ಸಿಂಧನೂರು : 1 ಲಕ್ಷ ಕ್ಯೂಸೆಕ್ ದಾಟಿದ ತುಂಗಭದ್ರಾ ಡ್ಯಾಂ ಒಳ ಹರಿವು

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಗಸ್ಟ್ 05, 2026

ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 05-08-2026 ಬುಧವಾರದಂದು 1,00,750 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಶಿವಮೊಗ್ಗ ಭಾಗದ ಮಲೆನಾಡ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವುದರಿಂದ ಪ್ರಸಕ್ತ ಮಳೆ ವರ್ಷದಲ್ಲಿ ಒಳಹರಿವಿನಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.
ಜಲಾಶಯದಲ್ಲಿ ಇಂದು 59.72 ಟಿಎಂಸಿ ನೀರು ಸಂಗ್ರಹವಿದೆ. 1,443 ಕ್ಯೂಸೆಕ್ ನೀರನ್ನು ಹೊರಗೆ ಹರಿಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 80.00 ಟಿಎಂಸಿ ನೀರು ಸಂಗ್ರಹವಿತ್ತು. 23,655 ಕ್ಯೂಸೆಕ್ ನೀರು ಹೊರಗೆ ಹರಿಬಿಡಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿ ನೋಡಿದರೆ ಈ ಬಾರಿ ಜಲಾಶಯದಲ್ಲಿ ಅಂದಾಜು 21 ಟಿಎಂಸಿ ನೀರು ಕಡಿಮೆ ಸಂಗ್ರಹ ದಾಖಲಾಗಿದೆ. ಗುರುವಾರದ ಹೊತ್ತಿಗೆ ಜಲಾಶಯದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ 68 ಟಿಎಂಸಿ ದಾಟಲಿದೆ ಎಂದು ಅಂದಾಜಿಸಲಾಗಿದೆ.
ಮೊದಲ ಬೆಳೆ ಪಕ್ಕಾ
ಜಲಾಶಯಕ್ಕೆ ಹೊಸ ಗೇಟ್ ಅಳವಡಿಸುವುದಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಒಂದೇ ಬೆಳೆಗೆ ನೀರು ಹರಿಸಲಾಗಿತ್ತು. ಈ ಬಾರಿ ಮುಂಗಾರು ಹಂಗಾಮಿನಲ್ಲಿ ಮಳೆ ಅಭಾವದ ಕಾರಣ ಡ್ಯಾಂ ತುಂಬುವುದೋ ಇಲ್ಲವೋ ? ಎನ್ನುವ ಅನುಮಾನ ಉಂಟಾಗಿತ್ತು. ಆದರೆ ಕಳೆದ ಹದಿನೈದು ದಿನಗಳಲ್ಲಿ ಜಲಾಶಯದ ಚಿತ್ರಣವೇ ಬದಲಾಗಿದ್ದು, ಶಿವಮೊಗ್ಗ ಮತ್ತು ಮಲೆನಾಡ ಪ್ರದೇಶದಲ್ಲಿ ಮಳೆ ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿದ್ದಂತೆ ಡ್ಯಾಂಗೆ ಹರಿದು ಬರುವ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಿದ್ದು, ರೈತರ ಹರ್ಷಕ್ಕೆ ಕಾರಣವಾಗಿದೆ, ಹೀಗಾಗಿ ಮೊದಲ ಬೆಳೆ ಪಕ್ಕಾ ಎನ್ನುವ ವಿಶ್ವಾಸದ ಮಾತುಗಳು ರೈತ ವಲಯದಲ್ಲಿ ಕೇಳಿಬಂದಿವೆ. ಇದರಿಂದಾಗಿ ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.


Spread the love

Leave a Reply

Your email address will not be published. Required fields are marked *