ಸ್ಪೆಷಲ್ ಸ್ಟೋರಿ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 04
ವಾತಾವರಣದ ವೈಪರೀತ್ಯದಿಂದ ಮಕ್ಕಳಲ್ಲಿ ಉಂಟಾಗಿರುವ ಸಾಂಕ್ರಾಮಿಕ ಜ್ವರದ ಹಿನ್ನೆಲೆಯಲ್ಲಿ, ನಗರದ ಖಾಸಗಿ ಆಸ್ಪತ್ರೆಯೊಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಹೊರಡಿಸಿರುವ ಪ್ರಕಟಣೆ ಆರೋಗ್ಯ ಇಲಾಖೆಯ ನಿರ್ಲಕ್ಷö್ಯಕ್ಕೆ ಕನ್ನಡಿ ಹಿಡಿದಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಆರೋಗ್ಯ ಇಲಾಖೆ ಮಾಡಬೇಕಾದ ಕೆಲಸಗಳನ್ನು ಖಾಸಗಿಯವರು ಮಾಡುವಂತಾಗಿದೆ. ಸರ್ಕಾರಿ ಆಸ್ಪತ್ರೆಗೆ ಬಂದವರಿಗೆ ಚಿಕಿತ್ಸೆ ಒದಗಿಸುವುದು ಒತ್ತಟ್ಟಿಗಿರಲಿ, ಹವಾಮಾನ ಏರುಪೇರಾದ ಸಂದರ್ಭದಲ್ಲಿ ಸಣ್ಣ ಮಕ್ಕಳ ಆರೋಗ್ಯ ರಕ್ಷಣೆಗೆ ಸಾರ್ವಜನಿಕರು, ಮಕ್ಕಳ ಪಾಲಕರು ವಹಿಸಬೇಕಾದ ಸೂಕ್ತ ಮುನ್ನೆಚ್ಚರಿಕೆ ಕ್ರಮದ ಕುರಿತು ಪ್ರಕಟಣೆ ಹೊರಡಿಸುವ ಕೆಲಸವನ್ನೂ ಜಿಲ್ಲಾ, ತಾಲೂಕು ಆರೋಗ್ಯ ಇಲಾಖೆಗಳು ಮಾಡಿಲ್ಲ. ಇನ್ನೂ ತಾಲೂಕು, ಜಿಲ್ಲಾಡಳಿತಗಳು ಈ ಬಗ್ಗೆ ಕವಡೆ ಕಾಸಿನ ಕಾಳಜಿ ತೋರಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ಹೊರ ಹಾಕಿದ್ದಾರೆ.
‘ಪರಿಸ್ಥಿತಿಯನ್ನು ಗಂಭೀರವಾಗಿ ಅವಲೋಕಿಸಿಲ್ಲ’
“ಮಕ್ಕಳು ವೈರಲ್ ಫಿವರ್ ಸೇರಿದಂತೆ ಇನ್ನಿತರೆ ಸಾಮಾನ್ಯ ರೋಗಗಳಿಂದ ಬಳಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ, ಸೌಲಭ್ಯಗಳು ಇಲ್ಲದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಪಾಲಕರು ಸರದಿಯಲ್ಲಿ ನಿಂತು ಮುಗಿಬಿದ್ದರೂ ಈ ಬಗ್ಗೆ ಆರೋಗ್ಯ ಇಲಾಖೆ ಕಾಳಜಿತೋರಿಲ್ಲ, ಪರಿಸ್ಥಿತಿಯನ್ನು ಗಂಭೀರವಾಗಿ ಅವಲೋಕಿಸಿ ಮೇಲಧಿಕಾರಿಗಳಿಗೆ ವರದಿ ಮಾಡಿಲ್ಲ’ ಎಂದು ಸಾರ್ವಜನಿಕರೊಬ್ಬರು ದೂರಿದ್ದಾರೆ.

ಮಾದ್ಯಮದ ವರದಿ ನಂತರ ಎಚ್ಚೆತ್ತ ಸರ್ಕಾರಿ ಆಸ್ಪತ್ರೆ ವೈದ್ಯರು
ಮಕ್ಕಳಲ್ಲಿ ವೈರಲ್ ಫಿವರ್ ಕುರಿತ ವರದಿಗಳು, ವಿಡಿಯೋ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದಂತೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಎಚ್ಚೆತ್ತಿದ್ದಾರೆ. ಮಕ್ಕಳ ವಿಭಾಗದಲ್ಲಿ ಗುರುವಾರ ಬೆಳಿಗ್ಗೆ 10ಕ್ಕೂ ಹೆಚ್ಚು ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವುದು ಕಂಡುಬಂತು. ಜೊತೆಗೆ ಪಕ್ಕದಲ್ಲಿಯೇ ಇನ್ನೊಂದು ವಾರ್ಡ್ ತೆರೆದಿದ್ದು, ಬೆಡ್ ಸೇರಿದಂತೆ ಇನ್ನಿತರೆ ಪರಿಕರಗಳನ್ನು ವ್ಯವಸ್ಥಿತಗೊಳಿಸುವ ಕೆಲಸ ಪ್ರಗತಿಯಲ್ಲಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಹೆಚ್ಚಿನ ಹಣ ಭರಿಸಲಾಗದ ಬಡ ಕುಟುಂಬದ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಯತ್ತ ಕರೆತರುತ್ತಿರುವುದು ಕಂಡುಬಂತು.
