ಸ್ಪೆಷಲ್ ಸ್ಟೋರಿ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 04
“ಒಂದ್ ತಿಂಗಳಾತಿ ರೀ ಮಕ್ಳು, ಮರಿಗೆ ಒಂದೇ ಸವನೆ ಸುಸ್ತಿ ಕಾಡ್ತೈತಿ. ದುಡುದು ದುಡ್ಡೆಲ್ಲಾ ಆಸ್ಪತ್ರೆಗೆ ಇಡಂಗ ಆಗೇತಿ. ಜನ್ರಿಗೆ ಇಷ್ಟೆಲ್ಲಾ ತ್ರಾಸ್ ಆದ್ರೂ ತಾಲೂಕು ಆರೋಗ್ಯ ಇಲಾಖೆಯವ್ರು ಮಾತ್ರ ತುಟಿಪಿಟಕ್ ಅಂದಿಲ್ಲ. ಇನ್ನೂ ಪ್ರಾಥಮಿಕ ಆರೋಗ್ಯ ಕೇಂದ್ರದಾಗ ಮಕ್ಳಿಗೆ ಸರೀಗೆ ಚಿಕಿತ್ಸೆ ಸಿಗ್ತಾಯಿಲ್ಲ, ತಾಲೂಕು ಆಸ್ಪತ್ರೆಯಲ್ಲೂ ಮಕ್ಳ ವಿಭಾಗ ಆಟಕ್ಕುಂಟು ಲೆಕ್ಕಕ್ಕಿಲ್ಲದಂಗ ಐತಿ. ಈ ಮಳಿಗಾಲದಾಗ ಕೆಲ್ಸಾ ಇಲ್ಲ-ಬೊಗ್ಸಿ ಇಲ್ಲ. ಸಾಲ-ಸೋಲ ಮಾಡಿ ಮಕ್ಳನ್ ತೋರೋಸೋದ್ರಾಗ, ಕುತಿಗೆಗೆ ಬಂದೈತಿ ನೋಡ್ರಿ” ಎಂದು ನಾಗರಿಕರು ಕಿಡಿಕಾರಿದ್ದಾರೆ.
ಟಿಎಚ್‌ಒ ಬೇಜವಾಬ್ದಾರಿ ಆರೋಪ
ವಾತಾವರಣದಲ್ಲಿನ ವೈಪರೀತ್ಯದಿಂದ ಕಳೆದ ಒಂದು ತಿಂಗಳಿನಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿ ಅನಾರೋಗ್ಯ ಸಮಸ್ಯೆ ಕಂಡುಬರುತ್ತಿದ್ದರೂ ಆರಂಭದಲ್ಲಿಯೇ ಎಲ್ಲಾ ಪಿಎಚ್‌ಸಿಗಳಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಅಧಿಕಾರಿಗಳು, ಸಿಬ್ಬಂದಿ ಸಭೆ ಕರೆದು ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೆ, ಇಷ್ಟೊಂದು ಪ್ರಕರಣಗಳು ಉದ್ಭವಿಸುತ್ತಿರಲಿಲ್ಲ. ತಾಲೂಕು ಆರೋಗ್ಯ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ತಾಲೂಕು ಆಸ್ಪತ್ರೆಯಲ್ಲಿನ ಮಕ್ಕಳ ವಿಭಾಗದಲ್ಲಿ ಅಗತ್ಯ ವೈದ್ಯರು, ಸಿಬ್ಬಂದಿಯ ಕೊರತೆಯಿಂದ ಪರಿಸ್ಥಿತಿ ಹತೋಟಿ ಮೀರಿದೆ. ಏನೇ ಕೇಳಿದರೂ ವಾತಾವರಣದ ವೈಪರೀತ್ಯ ಎಂದು ಹಾರಿಕೆಯ ಮಾತನಾಡುತ್ತಾರೆ ಎಂದು ಸಂಘಟನೆಯ ಮುಖಂಡರೊಬ್ಬರು ದೂರುತ್ತಾರೆ.
‘ಮಕ್ಕಳ ಅನಾರೋಗ್ಯ ಪ್ರಕರಣ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ’
“ಮಕ್ಕಳಲ್ಲಿ ಅನಾರೋಗ್ಯ ಹೆಚ್ಚಿ ತೀವ್ರ ಸಮಸ್ಯೆ ಅನುಭವಿಸುತ್ತಿದ್ದರೂ ತಾಲೂಕು ಆರೋಗ್ಯ ಇಲಾಖೆ ಇದುವರೆಗೂ ಗಂಭೀರವಾಗಿ ಪರಿಗಣಿಸಿಲ್ಲ. ಜಾಣಮೌನ ವಹಿಸಿದೆ. ಇದುವರೆಗೂ ತಾಲೂಕು ಆರೋಗ್ಯ ಇಲಾಖೆ ಟಿಎಚ್‌ಒ ಅವರು ಅಧಿಕಾರಿಗಳ, ಸಿಬ್ಬಂದಿಗಳ ಸಭೆ ನಡೆಸಿಲ್ಲ ಎಂಬ ಮಾಹಿತಿ ಇದೆ. ಇಂತಹ ಅಧಿಕಾರಿಗಳು ಇದ್ದರೆ ಜನಸಾಮಾನ್ಯರ ಗತಿ ಏನು ? ದುಡ್ಡು ಇದ್ದವರು ಖಾಸಗಿ ಆಸ್ಪತ್ರೆಯಲ್ಲಿ ತೋರಿಸುತ್ತಾರೆ. ಈ ಖಾಸಗಿ ಆಸ್ಪತ್ರೆಯವರೂ ಸಹ ನಮ್ಮಲ್ಲಿ ಬೆಡ್ ಇಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ ನಮ್ಮ ಮಕ್ಕಳನ್ನು ಕರೆದುಕೊಂಡು ಎಲ್ಲಿಗೆ ಹೋಗಬೇಕು’ ಎಂದು ಮಕ್ಕಳ ಪಾಲಕರೊಬ್ಬರು ಪ್ರಶ್ನಿಸುತ್ತಾರೆ.
ಕಾಟಾಚಾರಕ್ಕೆ ಎಲ್‌ಟಿಗಳ ಸಭೆ ?
‘ಮಕ್ಕಳ ಅನಾರೋಗ್ಯ ಪ್ರಕರಣಗಳು ಕುರಿತು ವ್ಯಾಪಕ ಚರ್ಚೆಯಾದ ನಂತರ ಟಿಎಚ್‌ಒ ನೇತೃತ್ವದಲ್ಲಿ ಕಾಟಾಚಾರಕ್ಕೆ ಎನ್ನುವಂತೆ ಗುರುವಾರ ಮಧ್ಯಾಹ್ನ ಪಿಎಚ್‌ಸಿಯ ಎಲ್‌ಟಿಗಳ (ಲ್ಯಾಬ್ ಟೆಕ್ನಿಷಿಯನ್) ಸಭೆ ನಡೆದಿದೆ ಎಂದು ತಿಳಿದುಬಂದಿದೆ. ಬೇಕು ಬೇಡ ಈ ರೀತಿ ಸಭೆ ಮಾಡಿದರೆ ಯಾರಿಗೆ ಅನುಕೂಲ’ ಎಂದು ಸಾರ್ವಜನಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
