ಸಿಂಧನೂರು: ಜೋಳದ ಬಾಕಿ ಹಣ 282.70 ಕೋಟಿ ರೂ ರೈತರಿಗೆ ಶೀಘ್ರ ಪಾವತಿಸಬೇಕು ಹಾಗೂ ಮಳೆಯಿಲ್ಲದೇ ಹಾನಿಗೀಡಾದ ಬೆಳೆಗಳಿಗೆ ಸರ್ಕಾರ ಪರಿಹಾರ ನೀಡಲಿ: ಮಾಜಿ ಸಚಿವ ವೆಂಕಟರಾವ್ ನಾಡಗೌಡ ಆಗ್ರಹ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 7, 2026

“ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರು ಜೋಳ ಮಾರಾಟ ಮಾಡಿ ನಾಲ್ಕಾರು ತಿಂಗಳು ಕಳೆದರೂ ಹಣ ಪಾವತಿ ಮಾಡುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಬಾಕಿಯಿರುವ 282.70 ಕೋಟಿ ರೂಪಾಯಿಯನ್ನು ರೈತರ ಖಾತೆಗಳಿಗೆ ಕೂಡಲೇ ಜಮಾ ಮಾಡಬೇಕು ಹಾಗೂ ಮುಂಗಾರು ಮಳೆ ಅಭಾವದಿಂದ ಆರ್ಥಿಕ ಸಂಕಷ್ಟಕ್ಕೀಡಾದ ರೈತರಿಗೆ ಬೆಳೆ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. “ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 1,25,818 ರೈತರು ಹಾಗೂ ಹಿಂಗಾರಿನಲ್ಲಿ 7,291 ರೈತರು ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಇಲ್ಲಿಯವರೆಗೆ ಕೇವಲ ಮುಂಗಾರು ಹಂಗಾಮಿನಲ್ಲಿ ನೋಂದಣಿ ಮಾಡಿಕೊಂಡಿರುವ 9,372 ರೈತರಿಗೆ ಹಣ ಪಾವತಿ ಮಾಡಲಾಗಿದೆ. ಇನ್ನುಳಿದ ರೈತರಿಗೆ ಬಾಕಿ 282.70 ಕೋಟಿ ರೂಪಾಯಿ ಪಾವತಿಸಿಲ್ಲ. ಕೇಂದ್ರ ಸರ್ಕಾರ 600ರಿಂದ 650 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದ್ದು, ಮೇಜರ್ ಹಣ ದಕ್ಷಿಣ ಕರ್ನಾಟಕ ಭಾಗದ ರಾಗಿ ಬೆಳೆಗೆ ಪಾವತಿಯಾಗಿದೆ ಎಂಬ ಮಾಹಿತಿ ಇದೆ. ಇನ್ನೂ ನಮ್ಮ ಜಿಲ್ಲೆಗೆ ಬಾಕಿ ಹಣ ಬಂದಿಲ್ಲ. ತಾವು ಆಡಳಿತಲ್ಲಿದ್ದಾಗ ಇಂತಹ ಪರಿಸ್ಥಿತಿ ಉದ್ಭವಿಸಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಮೇಲಿಂದ ಮೇಲೆ ಜೋಳ ಬೆಳೆಗಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಇದಕ್ಕೆ ಶಾಸಕರು, ಸಂಸದರ ಬೇಜವಾಬ್ದಾರಿಯೇ ಕಾರಣವಾಗಿದ್ದು, ಅವರೇ ನೇರ ಹೊಣೆಗಾರರಾಗಿದ್ದಾರೆ” ಎಂದು ಆಪಾದಿಸಿದರು.
“ಸುಳ್ಳು ಹೇಳುತ್ತಿರುವುದು ಹಂಪನಗೌಡರು ನಾನಲ್ಲ”
“ಹಂಪನಗೌಡರು 5 ಬಾರಿ ಶಾಸಕರಾಗಿದ್ದು ಹಿರಿಯರಾಗಿದ್ದಾರೆ. ಆದರೆ ಅವರೇ ಸುಳ್ಳು ಹೇಳುತ್ತಿದ್ದು, ನನ್ನ ಮೇಲೆ ಸುಳ್ಳು ಆಪಾದನೆ ಮಾಡುತ್ತಿದ್ದಾರೆ. ಜೋಳ ಬೆಳೆದ ರೈತರು ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಂಡು ತಿಂಗಳಾನುಗಟ್ಟಲೇ ಹಣಕ್ಕಾಗಿ ಅಲೆದಾಡುತ್ತಿರುವುದು ಸುಳ್ಳಾ ?” ಎಂದು ನಾಡಗೌಡ ಪ್ರಶ್ನಿಸಿದರು.
“ಬೆಳೆಹಾನಿ ಪರಿಹಾರ ಕೊಡಲಿ”
“ಮಳೆಯಾಶ್ರಿತ ಪ್ರದೇಶದಲ್ಲಿ ರೈತರು ತೊಗರಿ, ಸೂರ್ಯಕಾಂತಿ ಹಾಗೂ ಹತ್ತಿ ಬೆಳೆ ಬೆಳೆದಿದ್ದು, ಮಳೆಯಿಲ್ಲದೇ ಒಣಗಿ ಹೋಗಿದೆ. ಹಾಗಾಗಿ ಸರ್ಕಾರ ಪಾರದರ್ಶಕವಾಗಿ ಬೆಳೆ ಹಾನಿ ಸರ್ವೆ ನಡೆಸಿ, ಆರ್ಥಿಕ ಸಮಸ್ಯೆಗೆ ಸಿಲುಕಿದ ರೈತರಿಗೆ ಪರಿಹಾರ ನೀಡಬೇಕು. ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ಒದಗಿಸುವ ಮೂಲಕ ನೆರವಿಗೆ ಬರಬೇಕು” ಎಂದು ಆಗ್ರಹಿಸಿದರು.
“3 ವರ್ಷದಿಂದ ಕಾಲುವೆಗಳ ದುರಸ್ತಿಗೆ ನಯಾಪೈಸೆ ಬಿಡುಗಡೆಯಾಗಿಲ್ಲ”
“ತುಂಗಭದ್ರಾ ಎಡದಂಡೆ ವ್ಯಾಪ್ತಿಯ ವಿತರಣಾ ಕಾಲುವೆಗಳು ಅಧ್ವಾನ ಸ್ಥಿತಿಗೆ ತಲುಪಿವೆ. ಕೆಲವೊಂದು ಕಡೆ ಹೂಳು ತುಂಬಿದ್ದು, ಬಹಳಷ್ಟು ಕಡೆ ಗೇಟುಗಳು ಒಡೆದು ಹೋಗಿವೆ. ಆದರೆ ಕಳೆದ 3 ವರ್ಷಗಳಿಂದ ದುರಸ್ತಿಗೆ ರಾಜ್ಯ ಸರ್ಕಾರ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ಹೀಗಾದರೆ ರೈತರ ಹೊಲಗಳಿಗೆ ಸಮರ್ಪಕವಾಗಿ ನೀರು ಹರಿಯುವುದಾದರೂ ಹೇಗೆ ? ಹಾಗಾಗಿ ಸರ್ಕಾರ ಎಲ್ಲಾ ಕಾಲುವೆಗಳನ್ನು ದುರಸ್ತಿಗೊಳಿಸಿ ಸ್ವಚ್ಛತೆ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
“ರೈತರ ನೆರವಿಗೆ ಬಂದಿರುವುದಕ್ಕೆ ಧನ್ಯವಾದ”
“ಸರ್ಕಾರ ಕಾಲುವೆಗಳ ದುರಸ್ತಿಗೆ ಮುಂದಾಗದೇ ಇರುವುದನ್ನು ಮನಗಂಡು ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರು ಸ್ವಯಂಪ್ರೇರಣೆಯಿಂದ ವಿತರಣಾ ಕಾಲುವೆಗಳ ಸ್ವಚ್ಛತೆಗೆ ಮುಂದಾಗಿರುವುದು ಸ್ವಾಗತಾರ್ಹ ಇದನ್ನು ತಾವು ವೈಯಕ್ತಿಕವಾಗಿ ಅಭಿನಂದಿಸುತ್ತೇನೆ” ಎಂದು ನಾಡಗೌಡ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಅಶೋಕಗೌಡ ಗದ್ರಟಗಿ, ಸತ್ಯನಾರಾಯಣ, ಧರ್ಮನಗೌಡ ಮಲ್ಕಾಪುರ, ಎಸ್.ಬಿ.ಟೇಲರ್, ವೆಂಕೋಬಣ್ಣ ಕಲ್ಲೂರು, ಸುಮಿತ್ ತಡಕಲ್, ರವಿಗೌಡ ಪನ್ನೂರು, ಸೈಯ್ಯದ್ ಆಸೀಫ್ ಇನ್ನಿತರರಿದ್ದರು.


Spread the love

Leave a Reply

Your email address will not be published. Required fields are marked *