ಸಿಂಧನೂರು: ವಿದ್ಯಾರ್ಥಿನಿಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಕಿರುಕುಳ: ಕಾಯ್ದೆ/ಕಾನೂನು ಅನುಷ್ಠಾನದಲ್ಲಿ ಲೋಪ ? : ಆರೋಪ

Spread the love

ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 1, 2026

ನಗರದ ಶಾಲಾ-ಕಾಲೇಜಿಗೆ ಬರುವ ವಿದ್ಯಾರ್ಥಿನಿಯರಿಗೆ ಕೆಲ ಕಿಡಿಗೇಡಿಗಳು ಕಿರುಕುಳ ನೀಡುವುದು, ಚುಡಾಯಿಸುವುದು, ಅನುಚಿತವಾಗಿ ಇಲ್ಲವೇ ಮುಜುಗರವಾಗುವಂತೆ ವರ್ತಿಸುತ್ತಿರುವ ಘಟನೆಗಳು ಪದೇ ಪದೆ ಮರುಕಳಿಸುತ್ತಿದ್ದರೂ ಸಂಬಂಧಿಸಿದ ಇಲಾಖೆಗಳು ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ ಎನ್ನುವ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿವೆ.
ನಗರದಲ್ಲಿ ಜಿಲ್ಲೆಯಲ್ಲೇ ಅತ್ಯಂತ ಹೆಚ್ಚು ಶಿಕ್ಷಣ ಸಂಸ್ಥೆಗಳಿವೆ. ಹೀಗಾಗಿ ದಿನವೂ ಅಭ್ಯಾಸಕ್ಕಾಗಿ ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳು ಬರುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ, ಭದ್ರತೆ ಹಾಗೂ ನಿರ್ಭಯ ವಾತಾವರಣ ಕಲ್ಪಿಸುವ ಪ್ರಕ್ರಿಯೆಯಲ್ಲಿ ಹಲವು ಲೋಪಗಳಾಗುತ್ತಿದ್ದು, ಪಾಲಕ ಸಮುದಾಯದಲ್ಲಿ ಇದು ಆತಂಕಕ್ಕೆ ಕಾರಣವಾಗಿದೆ. ಇನ್ನೂ ಗ್ರಾಮೀಣ ಪ್ರದೇಶದಲ್ಲೂ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಪ್ರಕರಣಗಳು ನಡೆಯುತ್ತಿದ್ದರೂ ಅವುಗಳನ್ನು ಪತ್ತೆಹಚ್ಚಿ ಕಾನೂನು ವ್ಯಾಪ್ತಿಯ ಮೂಲಕ ನ್ಯಾಯದ ಕಟಕಟೆಗೆ ತಂದು ಸಮಸ್ಯೆಗೀಡಾದವರಿಗೆ ನ್ಯಾಯ, ಸುರಕ್ಷತೆ, ಭದ್ರತೆ ಒದಗಿಸಬೇಕಾದ ಇಲಾಖೆಗಳು ಕೈಚೆಲ್ಲಿವೆ ಎಂದು ಗ್ರಾಮಸ್ಥರು ದೂರುತ್ತಾರೆ.
ರೋಡ್ ರೋಮಿಯೋ ತಂಡ (ಪಡೆ) ನಿಷ್ಕ್ರಿಯ ಆರೋಪ ?
“ರೋಡ್ ರೋಮಿಯೋ ತಂಡ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ. ಈ ತಂಡದಲ್ಲಿ 1 ಎಎಸ್‌ಐ, 5ಎಚ್‌ಆರ್‌ಸಿಪಿ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ. ರಾಯಚೂರು, ಕುಷ್ಟಗಿ ಹಾಗೂ ಗಂಗಾವತಿ ಮುಖ್ಯ ರಸ್ತೆ ಹಾಗೂ ನಗರದ ಜನದಟ್ಟಣೆಯ ಹಲವು ವಾರ್ಡ್ಗಳ ಪ್ರಮುಖ ರಸ್ತೆಗಳಲ್ಲಿ ಈ ತಂಡ ಆಗಾಗ ಸಂಚರಿಸುತ್ತದೆ. ವಿದ್ಯಾರ್ಥಿನಿಯರಿಗೆ, ಯುವತಿಯರಿಗೆ ಯಾರಾದರೂ ಯುವಕರು ಚುಡಾಯಿಸುವುದು, ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲಿ ಈ ತಂಡ ಕಾರ್ಯಪ್ರವೃತ್ತವಾಗಲಿದೆ. ಅಂತವರನ್ನು ಠಾಣೆಗೆ ಕರೆತಂದು ಸೂಕ್ತ ಎಚ್ಚರಿಕೆ ನೀಡಲಾಗುವುದು, ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು” ಎಂದು ಈ ಹಿಂದೆ ಪೊಲೀಸ್ ಇಲಾಖೆ ತಿಳಿಸಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ತಂಡ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಎಷ್ಟೋ ಕಡೆ ಬಹಿರಂಗವಾಗಿ ಕೆಲ ಕಿಡಿಗೇಡಿಗಳು ಚೀರಾಡುವುದು, ಕೂಗಾಡುವುದು, ಮನಬಂದಂತೆ ವರ್ತಿಸುವುದು ಕಂಡುಬಂದರೂ ಈ ತಂಡದ ಸದಸ್ಯರಾರೂ ಅದನ್ನು ತಡೆಯಲು ಅಲ್ಲಿರುವುದಿಲ್ಲ, ಕೆಲವೊಂದು ಬಾರಿ ಸಾರ್ವಜನಿಕರು ದೂರವಾಣಿ ಮೂಲಕ ಗಮನ ಸೆಳೆದಾಗ್ಯೂ ತಡವಾಗಿ ಬಂದ ಉದಾಹರಣೆಗಳಿವೆ” ಎಂಬುದು ನಾಗರಿಕರೊಬ್ಬರ ಆರೋಪವಾಗಿದೆ.
“ರಸ್ತೆಯಲ್ಲಿ ಮನಬಂದಂತೆ ಅತಿವೇಗ ಮತ್ತು ಅಡ್ಡಾದಿಡ್ಡಿಯಾಗಿ ಸೈಕಲ್ ಮೋಟರ್ ಓಡಿಸುವುದು, ಸೈಲೆನ್ಸರ್ ಕಿತ್ತಿ ಬೈಕ್ ರೈಡ್ ಮಾಡುವುದು (defective silencer), ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವುದು, ಮುಜುಗರ ಬರುವಂತೆ ವರ್ತಿಸುವುದು, ಕಾಲೇಜು ತರಗತಿಗಳಿಗೆ ಬಂಕ್ ಹೊಡೆದು ಬಸ್ ನಿಲ್ದಾಣದಲ್ಲಿ ವಿನಾಃಕಾರಣ ಕಾಲಹರಣ ಮಾಡುವುದು, ಹದಿನೆಂಟು ವರ್ಷದ ಒಳಗಿನ ಯುವಕರು ನಿಯಮಬಾಹಿರವಾಗಿ ಸೈಕಲ್ ಮೋಟರ್ ಓಡಿಸುವುದನ್ನು ಗುರುತಿಸಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ‘ರೋಡ್ ರೋಮಿಯೋ’ ತಂಡವನ್ನು ಸನ್ನದ್ಧಗೊಳಿಸಿರುವುದಾಗಿ ಕಳೆದ ಡಿಸೆಂಬರ್ 2025ರಲ್ಲಿ ವ್ಯಾಪಕವಾಗಿ ಪ್ರಚಾರ ನಡೆಸಲಾಗಿತ್ತು. ಆರಂಭದಲ್ಲಿ ಕೆಲ ದಿನ ಪ್ರಕರಣ ದಾಖಲಿಸಿ, ಪ್ರಚಾರ ನಡೆಸಲಾಯಿತು ತದನಂತರ ಸಂಪೂರ್ಣ ನಿರ್ಲಕ್ಷ್ಯ ತಾಳಲಾಗಿದೆ” ಎಂದು ವಿದ್ಯಾರ್ಥಿ ಪಾಲಕರೊಬ್ಬರು ದೂರಿದ್ದಾರೆ.

ಹಲವು ಘಟನಾವಳಿಗಳು…

  • ಜನವರಿ 30, 2025ರಂದು ಪದವಿ ಮಹಾವಿದ್ಯಾಲಯದ ಸ್ನಾತಕೋತ್ತರ (ಎಂ.ಎಸ್ಸಿ) ವಿದ್ಯಾರ್ಥಿನಿಯನ್ನು ದುಷ್ಕರ್ಮಿಯೊಬ್ಬ ಕಾಲೇಜು ಸಮೀಪದ ಖಾಸಗಿ ಲೇಔಟ್‌ವೊಂದರಲ್ಲಿ ಚಾಕು ಇರಿದು ಕೊಲೆ ಮಾಡಿ ಲಿಂಗಸುಗೂರು ಪೊಲೀಸರಿಗೆ ಶರಣಾಗಿದ್ದ.
  • ಜನವರಿ 30, 2026ರಂದು ಸಿಂಧನೂರು ತಾಲ್ಲೂಕಿನ ಕುರುಕುಂದಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಯೊಬ್ಬರು ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ ಘಟನೆ ನಡೆದಿತ್ತು.
  • ಮೇ 8, 2026ರಂದು ನಗರದ ಖಾಸಗಿ ಕಾಲೇಜು ಹಾಗೂ ಆಸ್ಪತ್ರೆಯ ಮುಂದೆ ಥಾರ್ ಕಾರು ವಿದ್ಯಾರ್ಥಿನಿಯರ ಮೇಲೆ ಹರಿದು ಓರ್ವ ವಿದ್ಯಾರ್ಥಿನಿ ಮೃತಪಟ್ಟು, ಮೂವರು ವಿದ್ಯಾರ್ಥಿನಿಯರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು.
  • ಜೂನ್ 15ರಂದು, ದುಷ್ಕರ್ಮಿಯೊಬ್ಬ 2 ಮತ್ತು 3ನೇ ತರಗತಿ ಅಭ್ಯಾಸ ಮಾಡುವ ವಿದ್ಯಾರ್ಥಿನಿಯರನ್ನು ಚಾಕು ತೋರಿಸಿ ಹೆದರಿಸಿ ಅತ್ಯಾಚಾರ ನಡೆಸಿದ ಘಟನೆ ನಡೆದಿತ್ತು.

ವಿದ್ಯಾರ್ಥಿನಿಯರ ಶೈಕ್ಷಣಿಕ ಹಕ್ಕಿನ ಉಲ್ಲಂಘನೆ ?
ನಗರ ಸೇರಿ ತಾಲ್ಲೂಕಿನಲ್ಲಿ ನಡೆದ ಹಾಗೂ ವರದಿಯಾಗದೇ ಮುಚ್ಚಿಹೋದ ಹಲವು ಪ್ರಕರಣಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆದ ದೌರ್ಜನ್ಯ, ದಬ್ಬಾಳಿಕೆ, ಅವಘಡ ಸೇರಿದಂತೆ ಇನ್ನಿತರೆ ಘಟನೆಗಳೇ ಜಾಸ್ತಿ. ಹಾಗಾಗಿ ಇದು ವಿದ್ಯಾರ್ಥಿನಿಯರ ಶೈಕ್ಷಣಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ವಿದ್ಯಾರ್ಥಿ ನಿಯರು ಶಿಕ್ಷಣ ಪಡೆಯಲು ಯಾವುದೇ ರೀತಿಯ ಅಡೆ-ತಡೆಯಾಗದಿರುವಂತೆ ನೋಡಿಕೊಳ್ಳ ಬೇಕೆಂದು ಕಾಯ್ದೆ/ಕಾನೂನುಗಳು ಸ್ಪಷ್ಟವಾಗಿ ಹೇಳುತ್ತವೆ. ಆದರೆ ತಾಲ್ಲೂಕಿನಲ್ಲಿ ಪದೇ ಪದೆ ವಿದ್ಯಾರ್ಥಿನಿಯರ ಮೇಲೆ ಇಂತಹ ಅವಘಡಗಳು ನಡೆಯುತ್ತಿರುವುದರಿಂದ ಅವರು ಶಿಕ್ಷಣ ಪಡೆಯಲು ಹಿಂದೇಟು ಹಾಕುವಂತೆ ಮಾಡಿದೆ. ಅಲ್ಲದೇ ಇದು ಪಾಲಕ ಸಮುದಾಯದಲ್ಲಿ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಶಾಲಾ-ಕಾಲೇಜಿಗೆ ಕಳುಹಿಸಲು ಭಯಪಡುವಂತೆ ಮಾಡಿದೆ.
20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು
ನಗರವು ರಾಯಚೂರು ಜಿಲ್ಲೆಯಲ್ಲೇ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿದೆ. ಇಲ್ಲಿಗೆ ಸಿಂಧನೂರು ತಾಲ್ಲೂಕಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸೇರಿದಂತೆ ಮಾನ್ವಿ, ಲಿಂಗಸುಗೂರು, ಮಸ್ಕಿ, ಕಾರಟಗಿ, ಗಂಗಾವತಿ, ಕುಷ್ಟಗಿ, ಸಿರುಗುಪ್ಪ ಸೇರಿ ಸುತ್ತಮುತ್ತಲಿನ ತಾಲ್ಲೂಕುಗಳ ವಿದ್ಯಾರ್ಥಿಗಳು ಆಗಮಿಸುತ್ತಾರೆ. ದಿನವೂ ಒಂದು ಅಂದಾಜಿನ ಪ್ರಕಾರ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನಗರದ ಶಾಲಾ-ಕಾಲೇಜುಗಳಿಗೆ ಅಭ್ಯಾಸಕ್ಕಾಗಿ ಬರುತ್ತಾರೆ. ಹೀಗಾಗಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಅದರಲ್ಲೂ ಶಾಲಾ-ಕಾಲೇಜು ಬಿಡುವ ಸಂದರ್ಭದಲ್ಲಿ ಪ್ರಮುಖ ರಸ್ತೆಗಳಲ್ಲಿ ವಿದ್ಯಾರ್ಥಿಗಳ ದಟ್ಟಣೆ ಜಾಸ್ತಿ ಇರುತ್ತದೆ. ಹೀಗಾಗಿ ವಿದ್ಯಾರ್ಥಿಗಳ ಸುರಕ್ಷತೆ, ಭದ್ರತೆ ಸವಾಲಾಗಿ ಪರಿಣಮಿಸಿದೆ. ಇನ್ನೂ ಕೆಲ ರಸ್ತೆಗಳಲ್ಲಿ ವಾಣಿಜ್ಯ ಮಳಿಗೆಯವರು ಫುಟ್‌ಪಾತ್‌ಗಳನ್ನು ಅತಿಕ್ರಮಿಸಿರುವುದರಿಂದ ಪಾದಾಚಾರಿಗಳ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ.
‘ಹೆಲ್ಪ್ ಡೆಸ್ಕ್’ ಪ್ರಚಾರ ಕೊರತೆ
“ಕಳೆದ ಡಿಸೆಂಬರ್‌ನಲ್ಲಿ ಗಾಂಜಾ ಮಾರಾಟ ಸೇರಿ ಮಾದಕ ವಸ್ತುಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ವದಂತಿಗಳ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಹೆಲ್ಪ್ ಡೆಸ್ಕ್ ರಚಿಸಲಾಗಿದೆ ಎಂದು ಹೇಳಲಾಗಿತ್ತು. ಈ ಹೆಲ್ಪ್ ಡೆಸ್ಕ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೋ ಇಲ್ಲವೋ ಗೊತ್ತಿಲ್ಲ, ಈ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಸರಿಯಾದ ಮಾಹಿತಿಯೂ ಇಲ್ಲ, ಪ್ರಚಾರವೂ ಇಲ್ಲ” ಎಂದು ವಿದ್ಯಾರ್ಥಿ ಪಾಲಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಇಲಾಖೆಗಳ ನಡುವೆ ಸಮನ್ವಯತೆ ಕೊರತೆ, ವಿದ್ಯಾರ್ಥಿನಿಯರಿಗೆ ಸಂಕಷ್ಟ
“ವಿದ್ಯಾರ್ಥಿನಿಯರಿಗೆ ನಿರ್ಭಯ ವಾತಾವರಣ ಮತ್ತು ಅವರ ಹಕ್ಕುಗಳ ರಕ್ಷಣೆಗೆ ಕಾಯ್ದೆ/ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕಾದ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಗಳ ಸಮನ್ವಯತೆ ಹಾಗೂ ಮೇಲಧಿಕಾರಿಗಳ ನಿರ್ದೇಶನದ ಕೊರತೆಯಿಂದ ನಗರ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರು ಭಯದ ವಾತಾವರಣದಲ್ಲೇ ಶಿಕ್ಷಣ ಪಡೆಯುವಂತಾಗಿದೆ. ಇನ್ನೂ ಕೆಲವುಕಡೆ ದುರ್ಘಟನೆ ನಡೆದ ನಂತರ ಅಧಿಕಾರಿಗಳು ಭೇಟಿ ಕೊಟ್ಟು ಇಲಾಖಾ ವರದಿ ಮಾಡುವಷ್ಟಕ್ಕೆ ಮಾತ್ರ ಸೀಮಿತಿಗೊಂಡಿದ್ದಾರೆ” ಎಂದು ವಿದ್ಯಾರ್ಥಿ ಸಂಘಟನೆಯ ಮುಖಂಡರೊಬ್ಬರು ಹೇಳುತ್ತಾರೆ.

Namma Sindhanuru Click For Breaking & Local News
ಸಿಂಧನೂರಿನಲ್ಲಿ ದಿನಾಂಕ: 30-06-2026ರಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಗರದ ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ಮೇಲಾಗುತ್ತಿರುವ ದೌರ್ಜನ್ಯ ಖಂಡಿಸಿ ತಹಸಿಲ್‌ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.
Namma Sindhanuru Click For Breaking & Local News
ಸಿಂಧನೂರಿನಲ್ಲಿ ದಿನಾಂಕ: 30-06-2026ರಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ತಹಸಿಲ್‌ ಕಾರ್ಯಾಲಯದ ಮುಂದೆ ನಡೆಸಿದ ಹೋರಾಟದಲ್ಲಿ ವಿದ್ಯಾರ್ಥಿನಿಯರು ಹಕ್ಕೊತ್ತಾಯದ ಭಿತ್ತಿಪತ್ರವನ್ನು ಪ್ರದರ್ಶಿಸಿದರು.

Spread the love

Leave a Reply

Your email address will not be published. Required fields are marked *