ಸಿಂಧನೂರು: ಜಿಲ್ಲಾಡಳಿತ, ಶಾಸಕರು ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆ ಪರಿಹರಿಸಲು ಶೀಘ್ರ ಸಭೆ ಕರೆಯಲಿ : ಡಿ.ಎಚ್.ಪೂಜಾರ್ ಆಗ್ರಹ

Spread the love

ಲೋಕಲ್ ನ್ಯೂಸ್: ಬಸವರಾಜ ಹಸಮಕಲ್
ನಮ್ಮ ಸಿಂಧನೂರು, ಏಪ್ರಿಲ್ 27

ಜಿಲ್ಲಾಡಳಿತ ಹಾಗೂ ಶಾಸಕರು ಶೀಘ್ರ ಸಭೆ ಕರೆದು, ಕಳೆದ 16 ತಿಂಗಳುಗಳಿAದ ತೀವ್ರ ಸಂಕಷ್ಟ ಎದುರಿಸುತ್ತಿರುವ ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕು ಎಂದು ಬೀದಿ ಬದಿ ವ್ಯಾಪಾರಿಗಳ ಹೋರಾಟ ಸಮಿತಿಯ ಸಂಚಾಲಕರು ಹಾಗೂ ಸಿಪಿಐ(ಎಂಎಲ್) ಮಾಸ್‌ಲೈನ್ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ್ ಆಗ್ರಹಿಸಿದರು.
ಸೋಮವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ತಾಲೂಕು ಹಾಗೂ ಜಿಲ್ಲಾಡಳಿತ ಬಡ ವ್ಯಾಪಾರಿಗಳ ನೋವಿನ ಕೂಗನ್ನು ಕೇಳಿಸಿಕೊಳ್ಳುತ್ತಿಲ್ಲ. ಅನಿವಾರ್ಯವಾಗಿ ದಿನಾಂಕ 13-04-2026 ರಿಂದ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. 15 ದಿನ ಕಳೆದರೂ ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರ್ ಅವರಿಂದ ಯಾವುದೇ ಸ್ಪಂದನೆ ದೊರೆತಿಲ್ಲ. ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಸರ್ಕಾರಿ ಹಣ್ಣಿನ ತೋಟದ ಕಾಂಪೌಂಡ್‌ಗೆ ಹೊಂದಿಕೊಂಡು 10 ಪೀಟ್ ಒಳಗಡೆ ಡಬ್ಬಾ ಅಂಗಡಿಗಳನ್ನು ಇಟ್ಟುಕೊಳ್ಳಲು ಹೇಳಿದ್ದರು. ಅವರ ಮೌಖಿಕ ಆದೇಶದ ಪ್ರಕಾರ ಏಪ್ರೀಲ್ 23, 2026 ರಂದು ಎಂಟತ್ತು ಡಬ್ಬಾ ಅಂಗಡಿಗಳನ್ನು ಇಡಲಾಗಿತ್ತು. ಆದರೆ ದಿ: 24-4-2026 ರಂದು ತಹಸೀಲ್ದಾರ್ ಹಾಗೂ ನಗರಸಭೆ ಪೌರಾಯುಕ್ತರು ತಮ್ಮ ಸಿಬ್ಬಂದಿಯೊಂದಿಗೆ ಜೆಸಿಬಿ ಯಂತ್ರದ ಮೂಲಕ ಅಂಗಡಿಗಳನ್ನು ಒಡೆದು ಹಾಕಿದರು. ಐದಾರು ಸಣ್ಣ ಸಣ್ಣ ಅಂಗಡಿಗಳನ್ನು ಕೆಡವಿದರು. ಈ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಗಳು ಕೈಮುಗಿದು ವಿನಂತಿಸಿದರೂ ಕೇಳದೇ ದೌರ್ಜನ್ಯದಿಂದ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
‘ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆ ಇಲ್ಲ’
“ಹೈಕೋರ್ಟ್ ಮತ್ತು ಭೂಕಬಳಿಕೆ ನಿಷೇಧ ಕೋರ್ಟ್ ಆದೇಶದ ಪ್ರಕಾರ ಗಂಗಾವತಿ ರಸ್ತೆಯ ಮಧ್ಯದಿಂದ 15 ಮೀಟರ್ ಬಿಟ್ಟು ಇನ್ನು 25 ಅಡಿ ಜಾಗ ಉಳಿಯುತ್ತದೆ. 10 ಅಡಿ ಅಂತರದಲ್ಲಿ ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡರೂ ಇನ್ನೂ 15 ಅಡಿ ಜಾಗ ಖಾಲಿ ಉಳಿಯುತ್ತದೆ. ಹಾಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಆದರೆ ಸುಳ್ಳು ವದಂತಿ ಹಬ್ಬಿಸಲಾಗಿದೆ” ಎಂದು ಪೂಜಾರ್ ಸ್ಪಷ್ಟಪಡಿಸಿದರು.
ಬಲಾಢ್ಯರಿಂದ ತೋಟಗಾರಿಕೆ ಇಲಾಖೆ ಜಾಗೆ ಅತಿಕ್ರಮಣ: ಆರೋಪ
“ಗಂಗಾವತಿ ರಸ್ತೆಗೆ ಹೊಂದಿಕೊಂಡಿರುವ 25 ಅಡಿ ಜಾಗವು ತೋಟಗಾರಿಕೆ ಇಲಾಖೆಗೆ ಸೇರಿದೆಯೋ ಇಲ್ಲ; ಪಿಡಬ್ಲುö್ಯಡಿಗೆ ಸೇರಿದೆಯೋ ಇದುವರೆಗೂ ಸ್ಪಷ್ಟವಾಗಿಲ್ಲ. ಆದರೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಈ ಜಾಗ ತಮಗೆ ಸೇರಿದ್ದು ಎಂದು ಬೀದಿ ಬದಿ ವ್ಯಾಪಾರಿಗಳ ಮೇಲೆ ದೌರ್ಜನ್ಯ ನಡೆಸಿ ಡಬ್ಬಾ ಅಂಗಡಿಗಳನ್ನು ಕಿತ್ತಿಸುತ್ತಿದ್ದಾರೆ. ದಿ:25-4-2026 ರಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಮಹ್ಮದ್ ಅಲಿ ಇವರು ಧರಣಿ ಸ್ಥಳಕ್ಕೆ ಬಂದಿದ್ದರು. ಅವರಿಗೆ ಬೀದಿ ವ್ಯಾಪಾರಿಗಳು ಪ್ರಶ್ನೆ ಮಾಡಿ, “ಸರ್ಕಾರಿ ಹಣ್ಣಿನ ತೋಟದ ದಕ್ಷಿಣ ಭಾಗದಲ್ಲಿ 20 ಅಡಿ ಅಗಲ ಅಂದಾಜು 500 ಅಡಿ ಉದ್ಯದ ಜಾಗವನ್ನು ಬಲಿಷ್ಠ ಶ್ರೀಮಂತರು ಅತಿಕ್ರಮಿಸಿ ಮಳಿಗೆಗಳನ್ನು ಕಟ್ಟಿದ್ದಾರೆ. ಇದಲ್ಲದೇ ಪಶ್ಚಿಮ ಭಾಗದಲ್ಲಿ ಕೂಡ ತೋಟಗಾರಿಕೆ ಇಲಾಖೆಯ ಜಾಗವನ್ನು ಅತಿಕ್ರಮಿಸಿ ದೊಡ್ಡ ದೊಡ್ಡ ಕಟ್ಟಡಗಳನ್ನು ನಿರ್ಮಿಸಿರುತ್ತಾರೆ ಎಂದು ಅವರ ಗಮನಕ್ಕೆ ತರಲಾಯಿತು. ಭೂಮಿಯನ್ನು ಸರ್ವೆ ಮಾಡಿಸಿ ಹದ್ದುಬಸ್ತು ನಿಗದಿಗೊಳಿಸಿರಿ, ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಒತ್ತುವರಿಯಾಗಿರುವ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಿ, ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ” ಎಂದು ಒತ್ತಾಯಿಸಿದಾಗ ಈ ಕುರಿತು ಮಹ್ಮದ್ ಅಲಿ ಅವರು ಸರಿಯಾದ ಉತ್ತರ ಕೊಡದೇ, ಧರಣಿ ಸ್ಥಳದಿಂದ ಹೊರಟು ಹೋದರು” ಎಂದು ಪೂಜಾರ್ ತಿಳಿಸಿದರು.
‘ಸಿಎಂ ಅವರಿಗೆ ಶಾಸಕ ಹಂಪನಗೌಡ ಬಾದರ್ಲಿ ಅವರಿಂದ ಪತ್ರ’
“ಈ ಎಲ್ಲಾ ಬೆಳವಣಿಗೆಯ ನಡುವೆ ಶಾಸಕ ಹಂಪನಗೌಡ ಬಾದರ್ಲಿ ಅವರು ದಿ: 24-4-2026 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರನ್ನು ಭೇಟಿಯಾಗಿ ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆ ಕುರಿತ ಪತ್ರ ನೀಡಿ, ತೋಟಗಾರಿಕೆ ಇಲಾಖೆಯ ಮುಂದಿನ ಜಾಗದ ಪೈಕಿ 10×10 ಜಾಗದಲ್ಲಿ ಬಾಡಿಗೆ ನಿಗದಿಮಾಡಿ ಬೀದಿ ವ್ಯಾಪಾರಿಗಳಿಗೆ ಕೊಡಬೇಕೆಂದು ಮನವಿ ಮಾಡಿದ್ದಾರೆ. ಮುಖ್ಯ ಮಂತ್ರಿಗಳಿಂದ ಆದೇಶದ ಬರುವವರಿಗೂ ಬೀದಿ ವ್ಯಾಪಾರಿಗಳಿಗೆ ಯಾವುದೇ ತೊದರೆ ಕೊಡಬಾರದೆಂದು ಹೇಳಿರುತ್ತಾರೆ. ಈ ಹಿನ್ನೆಲೆಯಲ್ಲಿ ತಾಲೂಕು ಮತ್ತು ಜಿಲ್ಲಾಡಳಿತ ಬೀದಿ ವ್ಯಾಪಾರಿಗಳಿಗೆ, ವ್ಯಾಪಾರ ಮಾಡಲು ಅನುಕೂಲ ಕಲ್ಪಿಸುವವರಿಗೆ ಧರಣಿ ಹೋರಾಟ ಮುಂದುವರಿಯುತ್ತದೆ” ಎಂದು ಅವರು ಹೇಳಿದರು.
‘ಶ್ರೀಮಂತರಿಗೊಂದು ಕಾನೂನು ಬಡವರಿಗೊಂದು ಕಾನೂನು ಇದೆಯೇ ?’: ಪ್ರಶ್ನೆ
“ಹೈಕೋರ್ಟ್ ಮತ್ತು ಭೂಕಬಳಿಕೆ ನಿಷೇಧ ಕೋರ್ಟ್ ಆದೇಶ ಕೇವಲ ಬೀದಿ ಬದಿ ವ್ಯಾಪಾರಸ್ಥರಿಗಷ್ಟೇ ಇದೆಯೇ ? ಸರ್ಕಾರಿ ಜಾಗೆ ಅತಿಕ್ರಮಿಸಿ ಕಟ್ಟಡಗಳನ್ನು ಕಟ್ಟಿರುವ ಪ್ರಭಾವಿಗಳಿಗೆ ಇಲ್ಲವೇ ? ಈ ಕುರಿತಂತೆ ಈ ಹಿಂದೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ 15 ದಿನಗಳ ಸಮಯ ಕೇಳಿ, ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ ತಿಂಗಳುಗಳೇ ಉರುಳಿದರೂ ಇದುವರೆಗೂ ಅತಿಕ್ರಮಿತ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಿಲ್ಲ. ವಿಳಂಬ ಧೋರಣೆ ಗಮನಿಸಿದರೆ ಸಿಂಧನೂರಿನಲ್ಲಿ ಶ್ರೀಮಂತರಿಗೊAದು ಕಾನೂನು ಬಡವರಿಗೊಂದು ಕಾನೂನು ಇದೆ ಎಂಬAತಾಗಿದೆ. ಇದು ಸರಿಯೇ” ಎಂದು ಡಿ.ಎಚ್.ಪೂಜಾರ್ ಪ್ರಶ್ನಿಸಿದರು.
ಡಬ್ಬಾ ಅಂಗಡಿ ಇಡುವ ಸ್ಥಳ ರಸ್ತೆ ವ್ಯಾಪ್ತಿಯದ್ದಲ್ಲ, ಅನಗತ್ಯ ವದಂತಿಗೆ ಕಿವಿಗೊಡಬೇಡಿ : ದೇವೇಂದ್ರಗೌಡ
“ಬೀದಿ ಬದಿ ವ್ಯಾಪಾರಸ್ಥರು ಡಬ್ಬಾ ಅಂಗಡಿಗಳನ್ನು ಇಡುವ ಸ್ಥಳ ರಸ್ತೆ ವ್ಯಾಪ್ತಿಗೆ ಬರುತ್ತದೆ; ಹಾಗಾಗಿ ಟ್ರಾಫಿಕ್ ಹೆಚ್ಚಿ ಅಪಘಾತಗಳಾಗುತ್ತವೆ ಸೇರಿದಂತೆ ಹೀಗೆ ಕೆಲವರು ಹಲವು ವದಂತಿಗಳನ್ನು ಹಬ್ಬಿಸುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ. ಡಬ್ಬಾ ಅಂಗಡಿ ಇಡುವ ಸ್ಥಳ ರಸ್ತೆ ಅಲ್ಲ. ತೋಟಗಾರಿಕೆ ಇಲಾಖೆಯ ಕಾಂಪೌAಡ್‌ಗೆ ಹೊಂದಿಕೊಂಡು ಡಬ್ಬಾ ಅಂಗಡಿಗಳನ್ನು ಇಟ್ಟರೂ ಇನ್ನೂ ಬಹಳಷ್ಟು ಜಾಗೆ ಖಾಲಿ ಉಳಿಯುತ್ತದೆ. ಇದರಿಂದ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ತ್ಯಾಜ್ಯ ವಸ್ತುಗಳನ್ನು ಎಸೆಯುವುದಕ್ಕೆ, ಮನಬಂದಂತೆ ವಾಹನಗಳನ್ನು ನಿಲ್ಲಿಸುವುದಕ್ಕೆ ಖಾಲಿ ಜಾಗೆ ಬಳಕೆಯಾಗುತ್ತದೆ. ಅದೇ ಜಾಗವನ್ನು ಬಾಡಿಗೆ ರೂಪದಲ್ಲಿ ಜೀವನ ಕಟ್ಟಿನಕೊಳ್ಳಲು ಕೊಡಿ ಎಂದು ಬೀದಿ ಬದಿ ವ್ಯಾಪಾರಸ್ಥರು ಕೇಳುತ್ತಿದ್ದಾರೆ. ಈ ಬೇಡಿಕೆ ನ್ಯಾಯಯುತವಾಗಿದ್ದು, ಕಳೆದ 16 ತಿಂಗಳುಗಳಿಂದ ಸಂಕಷ್ಟದಲ್ಲಿರುವ ಬೀದಿ ಬದಿ ವ್ಯಾಪಾರಸ್ಥರು ಜೀವನೋಪಾಯಕ್ಕೆ ಇಲಾಖೆಯವರು ಅನುಕೂಲ ಮಾಡಿಕೊಡಬೇಕು ಹಾಗೂ ಇನ್ನಿತರೆ ಸಂಘಟನೆಗಳವರು ಈ ಹೋರಾಟವನ್ನು ಬೆಂಬಲಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖಂಡರಾದ ಬಿ.ಎನ್.ಯರದಿಹಾಳ, ಖಾಸಿಂಸಾಬ್, ಮಂಜುನಾಥ ಗಾಂಧೀನಗರ, ರಸೂಲ್‌ಸಾಬ್, ಹುಸೇನ್‌ಬಾಷಾ, ಚಂದ್ರಶೇಖರ ಗೊರಬಾಳ ಸೇರಿದಂತೆ ಇನ್ನಿತರರಿದ್ದರರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *