ಲೋಕಲ್ ನ್ಯೂಸ್: ಬಸವರಾಜ ಹಸಮಕಲ್
ನಮ್ಮ ಸಿಂಧನೂರು, ಏಪ್ರಿಲ್ 29, 2026
ತಾಲ್ಲೂಕಿನ ಅಲಬನೂರು ಗ್ರಾಮದಲ್ಲಿ ಆಸ್ತಿಪಾಲಿಗಾಗಿ ಜಗಳ ತೆಗೆದ ವ್ಯಕ್ತಿ ಸ್ವಂತ ಸೋದರನ ಹೆಂಡತಿಗೆ ಹೊಡೆದು, ಚಾಕುವಿನಿಂದ ಇರಿದು, ಜಗಳ ಬಿಡಿಸಲು ಬಂದ ಅಣ್ಣನ ಮಗನ ಹೊಟ್ಟೆಗೆ ತಿವಿದು ಕೊಂದ ಪೈಶಾಚಿಕ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಬಸವರಾಜ ಎಂಬಾತ ಕೊಲೆ ಆರೋಪಿಯಾಗಿದ್ದು, ಘಟನೆಯಲ್ಲಿ ಅಮೃತಾ ಸಿದ್ದಪ್ಪ ತೀವ್ರವಾಗಿ ಗಾಯಗೊಂಡರೆ, ಬಾಲಕ ನಾಗರಾಜ ತಂದೆ ಸಿದ್ದಪ್ಪ (13) ಧಾರುಣವಾಗಿ ಮೃತಪಟ್ಟಿದ್ದಾನೆ. ಗಾಯಾಳು ಅಮೃತಾ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಪ್ರಕರಣದ ಹಿನ್ನೆಲೆಯಲ್ಲಿ
ಅಲಬನೂರು ಗ್ರಾಮದ ಬಸವರಾಜ ಮತ್ತು ಸಿದ್ದಪ್ಪ ಎಂಬುವವರು ಸೋದರರಾಗಿದ್ದು, ಬಸವರಾಜ ಮದುವೆಯ ನಂತರ ಪತ್ನಿಯ ಊರಾದ ಸಿರುಗುಪ್ಪಾದ ಅಳ್ಳಿಗನೂರಿನಲ್ಲಿ ನೆಲೆಯೂರಿದ್ದಾರೆಂದು ತಿಳಿದುಬಂದಿದೆ. ವಾರದ ಹಿಂದೆ ಅಲಬನೂರಿಗೆ ಆಗಮಿಸಿದ್ದ ಬಸವರಾಜ ಪಿತ್ರಾರ್ಜಿತ 4 ಎಕರೆ ಆಸ್ತಿಯಲ್ಲಿ ತನ್ನ ಪಾಲಿಗೆ ಬರುವ ಆಸ್ತಿಯನ್ನು ನೀಡುವಂತೆ ಸೋದರನಿಗೆ ಕೇಳಿದ್ದಾರೆಂದು ಹೇಳಲಾಗುತ್ತಿದೆ. ತದನಂತರ ದಿನಾಂಕ: 29-04-2026ರಂದು ಬೆಳಿಗ್ಗೆ ಆಸ್ತಿಪಾಲು ಕೇಳಲು ತನ್ನ ಅಣ್ಣ ಸಿದ್ದಪ್ಪನ ಮನೆಗೆ ಹೋಗಿದ್ದಾನೆ. ಆ ವೇಳೆ ಸಿದ್ದಪ್ಪ ಕೆಲಸದ ನಿಮಿತ್ರ ಹೊರಗೆ ಹೋಗಿದ್ದಾರೆ. ಆ ವೇಳೆ ಅಣ್ಣನ ಹೆಂಡತಿಯೊಂದಿಗೆ ಬಸವರಾಜ ಆಸ್ತಿ ವಿಷಯ ಪ್ರಸ್ತಾಪಿಸಿ ಜಗಳ ತೆಗೆದಿದ್ದಾನೆ. ಪರಸ್ಪರ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿದೆ. ಇದರಿಂದ ಕುಪಿತನಾದ ಬಸವರಾಜ ಏಕಾಏಕಿ ಚಾಕುವಿನಿಂದ ಅತ್ತಿಗೆ ಅಮೃತಾ ಅವರ ಮೇಲೆ ದಾಳಿ ನಡೆಸಿದ್ದಾನೆ. ಇದನ್ನು ಗಮನಿಸಿದ ಅಣ್ಣ ಮಗ ನಾಗರಾಜ್ ತಡೆಯಲು ಬಂದಿದ್ದಾನೆ. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಬಸವರಾಜ ಆತನ ಹೊಟ್ಟೆಗೆ ಮನಬಂದAತೆ ಚಾಕುವಿನಿಂದ ಇರಿದಿದ್ದಾನೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.
ಅಮಾಯಕ ಬಾಲಕನ ಸಾವು, ಮರುಗಿದ ಜನ !!
ಆಸ್ತಿ ಪಾಲಿಗಾಗಿ ಪರಸ್ಪರ ಸೋದರರ ನಡುವೆ ಹಲವು ದಿನಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟ, ಬುಧವಾರ ಸ್ಪೋಟಗೊಂಡು, ಅಮಾಯಕ ಬಾಲಕನನ್ನು ಬಲಿ ತೆಗೆದುಕೊಂಡಿರುವುದಕ್ಕೆ ಗ್ರಾಮದ ಜನರು ಮಮ್ಮಲ ಮರುಗಿದರು. ಕುಳಿತು ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳದೇ, ಮಾನವೀಯತೆ ಮರೆತು ಮೃಗೀಯತೆ ತೋರುವ ಮೂಲಕ ಬಾಳಿ ಬದುಕಬೇಕಾದ ಬಾಲಕನನ್ನು ಹೆಣವಾಗಿಸಿದ್ದು ಎಷ್ಟು ಸರಿ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದವು. ಈ ಘಟನೆಯಿಂದ ಇಡೀ ಗ್ರಾಮದಲ್ಲಿ ಆತಂಕದ ವಾತಾವರಣದ ಜೊತೆಗೆ ನೀರವ ಮೌನ ಆವರಿಸಿದ್ದು ಬುಧವಾರ ಕಂಡುಬಂತು.
