ಸ್ಪೆಷಲ್ ಸ್ಟೋರಿ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 03
ಕಳೆದ ಹಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ರೈತರು, ಜನಸಾಮಾನ್ಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ವಾತಾವರಣದ ವೈಪರೀತ್ಯದಿಂದ ಮಕ್ಕಳಿಗೆ ವೈರಲ್ ಫಿವರ್ ಬೆಂಬಿಡದೇ ಕಾಡುತ್ತಿದೆ. ಪಾಲಕರು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು, ತಾಲೂಕಾಡಳಿತದ ಅಧಿಕಾರಿಗಳು, ದಸರಾ ಜಪ ಮಾಡುತ್ತಿರುವುದು ಜನಸಾಮಾನ್ಯರ ಆಕ್ಷೇಪಕ್ಕೆ ಕಾರಣವಾಗಿದೆ.
“ಮಕ್ಕಳು ಕೆಮ್ಮು, ನೆಗಡಿ, ಜ್ವರ, ವಾಂತಿ ಹಾಗೂ ವೈರಲ್ ಫಿವರ್‌ನಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಬಡ ಜನರು ಪಡಿಪಾಟಲು ಅನುಭವಿಸುತ್ತಿದ್ದಾರೆ. ದಿನನಿತ್ಯ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸೂರ್ಯಕಾಂತಿ, ಸಜ್ಜೆ ಬೆಳೆ ಬೆಳೆದ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಅಲ್ಲಲ್ಲಿ ಬೆಳೆ ಹಾನಿಯಾಗಿದೆ. ಇನ್ನೂ ಗ್ರಾಮೀಣ ಪ್ರದೇಶದ ರಸ್ತೆಗಳು, ನಗರ ಪ್ರದೇಶದ ರಸ್ತೆಗಳು ರಾಡಿಮಯವಾಗಿದ್ದು, ಅಧ್ವಾನ ಸ್ಥಿತಿಗೆ ತಲುಪಿವೆ. ಹಲವೆಡೆ ಸಂಪರ್ಕ ಸೇತುವೆಗಳ ಮೇಲೆ ನೀರು ಹರಿಯುತ್ತಿದೆ. ಇನ್ನೂ ಕೆಲವು ಕಡೆ ಮಣ್ಣಿನ ಮನೆಗಳು ಬಿದ್ದ ವರದಿಯಾಗಿದೆ. ಈ ಬಗ್ಗೆ ಸಭೆ ನಡೆಸಿ ಸಂಬಂಧಿಸಿದ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕಾದ ಅಧಿಕಾರಿಗಳು ಈಗಿನಿಂದಲೇ ದಸರಾ ಸಭೆ ನಡೆಸಲು ಮುಂದಾಗಿರುವುದು ಜನರನ್ನು ಸಂಪೂರ್ಣ ಮರೆತಂತಿದೆ” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಜನರು ತಾಪತ್ರಯ ಅನುಭವಿಸುತ್ತಿರುವುದು ತಾಲೂಕು ಆಡಳಿತದ ಕಣ್ಣಿಗೆ ಕಾಣುತ್ತಿಲ್ಲ”
“ತಾಲೂಕು ವ್ಯಾಪ್ತಿಯ ರೈತರು, ಜನಸಾಮಾನ್ಯರು, ಮಕ್ಕಳು ವಾತಾವರಣದ ವೈಪರೀತ್ಯದಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ತಾಲೂಕು ಆಡಳಿತದ ಹಾಗೂ ಜನಪ್ರತಿನಿಧಿಗಳ ಕಣ್ಣಿಗೆ ಕಾಣುತ್ತಿಲ್ಲ. ಇವರು ಬೇರೊಂದು ಲೋಕದಲ್ಲಿ ಇದ್ದಂತೆ ವರ್ತಿಸುತ್ತಿದ್ದಾರೆ. ಕಳೆದ ಬಾರಿಯಂತೆ ಈ ಬಾರಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮೈಸೂರು ದಸರಾ ಮಾದರಿಯಲ್ಲಿ ದಸರಾ ಮಹೋತ್ಸವ ಆಚರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಮಂಗಳವಾರದಂದು ತಹಸಿಲ್ ಕಾರ್ಯಾಲಯದಲ್ಲಿ ರೌಡಕುಂದಾ, ಮುಕ್ಕುಂದಾ, ಗೊರೇಬಾಳ, ಅಂಬಾಮಠ ಗ್ರಾಮಗಳು ಸೇರಿದಂತೆ ಈ ಭಾಗದ ವ್ಯಾಪ್ತಿಯ ಗ್ರಾಮ ಪಂಚಾಯಿತಿಯ ಅಧಿಕಾರಿಗಳ ಸಭೆ ನಡೆಸಲಾಗಿದೆಯಂತೆ. ಜನರ ಸಂಕಷ್ಟಕ್ಕೆ ಸ್ಪಂದಿಸಲು ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ನಿರ್ದೇಶನ ನೀಡುವುದಕ್ಕಿಂತ ಈ ಸಭೆಯೇ ಅವರಿಗೆ ಹೆಚ್ಚು ಮಹತ್ವದ್ದಾಗಿದೆ” ಎಂದು ನಾಗರಿಕರೊಬ್ಬರು ತಾಲೂಕು ಆಡಳಿತದ ಬೇಜವಾಬ್ದಾರಿ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ.

ಸೂರ್ಯಕಾಂತಿ, ಸಜ್ಜೆ ಬೆಳೆದ ರೈತರಿಗೆ ಮಳೆಯ ಕಾಟ, ಬೆಳೆ ನಷ್ಟ
ತಾಲೂಕಿನ ರಾಮತ್ನಾಳ, ಜಾಲವಾಡಗಿ, ದಿದ್ದಿಗಿ, ಬುದ್ದಿನ್ನಿ, ಬೆಳಗುರ್ಕಿ, ಮಾಡಸಿರವಾರ, ಗೋಮರ್ಸಿ, ಉದ್ಬಾಳ.ಜಿ, ಗೋನವಾರ, ಆಯನೂರು, ರಾಗಲಪರ್ವಿ ಸೇರಿದಂತೆ ಇನ್ನಿತರೆ ಹೋಬಳಿ ವ್ಯಾಪ್ತಿಯಲ್ಲಿ ಹಲವು ರೈತರು ಸೂರ್ಯಕಾಂತಿ ಹಾಗೂ ಸಜ್ಜೆ ಬೆಳೆದಿದ್ದು, ನಿರಂತರ ಮಳೆಯಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಕೆಲವೊಂದು ಗ್ರಾಮಗಳಲ್ಲಿ ಮಳೆಯಿಂದ ಸೂರ್ಯಕಾಂತಿ ರಾಶಿಗೆ ನೀರು ಹೊಕ್ಕಿದ್ದು, ರೈತರು ಒಣಗಿಸಲು ಮುಂದಾಗಿದ್ದಾರೆ. “ತಮಗೆ ಎದುರಾಗಿರುವ ಸಮಸ್ಯೆಯನ್ನು ಇದುವರೆಗೂ ಕೃಷಿ ಇಲಾಖೆಯ ಅಧಿಕಾರಿಗಳಾಗಲೀ, ಕಂದಾಯ ಇಲಾಖೆಯ ಅಧಿಕಾರಿಗಳಾಗಲಿ ಕೇಳಿಲ್ಲ” ಎಂದು ಈ ಭಾಗದ ರೈತರು ತಿಳಿಸಿದ್ದಾರೆ.
‘ಮಕ್ಕಳಿಗೆ ವೈರಲ್ ಫಿವರ್ ತಾಲೂಕಾಡಳಿತ, ಆರೋಗ್ಯ ಇಲಾಖೆ ದಿವ್ಯ ನಿರ್ಲಕ್ಷ್ಯ‘
“ತಾಲೂಕು ವ್ಯಾಪ್ತಿಯ ಮಕ್ಕಳಲ್ಲಿ ವೈರಲ್ ಫಿವರ್ ಹೆಚ್ಚಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಜನರು ಖಾಸಗಿ ಆಸ್ಪತ್ರೆಗೆ ಮುಗಿಬಿದ್ದಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿಯೂ ರೋಗಿಗಳ ಸಂಖ್ಯೆ ಹೆಚ್ಚಿ ವೈದ್ಯರು ಚಿಕಿತ್ಸೆ ನೀಡಲು ಒತ್ತಡ ಎದುರಿಸುತ್ತಿದ್ದಾರೆ. ಒಂದು ರೀತಿಯಲ್ಲಿ ‘ಮಕ್ಕಳ ಆರೋಗ್ಯ ತುರ್ತು ಪರಿಸ್ಥಿತಿ’ ಎದುರಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸದೇ ತಾಲೂಕಾಡಳಿತ ಮತ್ತು ಆರೋಗ್ಯ ಇಲಾಖೆ ದಿವ್ಯ ನಿರ್ಲಕ್ಷö್ಯ ವಹಿಸಿವೆ. ಇದುವರೆಗೂ ಈ ಕುರಿತು ಒಂದೇ ಒಂದು ಸಭೆಯನ್ನು ನಡೆಸಿದ ವರದಿಯಾಗಿಲ್ಲ. ಹಾಗಾದರೆ ಈ ಇಲಾಖೆಗಳು ಏನು ಮಾಡುತ್ತಿವೆ, ಇಲಾಖೆಯ ಅಧಿಕಾರಿಗಳು ಯಾವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಜನಪ್ರತಿನಿಧಿಗಳು ಎಲ್ಲಿ ಹೋಗಿದ್ದಾರೆ ?” ಎಂದು ಮಕ್ಕಳ ಪಾಲಕರು ಪ್ರಶ್ನಿಸುತ್ತಾರೆ.
————————–
ಕೋಟ್
ನಿರಂತರ ಮಳೆಯಿಂದ ತಾಲೂಕಿನ ಮಕ್ಕಳಲ್ಲಿ ವೈರಲ್ ಜ್ವರ ಬಾಧೆ ಹೆಚ್ಚಿದೆ. ಇದರಿಂದ ಪಾಲಕರು-ಪೋಷಕರು ಆತಂಕಿತರಾಗಿದ್ದಾರೆ. ಇನ್ನೂ ನಿರಂತರ ಮಳೆಯಿಂದ ಗ್ರಾಮೀಣ ರಸ್ತೆಗಳು ಕೆಟ್ಟುಹೋಗಿವೆ. ರೈತರ ಸೂರ್ಯಕಾಂತಿ, ಸಜ್ಜೆ ಬೆಳೆಗೆ ಹಾನಿಯಾಗಿದೆ. ಜನರು, ರೈತರು ತೀವ್ರ ಸಂಕಷ್ಟ ಎದುರಿಸುತ್ತಿರುವ ಸಂದಿಗ್ದ ಸಂದರ್ಭದಲ್ಲಿ ತಾಲೂಕಾಡಳಿತ, ಆರೋಗ್ಯ ಇಲಾಖೆ, ಜನಪ್ರತಿನಿಧಿಗಳು ಸಭೆ ನಡೆಸದೇ ಬೇಜವಾಬ್ದಾರಿ ವಹಿಸಿರುವುದು ಸರಿಯಲ್ಲ. ಈ ಬಗ್ಗೆ ಎಚ್ಚೆತ್ತಕೊಳ್ಳದಿದ್ದರೆ ಸಂಘಟನೆಯಿಂದ ಹೋರಾಟ ನಡೆಸಲಾಗುವುದು.
–ಡಿ.ಎಚ್.ಪೂಜಾರ್, ಸಿಪಿಐ(ಎಂಎಲ್) ಮಾಸ್‌ಲೈನ್ ರಾಜ್ಯ ಕಾರ್ಯದರ್ಶಿಗಳು
