ಸಿಂಧನೂರು : ಜೆಸಿಟಿಯು, ಎಸ್‌ಕೆಎಂನಿಂದ ಆಗಸ್ಟ್ 10ರಂದು ರಾಯಚೂರು ತಹಸಿಲ್ ಕಚೇರಿ ಮುತ್ತಿಗೆ ಹೋರಾಟ: ಭಾಷುಮಿಯಾ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಗಸ್ಟ್ 05, 2026

ರೈತ, ಕಾರ್ಮಿಕ, ವಿದ್ಯಾರ್ಥಿ-ಯುವಜನ ಹಾಗೂ ಮಹಿಳಾ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಲು ಆಗ್ರಹಿಸಿ, ದೇಶದ ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿರುವ ಕೇಂದ್ರ ಸರ್ಕಾರದ ಸರ್ವಾಧಿಕಾರವನ್ನು ಪ್ರತಿರೋಧಿಸಿ ಕ್ವಿಟ್ ಇಂಡಿಯಾ ಚಳವಳಿ ಮಾದರಿಯಲ್ಲಿ ಜೆಸಿಟಿಯು ಹಾಗೂ ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ಆಗಸ್ಟ್ 10, 2026 ಸೋಮವಾರದಂದು ರಾಯಚೂರಿನ ಟಿಪ್ಪುಸುಲ್ತಾನ್ ಉದ್ಯಾನದಿಂದ ಮೆರವಣಿಗೆ ಹೊರಟು ತಹಸಿಲ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸಿಪಿಐ ಮುಖಂಡ ಭಾಷುಮಿಯಾ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಬಿಜೆಪಿ ಸರ್ಕಾರ ದೇಶದಲ್ಲಿ ಆಡಳಿತಕ್ಕೆ ಬಂದು 12 ವರ್ಷಗಳಾಗಿದ್ದು, ಸರ್ವಾಧಿಕಾರಿ ನೀತಿಗಳಿಂದ ಜನರು ತತ್ತರಿಸಿ ಹೋಗಿದ್ದಾರೆ. ದೇಶದ ಸಂಪತ್ತನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಾಟಕ್ಕಿಟ್ಟಿರುವ ಮೋದಿ ಸರ್ಕಾರ, ಇದನ್ನು ಪ್ರಶ್ನಿಸಿದವರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಿದೆ. ಸರ್ಕಾರಿ ಸಂಸ್ಥೆಗಳನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡು ಪ್ರಜಾತಂತ್ರದ ಮೂಲ ಆಶಯಗಳನ್ನೇ ಬುಡಮೇಲು ಮಾಡಿದೆ. ದೆಹಲಿಯಲ್ಲಿ ರೈತರ ಹೋರಾಟದ ನಂತರ ಹಿಂಪಡೆದಿದ್ದ ಹಲವು ಕಾನೂನುಗಳನ್ನು ಸರ್ಕಾರ ಹಿಂಬಾಗಿಲ ಮೂಲಕ ಜಾರಿ ಮಾಡಲು ಹೊರಟಿದೆ. 4 ಕಾರ್ಮಿಕ ಸಂಹಿತೆಗಳು ಕಾರ್ಮಿಕರನ್ನು ಗುಲಾಮಗಿರಿ ತಳ್ಳುತ್ತಿವೆ, ವಿಬಿರಾಮ್‌ಜಿ ಮೂಲಕ ಜನರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳಲಾಗಿದೆ. ನೀಟ್ ಹಗರಣ, ಅಯೋಧ್ಯೆ ದೇವಸ್ಥಾನದ ಹುಂಡಿ ಕಳ್ಳತನ, ಚುನಾವಣಾ ಆಯೋಗದ ಮೇಲೆ ಹಸ್ತಕ್ಷೇಪ ಹೀಗೆ ಬಿಜೆಪಿ ತಾನು ಆಡಿದ್ದೇ ಆಟ ಎಂದು ವರ್ತಿಸುತ್ತಿದೆ. ಇದನ್ನು ಖಂಡಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ” ಎಂದು ಅವರು ಹೇಳಿದರು.
ಜನವಿರೋಧಿ ಕಾನೂನುಗಳನ್ನು ಕೇಂದ್ರ ಸರ್ಕಾರ ವಾಪಸ್‌ ಪಡೆಯಬೇಕು : ಬಸವಂತರಾಯಗೌಡ
“ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನ-ಕರ‍್ಪೊರೇಟ್ ಭೂ ಕಬಳಿಕೆ ವಿರೋಧಿಸಿ, ಕಾರ್ಮಿಕ ವಿರೋಧಿ ಕನಿಷ್ಠ ಕೂಲಿ ಪರಿಷ್ಕರಣೆ ವಿರೋಧಿಸಿ, ವಿಬಿ ಗ್ರಾಮ್ ಜಿ ಕಾಯ್ದೆ ,ವಿದ್ಯುತ್ ತಿದ್ದುಪಡಿ ಕಾಯ್ದೆ 2025 ,ಬೀಜ ಕಾಯ್ದೆ, ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ಧೋರಣಾ ಚೌಕಟ್ಟು ಹಾಗೂ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ, ಎಂ.ಎಸ್ ಸ್ವಾಮಿನಾಥನ್ ಶಿಪಾರಸ್ಸಿನಂತೆ ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಶಾಸನ , ಎಲ್ಲಾ ರೈತ-ಕೃಷಿಕೂಲಿಕಾರ-ಮಹಿಳೆಯರ ಎಲ್ಲಾ ರೀತಿಯ ಸಾಲ ಮನ್ನಾ ಮಾಡಲು ಹಾಗೂ ಋಣ ಮುಕ್ತ ಕಾಯ್ದೆ ಜಾರಿಗೆ ಮತ್ತು ಶಾಸನಬದ್ದ ಜೀವನಾವಶ್ಯಕ ಕನಿಷ್ಟ ಕೂಲಿ ಶಾಸನಕ್ಕೆ, ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಆಗ್ರಹಿಸಿ, ರಸಗೊಬ್ಬರ-ಡೀಸೆಲ್ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮೇಲೆ ಹಾಗೂ ಎಲ್ಲಾ ವಲಯಗಳಲ್ಲಿ ಹೆಚ್ಚುತ್ತಿರುವ ಖಾಸಗೀಕರಣ-ಕಾರ್ಪೋರೇಟ್ ಶೋಷಣೆ ಮೇಲೆ ಸೂಕ್ತ ನಿಯಂತ್ರಣ ಹಾಗೂ ಬ್ಯಾಂಕ್, ವಿಮೆ, ಆರೋಗ್ಯ, ಶಿಕ್ಷಣ ಖಾಸಗೀಕರಣ ನಿಲ್ಲಿಸುವಂತೆ ಆಗ್ರಹಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ” ಎಂದು ಸಿಪಿಐ(ಎಂ) ತಾಲ್ಲೂಕು ಕಾರ್ಯದರ್ಶಿ ಬಸವಂತರಾಯಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡ ಶರಣಪ್ಪ ಮರಳಿ, ರಾಮಯ್ಯ ಜವಳಗೇರಾ, ಕೆಆರ್‌ಎಸ್ ತಾಲ್ಲೂಕು ಅಧ್ಯಕ್ಷ ರಮೇಶ ಪಾಟೀಲ್ ಬೇರಿಗಿ, ವೆಂಕನಗೌಡ ಗದ್ರಟಗಿ, ಬಸವರಾಜ ಬಾದರ್ಲಿ, ಬಸವರಾಜ ಕೊಂಡೆ ಇದ್ದರು.


Spread the love

Leave a Reply

Your email address will not be published. Required fields are marked *