ಸಿಂಧನೂರು: ಬೇಡಿಕೆ ಈಡೇರುವವರೆಗೂ ಜಾಗಬಿಟ್ಟು ಕದಲುವುದಿಲ್ಲ: ಬೀದಿ ವ್ಯಾಪಾರಸ್ಥರ ಪಟ್ಟು

Spread the love

ಲೋಕಲ್ ನ್ಯೂಸ್: ಬಸವರಾಜ ಹಸಮಕಲ್
ನಮ್ಮ ಸಿಂಧನೂರು, ಏಪ್ರಿಲ್ 25, 2026

ನಮ್ಮ ಡಬ್ಬಾ ಅಂಗಡಿಗಳನ್ನು ಕಳೆದ ವರ್ಷ ಏಕಾಏಕಿ ಕಿತ್ತಿಹಾಕಿ ಬದುಕುವ ಹಕ್ಕನ್ನು ಕಿತ್ತಿಕೊಳ್ಳಲಾಗಿದೆ. ಕಾನೂನಿನ ಹೆಸರಿನಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತಗಳು ದಬ್ಬಾಳಿಕೆ ನಡೆಸುತ್ತಿವೆ. ಶಾಸಕರು ಮೌಖಿಕವಾಗಿ ಸೂಚಿಸಿದರೂ ಅಧಿಕಾರಿಗಳು ಜೀವನೋಪಾಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಹಾಗಾಗಿ ನಮಗೆ ತೋಟಗಾರಿಕೆ ಇಲಾಖೆಯ ಮುಂದಿನ ಪ್ರದೇಶದಲ್ಲಿ ಜಾಗೆ ಗುರುತಿಸಿ ಕೊಡುವವರೆಗೂ ಧರಣಿ ಹೋರಾಟದ ಜಾಗಬಿಟ್ಟು ಕದಲುವುದಿಲ್ಲ ಎಂದು ಬೀದಿ ಬದಿ ವ್ಯಾಪಾರಿಗಳ ಹೋರಾಟ ಸಮಿತಿಯವರು ಪಟ್ಟು ಹಿಡಿದಿದ್ದಾರೆ.
ತೋಟಗಾರಿಕೆ ಇಲಾಖೆ ಅಧಿಕಾರಿ, ಪ್ರತಿಭಟನಾಕಾರರ ನಡುವೆ ವಾಗ್ವಾದ
ಶನಿವಾರ ಮಧ್ಯಾಹ್ನ ತೋಟಗಾರಿಕೆ ಇಲಾಖೆಯ ಅಧಿಕಾರಿ ಮಹ್ಮದ್ ಅಲಿ ಅವರು ಧರಣಿ ನಿರತ ಪ್ರತಿಭಟನಾಕಾರರನ್ನು ಮನವೊಲಿಸಲು ಯತ್ನಿಸಿದಾಗ, ಹೋರಾಟ ಸಮಿತಿಯ ಕಾರ್ಯಕರ್ತರು ಹಾಗೂ ಅಧಿಕಾರಿಗಳ ನಡುವೆ ಪರಸ್ಪರ ವಾಗ್ವಾದ ನಡೆಯಿತು. “ತೋಟಗಾರಿಕೆ ಇಲಾಖೆಗೆ ಸೇರಿದ ಜಾಗೆಯಲ್ಲಿ ಡಬ್ಬಾ ಅಂಗಡಿಗಳನ್ನು ಇಟ್ಟುಕೊಳ್ಳಲು ಯಾವುದೇ ರೀತಿಯ ಅವಕಾಶವಿರುವುದಿಲ್ಲ, ಈ ಬಗ್ಗೆ ನಮ್ಮ ಮೇಲಧಿಕಾರಿಗಳಿಂದ ನಮಗೆ ಯಾವುದೇ ರೀತಿಯ ಆದೇಶವೂ ಬಂದಿರುವುದಿಲ್ಲ. ಹಾಗಾಗಿ ಡಬ್ಬಾ ಅಂಗಡಿಗಳನ್ನು ಯಾರೂ ಇಡಬಾರದು” ಎಂದು ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಾಕಾರರು, “ತೋಟಗಾರಿಕೆ ಇಲಾಖೆಗೆ ಸೇರಿದ ಜಾಗೆ ಎಂದು ಹೇಳುವ ನೀವು, ಹಾಗಾದರೆ ಇಲಾಖೆ ವ್ಯಾಪ್ತಿಯ ಜಮೀನಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡಿ, ಎಲ್ಲಿಂದ ಎಲ್ಲಿಯವರೆಗೆ ಅದರ ಜಾಗೆ ಇದೆ ಎಂಬ ಬಗ್ಗೆ ಹದ್ದುಬಸ್ತ್ ಗುರುತಿಸಿ. ಯಾವುದೇ ರೀತಿಯ ಸ್ಪಷ್ಟ ದಾಖಲೆಗಳಿಲ್ಲದೇ, ಬೀದಿ ಬದಿ ವ್ಯಾಪಾರಸ್ಥರು ಜೀವನೋಪಾಯಕ್ಕೆ ಸಣ್ಣಪುಟ್ಟ ಡಬ್ಬಾ ಅಂಗಡಿಗಳನ್ನಿಟ್ಟುಕೊಳ್ಳುವುದಕ್ಕೆ ತಡೆಯೊಡ್ಡುವುದು ಸರಿಯಲ್ಲ” ಎಂದು ಪ್ರಶ್ನಿಸಿದರು. ಇದಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿ ಸೂಕ್ತ ಉತ್ತರ ನೀಡದಿದ್ದಾಗ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ, ಘೋಷಣೆಗಳನ್ನು ಕೂಗಿದರು. ಈ ವೇಳೆ ಸಿಪಿಐ ವೀರಾರೆಡ್ಡಿ ಸೇರಿದಂತೆ ಪೋಲೀಸ್ ಸಿಬ್ಬಂದಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Namma Sindhanuru Click For Breaking & Local News

ಶಾಸಕರ ಸೂಚನೆ, ತಾಲ್ಲೂಕಾಡಳಿತ ಕಡೆಗಣನೆ : ಪ್ರತಿಭಟನಾಕಾರರ ಆರೋಪ
“ಬೀದಿಬದಿಯ ಸಣ್ಣಪುಟ್ಟ ವ್ಯಾಪಾರಸ್ಥರು ಒಂದೂವರೆ ವರ್ಷದಿಂದ ಕೆಲಸ ಕಳೆದುಕೊಂಡು ಬೀದಿಪಾಲಾಗಿದ್ದೇವೆ. ಬಹಳಷ್ಟು ಜನರು ಜೀವನ ನಿರ್ವಹಣೆಗೆ ಬೇರೆ ದಾರಿಯಿಲ್ಲದೇ ಊರುಬಿಟ್ಟು ಹೋಗಿದ್ದಾರೆ. ಇನ್ನೂ ಹಲವರು ಸಾಲ-ಸೋಲ ತೀರಿಸಲಾಗದೇ ಆರ್ಥಿಕ ಸಮಸ್ಯೆಗೆ ಗುರಿಯಾಗಿದ್ದಾರೆ ಹೀಗೆ ಬೀದಿ ಬದಿ ವ್ಯಾಪಾರಸ್ಥರು ಅನುಭವಿಸುತ್ತಿರುವ ಹತ್ತು ಹಲವು ಸಮಸ್ಯೆಗಳ ಬಗ್ಗೆ ಶಾಸಕ ಹಂಪನಗೌಡ ಬಾದರ್ಲಿ ಅವರಲ್ಲಿ ತಿಳಿಸಿದಾಗ, ತೋಟಗಾರಿಕೆ ಇಲಾಖೆಯ ಕಾಂಪೌಂಡ್‌ಗೆ ಹೊಂದಿಕೊಂಡು, ಯಾವುದೇ ರೀತಿಯ ಸಮಸ್ಯೆ ಆಗದಂತೆ ಹತ್ತು ಫೀಟ್ ಅಂತರದ ಒಳಗೆ ನಗರಸಭೆಯವರು ಈ ಹಿಂದೆ ತಯಾರಿಸಿದ ಪಟ್ಟಿಯ ಅನ್ವಯ 127 ಡಬ್ಬಾ ಅಂಗಡಿಗಳನ್ನು ಮಾತ್ರ ಇಟ್ಟುಕೊಳ್ಳಲು ಸೂಚಿಸಿರುತ್ತಾರೆ. ಹಾಗಾಗಿ ಡಬ್ಬಾ ಅಂಗಡಿಗಳನ್ನು ಇಟ್ಟುಕೊಳ್ಳಲು ಮುಂದಾಗಿರುತ್ತೇವೆ. ಆದರೆ ತಹಸೀಲ್ದಾರ್ ಹಾಗೂ ನಗರಸಭೆ ಅಧಿಕಾರಿಗಳು ಏಕಾಏಕಿ ಬಂದು ಸಣ್ಣಪುಟ್ಟ ಡಬ್ಬಾ ಅಂಗಡಿಗಳನ್ನು ಹಿಟಾಚಿಗಳ ಮೂಲಕ ಕಿತ್ತಿಹಾಕಿದ್ದಾರೆ. ಅಧಿಕಾರಿಗಳು ಶಾಸಕರ ಸೂಚನೆಯನ್ನೂ ಪಾಲಿಸದೇ ಕಡೆಗಣಿಸಿರುತ್ತಾರೆ” ಎಂದು ಬೀದಿಬದಿ ವ್ಯಾಪಾರಿ ಖಾಸಿಂಸಾಬ್ ಕಾರ್ಪೆಂಟರ್ ಆಪಾದಿಸಿದ್ದಾರೆ.

Namma Sindhanuru Click For Breaking & Local News

ಪ್ರಭಾವಿಗಳಿಗೆ ಒಂದು ನ್ಯಾಯ, ಬೀದಿ ಬದಿ ವ್ಯಾಪಾರಿಗಳೊಂದು ನ್ಯಾಯ: ರಮೇಶ ಪಾಟೀಲ್ ಬೇರಿಗಿ ಆಕ್ರೋಶ
“ನಗರದ ತೋಟಗಾರಿಕೆ ಇಲಾಖೆಯ ಜಮೀನನ್ನು ಸುತ್ತಮುತ್ತಲಿನ ಕೆಲವು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಇಲಾಖೆ ವ್ಯಾಪ್ತಿಯ ಜಮೀನನ್ನು ತ್ಯಾಜ್ಯ, ನಿರುಪಯುಕ್ತ ವಸ್ತುಗಳು ಎಸೆಯುವ ತಾಣ, ಚರಂಡಿ ನೀರು ಹರಿಸುವ ಪ್ರದೇಶವನ್ನಾಗಿ ಮಾಡಿಕೊಂಡಿದ್ದಾರೆ. ಅಂತವರ ಮೇಲೆ ಇದುವರೆಗೂ ಇಲಾಖೆಯವರು ಯಾವುದೇ ನೊಟೀಸ್ ನೀಡಿಲ್ಲ. ಆದರೆ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಕುಟುಂಬ ನಡೆಸುವ ಬಡ ವ್ಯಾಪಾರಿಗಳ ಮೇಲೆ ಕಾನೂನಿನ ಹೆಸರಿನಲ್ಲಿ ದಬ್ಬಾಳಿಕೆ ನಡೆಸುವ ಮೂಲಕ ಬದುಕುವ ಹಕ್ಕನ್ನೇ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ಕಸಿದುಕೊಳ್ಳಲು ಮುಂದಾಗಿವೆೆ. ಇದು ದುರ್ಬಲರಿಗೊಂದು ನ್ಯಾಯ, ಪ್ರಬಲರಿಗೊಂದು ಎನ್ನುವಂತಾಗಿದೆ. ಹಾಗಾಗಿ ಬೀದಿ ಬದಿ ವ್ಯಾಪಾರಸ್ಥರಿಗೆ ಡಬ್ಬಾ ಅಂಗಡಿಗಳನ್ನಿಟ್ಟುಕೊಳ್ಳಲು ಅವಕಾಶ ಮಾಡಿಕೊಡಲೇಬೇಕು” ಎಂದು ಹೋರಾಟ ಸಮಿತಿಯ ಸಂಚಾಲಕ ರಮೇಶ ಪಾಟೀಲ್ ಬೇರಿಗಿ ಆಗ್ರಹಿಸಿದರು.

Namma Sindhanuru Click For Breaking & Local News

‘ತೋಟಗಾರಿಕೆ ಇಲಾಖೆಯ ಜಾಗದ ಹದ್ದುಬಸ್ತ್ ಮಾಡಿಸಿ’ : ಡಿ.ಎಚ್.ಪೂಜಾರ್ ಆಗ್ರಹ
“ಕಳೆದ ಹಲವು ವರ್ಷಗಳಿಂದ ತೋಟಗಾರಿಕೆ ಇಲಾಖೆಯ ದಕ್ಷಿಣ ಭಾಗದ ಜಾಗವನ್ನು ಅತಿಕ್ರಮಿಸಲಾಗಿದೆ. ಅಲ್ಲದೇ ಕೆಲವರು ಅಕ್ರಮವಾಗಿ ಶೆಡ್ಡುಗಳನ್ನು ಹಾಕಿಸಿ ಬಾಡಿಗೆ ಪಡೆಯುತ್ತಿದ್ದಾರೆ. ಹಾಗಾಗಿ ಕೂಡಲೇ ತೋಟಗಾರಿಕೆ ಇಲಾಖೆಯವರು ಸರ್ವೆ ಮಾಡಿಸಿ, ಹದ್ದುಬಸ್ತ್ ಗುರುತಿಸಿ, ಅತಿಕ್ರಮಣವಾಗಿರುವ ಭೂಮಿಯನ್ನು ಇಲಾಖೆಗೆ ವಾಪಸ್ ಪಡೆಯಬೇಕು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಬೀದಿ ಬದಿ ವ್ಯಾಪಾರಸ್ಥರಿಗೆ ಸಣ್ಣಪುಟ್ಟ ವ್ಯಾಪಾರ ಮಾಡಿಕೊಳ್ಳಲು, ಬದುಕುವ ಹಕ್ಕನ್ನು ಖಾತ್ರಿಪಡಿಸಲು ತೋಟಗಾರಿಕೆ ಇಲಾಖೆಯ ಕಾಂಪೌಂಡ್ ಮುಂದಿನ ಜಾಗೆಯನ್ನು ನೀಡಬೇಕು” ಎಂದು ಸಿಪಿಐ(ಎಂಎಲ್) ಮಾಸ್‌ಲೈನ್ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ್ ಒತ್ತಾಯಿಸಿದರು.
‘ಶಾಸಕರು, ಜಿಲ್ಲಾ ಮತ್ತು ತಾಲೂಕು ಆಡಳಿತ ಬೀದಿ ಬದಿ ವ್ಯಾಪಾಸ್ಥರ ಬೇಡಿಕೆ ಈಡೇರಿಸಲಿ’: ಚಂದ್ರಶೇಖರ ಗೊರಬಾಳ
ಚಂದ್ರಶೇಖರ ಗೊರಬಾಳ ಮಾತನಾಡಿ, “ಬೀದಿ ಬದಿ ವ್ಯಾಪಾರಸ್ಥರು ಸಣ್ಣಪುಟ್ಟ ವ್ಯಾಪಾರವನ್ನೇ ನಂಬಿಕೊಂಡಿದ್ದು, ಕಳೆದ ವರ್ಷದಿಂದ ಜೀವನ ನಿರ್ವಹಣೆಗೆ ಆಸರೆಯಾಗಿದ್ದ ಉದ್ಯೋಗವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನೆರವಿಗೆ ಬರಬೇಕಾದ ಸರ್ಕಾರ, ಜಿಲ್ಲಾ ಮತ್ತು ತಾಲೂಕು ಆಡಳಿತಗಳು ಅವರ ಮೇಲೆ ದಬ್ಬಾಳಿಕೆ ಮಾಡುವುದು ಅಪ್ರಜಾತಾಂತ್ರಿಕ ನಡೆಯಾಗಿದೆ. ಕೂಡಲೇ ಶಾಸಕರು ಹಾಗೂ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಬೀದಿ ಬದಿ ವ್ಯಾಪಾರಸ್ಥರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೋರಾಟಗಾರ ಚಂದ್ರಶೇಖರ ಗೊರಬಾಳ ಆಗ್ರಹಿಸಿದರು. ಪ್ರತಿಭಟನಾ ಧರಣಿಯಲ್ಲಿ ಬಿ.ಎನ್.ಯರದಿಹಾಳ, ಬೀದಿ ಬದಿ ವ್ಯಾಪಾರಸ್ಥರಾದ ಅಸ್ಲಾಂ, ರಹೀಮ್, ಜಾಗೀರಸಾಬ್, ಹುಸೇನ್‌ಸಾಬ್, ರಸೂಲ್‌ಸಾಬ್, ಅಜ್ಜು ಸೇರಿದಂತೆ ಇನ್ನಿತರರಿದ್ದರು.
ಶಾಸಕರತ್ತ ಪ್ರತಿಭಟನಾಕಾರರ ಚಿತ್ತ ?
ಬೀದಿ ಬದಿ ವ್ಯಾಪಾರಸ್ಥರ ಹೋರಾಟ ದಿನದಿಂದ ದಿನಕ್ಕೆ ವ್ಯಾಪಕತೆ ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆ ಪರಿಹರಿಸುವಂತೆ ಹೋರಾಟ ಸಮಿತಿಯು ಈಗಾಗಲೇ ಹಲವು ಬಾರಿ ಶಾಸಕ ಹಂಪನಗೌಡ ಬಾದರ್ಲಿ ಅವರನ್ನು ಭೇಟಿ ಮಾಡಿದ್ದು ಚರ್ಚಿಸಿದ್ದಿದೆ. ಈ ನಡುವೆ ಪುನಃ ಶಾಸಕರನ್ನು ಭೇಟಿ ಮಾಡಿ ಉದ್ಭವಿಸಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಹಾಗೂ ಬೀದಿ ಬದಿ ವ್ಯಾಪಾರಸ್ಥರ ಇನ್ನಿತರೆ ಬೇಡಿಕೆಗಳ ಕುರಿತಂತೆ ಚರ್ಚಿಸಲು ಶೀಘ್ರ ಅಧಿಕಾರಿಗಳ ಸಭೆ ಕರೆಯುವಂತೆ ಒತ್ತಾಯಿಸಲಾಗುವುದು ಹೋರಾಟ ಸಮಿತಿಯ ಮೂಲಗಳು ತಿಳಿಸಿವೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *