ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಗಸ್ಟ್ 05, 2026
ರಾಯಚೂರು ಜಿಲ್ಲೆಯಲ್ಲಿ ಎರಡು ಬಣಗಳ ನಡುವಿನ ದೀರ್ಘಕಾಲದ ಮುಸುಕಿನ ಗುದ್ದಾಟವೇ ಜಿಲ್ಲೆಗೆ ಸಚಿವ ಸ್ಥಾನ ಕೈತಪ್ಪಲು ಕಾರಣ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಒಂದು ಬಣದ ಕೈ ಮೇಲಾದರೆ, ಇನ್ನೊಂದು ಬಣ ಹೈಕಮಾಂಡ್ ಮೂಲಕ ತೊಡರುಗಾಲು ಹಾಕಿದೆ ಎಂದು ಹೇಳಲಾಗುತ್ತಿದ್ದು, ಹೀಗಾಗಿ ರಾಯಚೂರು ಜಿಲ್ಲೆ ಪ್ರತಿ ಭಾರಿಯೂ ‘ಅತಿಥಿ ಸಚಿವ’ರನ್ನು ಕಾಣುವಂತಾಗಿದೆ ಎಂದು ಕೆಲವರು ವಿಶ್ಲೇಷಿಸಿದ್ದಾರೆ.
22 ವರ್ಷಗಳ ನಂತರವೂ ಈಡೇರದ ಬೇಡಿಕೆ
ಜಿಲ್ಲೆಯಲ್ಲಿ ಕಳೆದ 2004ರಿಂದ ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಪಕ್ಷದ ಸ್ಥಳೀಯ ಶಾಸಕರನ್ನು ಇಲ್ಲಿಯವರೆಗೂ ಸಚಿವರಾಗಿ ನೇಮಿಸಿಲ್ಲ, ಜಿಲ್ಲೆಯ ಉಸ್ತುವಾರಿಯನ್ನಾಗಿ ಮಾಡಿಲ್ಲ. ಈ ಬಾರಿಯಾದರೂ ಪಕ್ಷದ ಹೈಕಮಾಂಡ್ ಪರಿಗಣಿಸಿ ಸಚಿವ ಸ್ಥಾನ ನೀಡಬೇಕೆನ್ನುವ ಒತ್ತಡ ಮತ್ತು ಬೇಡಿಕೆ ಮುಂದಿಡಲಾಗಿತ್ತು. ಆದರೆ, ಪಕ್ಷದ ಹೈಕಮಾಂಡ್ ಇದನ್ನು ಪರಿಗಣಿಸಿಲ್ಲ. 34 ಸದಸ್ಯರ ಸಾಮರ್ಥ್ಯದ ಸಚಿವ ಸಂಪುಟದಲ್ಲಿ ಈಗಾಗಲೇ 33 ಸಚಿವರನ್ನು ನೇಮಕ ಮಾಡಲಾಗಿದ್ದು, ಇನ್ನೂ ಒಂದೇ ಒಂದು ಸ್ಥಾನ ಬಾಕಿ ಇದೆ. ಆ ಸ್ಥಾನ ಕೂಡ ಮಹಿಳಾ ಅಭ್ಯರ್ಥಿಗೆ ಮೀಸಲಾಗಿದೆ ಎಂದು ಹೇಳಲಾಗುತ್ತಿದ್ದು, ಹಾಗಾಗಿ ಮತ್ತೊಮ್ಮೆ ಜಿಲ್ಲೆಗೆ ಸಚಿವ ಸ್ಥಾನ ತಪ್ಪಿದಂತೆಯೇ ಎಂಬ ಮಾತುಗಳು ಚರ್ಚೆಯಲ್ಲಿವೆ.
ದೊಡ್ಡಮಟ್ಟದ ಲಾಭಿ
ಜಿಲ್ಲೆಯ ಎರಡೂ ಬಣಗಳು ಹಿಂದೆಂದಿಗಿಂತಲೂ ಈ ಬಾರಿ ಸಚಿವ ಸ್ಥಾನಕ್ಕಾಗಿ ದೊಡ್ಡಮಟ್ಟದ ಲಾಭಿ ನಡೆಸಿದ್ದವು. ಸಿಎಂ ಬದಲಾವಣೆಯ ನಂತರ ಜಿಲ್ಲೆಯ ಎರಡೂ ಬಣದ ನಾಯಕರು ಕಳೆದ 2 ತಿಂಗಳಿಂದ ಬೆಂಗಳೂರು, ಡೆಲ್ಲಿ ಸುತ್ತಾಟ ನಡೆಸಿದ್ದರು. ಇನ್ನೂ ಕೆಲವರು ವಾರಗಟ್ಟಲೇ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದು ಇದೆ. ಆದರೆ ಏನೆಲ್ಲಾ ಲಾಬಿ ನಡೆಸಿದರೂ ಪ್ರಯತ್ನ ಫಲಿಸಿಲ್ಲ ಎಂದು ಹೇಳಲಾಗುತ್ತಿದೆ.
ಬಣಗಳ ನಡುವೆ ಪೈಪೋಟಿ ಪರಾಕಾಷ್ಠೆ ?
“ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಂಪರ್ಕ ಸಾಧಿಸಿದ್ದ ಒಂದು ಬಣ ಸಚಿವ ಸ್ಥಾನದ ಭರವಸೆಯಲ್ಲಿತ್ತು, ಆದರೆ ಇನ್ನೊಂದು ಬಣ ಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಹೈಕಮಾಂಡ್ನ ಹಲವು ಪ್ರಭಾವಿಗಳ ದುಂಬಾಲು ಬಿದ್ದಿತ್ತು. ಆದರೆ ಕೊನೆ ಗಳಿಗೆಯಲ್ಲಿ ಎರಡು ಬಣಗಳ ನಡುವಿನ ಮುಸುಕಿನ ಗುದ್ದಾಟದಲ್ಲಿ ಹೈಕಮಾಂಡ್ ಬೇರೊಂದು ತೀರ್ಮಾನ ಕೈಗೊಂಡಿದೆ. ಒಂದು ವೇಳೆ ‘ಬಣಗಾರಿಕೆ’ ಇಲ್ಲದೇ, ಒಗ್ಗಟ್ಟು ಪ್ರದರ್ಶಿಸಿ ಹೈಕಮಾಂಡ್ ಮೇಲೆ ಒತ್ತರ ಹೇರಿದ್ದ ಜಿಲ್ಲೆಗೆ ಸಚಿವ ಸ್ಥಾನ ಸುಲಭವಾಗಿ ದಕ್ಕುತ್ತಿತ್ತು” ಎಂದು ಹೆಸರೇಳಲಿಚ್ಚಿಸದ ಕಾರ್ಯಕರ್ತರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
