ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 7, 2026
ಸಿಂಧನೂರು ತಾಲ್ಲೂಕು ರೈತರ ಕಾರಹುಣ್ಣಿಮೆ ಸಾಂಸ್ಕೃತಿಕ ಕ್ರೀಡಾ ಉತ್ಸವ ಟ್ರಸ್ಟ್ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಹಯೋಗದಲ್ಲಿ ಜುಲೈ 9 ಹಾಗೂ 10 ರಂದು ಎರಡು ದಿನಗಳ ಕಾಲ ಜಿಲ್ಲಾ ಮಟ್ಟದ ‘ಸಿಂಧನೂರು ಮುಂಗಾರು ಕಾರ ಹುಣ್ಣಿಮೆ ಸಂಭ್ರಮ-2026’ ಆಯೋಜಿಸಲಾಗಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಚನ್ನನಗೌಡ ಮೇಟಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
“ದಿನಾಂಕ: 09-07-2026 ಗುರುವಾರ ಜಿಲ್ಲಾಮಟ್ಟ ಹಾಗೂ ದಿನಾಂಕ: 10-07-2027 ಶುಕ್ರವಾರ ತಾಲ್ಲೂಕು ಮಟ್ಟದ ಸ್ಪರ್ಧೆಗಳು ಕುಷ್ಟಗಿ ರಸ್ತೆಯಲ್ಲಿರುವ ಹಳೆ ಜಾನುವಾರು ಸಂತೆ ಮಾರುಕಟ್ಟೆಯ ಟಿ.ಎ.ಪಿ.ಎಮ್.ಸಿ.ಜಾಗದಲ್ಲಿ ಬೆಳಿಗ್ಗೆ 8 ಗಂಟೆಯಿಂದ ನಡೆಯಲಿವೆ. ಈ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಹಾಗೂ ಜಾನುವಾರುಗಳ ಮಾಲೀಕರಿಗೆ ಅದೇ ದಿನ ಸಾಯಂಕಾಲ ಗಣ್ಯರು ಬಹುಮಾನ ವಿತರಿಸುವರು. ಅಂದು ನಡೆಯುವ ಸ್ಪರ್ಧೆಯಲ್ಲಿ ತಮ್ಮ ಎತ್ತುಗಳೊಂದಿಗೆ ಭಾಗವಹಿಸುವಂತೆ” ರೈತರಿಗೆ ಅವರು ಮನವಿ ಮಾಡಿದರು.
ಸ್ಪರ್ಧೆಗಳು
“ವಿವಿಧ ತೂಕದ ಕಲ್ಲನ್ನು ಜೋಡೆತ್ತು ಹಾಗೂ ಒಂಟೆತ್ತಿನಿಂದ ನಿಗದಿಪಡಿಸಿದ ಸಮಯದಲ್ಲಿ ಎಳೆಸುವ ಸ್ಪರ್ಧೆ, ಯುವಕರಿಗೆ ಸಂಗ್ರಾಣಿ ಕಲ್ಲು, ಗುಂಡು ಕಲ್ಲು ಎತ್ತುವ ಸ್ಫರ್ಧೆ ಹಾಗೂ ಜೋಡೆತ್ತುಗಳಿಂದ ಬಂಡಿ ಓಡಿಸುವ ಸ್ಫರ್ದೆ ಏರ್ಪಡಿಸಲಾಗಿದೆ. 2.1 ಟನ್ ತೂಕದ ಕಲ್ಲನ್ನು ಎಳೆಸುವ ಸ್ಪರ್ಧೆಗೆ ರೂ.1000, ಶುಲ್ಕ ನಿಗದಿಗೊಳಿಸಲಾಗಿದೆ, ಉಳಿದ ಎಲ್ಲಾ ಸ್ಪರ್ಧೆಗಳಿಗೆ ರೂ. 500 ಕಡ್ಡಾಯವಾಗಿ ಶುಲ್ಕ ಪಾವತಿಸಿ ಹೆಸರು ನೊಂದಾಯಿಸತಕ್ಕದ್ದು, ನೋಂದಣಿ ಮಾಡಿಸಿದವರಿಗೆ ಮಾತ್ರ ಸ್ಪರ್ಧೆಯಲ್ಲಿ ಅವಕಾಶವಿರುತ್ತದೆ” ಎಂದು ಹೇಳಿದರು.
ಜುಲೈ 8 ಹೆಸರು ನೋಂದಾಯಿಸಲು ಕೊನೆಯ ದಿನ
“ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವರು ದಿನಾಂಕ: 8-7-2026 ಸಾಯಂಕಾಲ 6 ಗಂಟೆಯ ಒಳಗೆ ಎಪಿಎಂಸಿ ಕಾರ್ಯಾಲಯದಲ್ಲಿ ತಮ್ಮ ಹೆಸರನ್ನು ನೋಂದಾಯಿಸತಕ್ಕದ್ದು, ದಿನಾಂಕ: 9-7-2026 ರಂದು ನಡೆಯುವ ಸಂಗ್ರಾಣಿ ಕಲ್ಲು ಮತ್ತು ಗುಂಡುಕಲ್ಲು ಎತ್ತುವ ಸ್ಪರ್ಧೆಯಲ್ಲಿ ಮಧ್ಯಾಹ್ನ 3 ರಿಂದ ಸಿಂಧನೂರು ತಾಲೂಕಿನ 30 ಗ್ರಾ.ಪಂ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದ 5 ಗ್ರಾ.ಪಂ. ಗಳನ್ನು ಒಳಗೊಂಡ ಸ್ಪರ್ಧಾರ್ಥಿಗಳು ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ” ಎಂದು ಅವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ನರಸನಗೌಡ, ನಿಜಲಿಂಗಪ್ಪ, ವೀರೇಶ ಯಡಿಯೂರಮಠ, ರವಿಗೌಡ ಮಲ್ಲದಗುಡ್ಡ, ಭೀಮರಾಯ, ಹೊಳೆಯಪ್ಪ, ಹಗರಪ್ಪ ಗಾಳಿ, ಅಮರೇಶಪ್ಪ ಬೂತಲದಿನ್ನಿ ಇನ್ನಿತರರಿದ್ದರು.
