ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 8, 2026
ನಗರದ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ದೇವೇಂದ್ರಪ್ಪ ಜಾಜಿ ಅವರಿಗೆ “ಕನಕ ಶರೀಫ ಕಾವ್ಯ ಪುರಸ್ಕಾರ- 2023” ಪ್ರಶಸ್ತಿ ದೊರೆತಿದೆ.
“ಡಾ.ಟಿ.ಬಿ. ಸೋಲಬಕ್ಕನವರ 79ನೇ ಜನ್ಮದಿನದ ಸ್ಮರಣಾರ್ಥ ಉತ್ತರ ರಾಕ್ ಗಾರ್ಡನ್ ಗೋಟಗೋಡಿ ಹಾಗೂ ಉತ್ತರ ಸಾಹಿತ್ಯ ವೇದಿಕೆ ಹೆಬಸೂರ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಾವ್ಯ ಮತ್ತು ಗಜಲ್ ಗೋಷ್ಠಿ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಜುಲೈ 11ರಂದು ಶಿಗ್ಗಾವಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಅಂದು ಪ್ರಶಸ್ತಿ ಪ್ರಧಾನ ಮಾಡಲಾಗುವದು” ಎಂದು ಉತ್ತರ ಸಾಹಿತ್ಯ ವೇದಿಕೆ ಶಿಗ್ಗಾವಿಯ ಕಾರ್ಯದರ್ಶಿ ಹೆಬಸೂರ್ ರಂಜಾನ್ ಅವರು ಬುಧವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಸ್ತುತ “ಕುವೆಂಪು ಭಾಷಾ ಭಾರತಿ”ಪ್ರಾಧಿಕಾರದ ಸದಸ್ಯರಾಗಿರುವ ದೇವೇಂದ್ರಪ್ಪ ಜಾಜಿ ಅವರು ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿ ಗಮನ ಸೆಳೆದಿದ್ದಾರೆ.
