಗುವುದು ಸಾಮಾನ್ಯವಾಗಿದೆ. ಹಾಗಾಗಿ ಶಿಥಿಲಗೊಂಡ ಸೇತುವೆ ಮೇಲೆ ಯಾವುದೇ ರೀತಿಯ ಅವಘಡ ಸಂಭವಿಸುವ ಮುಂಚೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೇತುವೆಯ ಸಾಮರ್ಥ್ಯವನ್ನು ಪರೀಕ್ಷಿಸುವ ಮೂಲಕ ಹೊಸ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಕಳುಹಿಸಬೇಕೆಂಬುದು ಈ ಮಾರ್ಗದ ಗ್ರಾಮಗಳ ಸಾರ್ವಜನಿಕರ ಒತ್ತಾಯವಾಗಿದೆ.

