ಸಿಂಧನೂರು: ಒಡಿಶಾದ ಜೀತು ಮುಂಡಾ ಪ್ರಕರಣ: ಬ್ಯಾಂಕ್ ಅಧಿಕಾರಿಗಳನ್ನು ವಜಾಗೊಳಿಸಲು ಸಿಪಿಐ(ಎಂಎಲ್) ಲಿಬರೇಶನ್ ಆಗ್ರಹ

Spread the love

ಲೋಕಲ್ ನ್ಯೂಸ್: ಬಸವರಾಜ ಹಸಮಕಲ್
ನಮ್ಮ ಸಿಂಧನೂರು, ಮೇ 2, 2026

ಒಡಿಶಾದ ಬುಡಕಟ್ಟು ಸಮುದಾಯದ ಜೀತು ಮುಂಡಾ ಅವರ ಮೇಲೆ ಅಲ್ಲಿನ ಸರ್ಕಾರಿ ಬ್ಯಾಂಕ್ ಅಧಿಕಾರಿಗಳ ಅಮಾನವೀಯ ವರ್ತನೆ ಖಂಡಿಸಿ, ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೊಳಪಡಿಸಿ, ತಪ್ಪಿತಸ್ಥ ಬ್ಯಾಂಕ್ ಅಧಿಕಾರಿಗಳನ್ನು ಹುದ್ದೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಅವರ ಮೂಲಕ ಶನಿವಾರ ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ವತಿಯಿಂದ ರಾಷ್ಟçಪತಿಗಳಿಗೆ ಮನವಿಪತ್ರ ರವಾನಿಸಲಾಯಿತು.
ಮೃತಪಡುವುದಕ್ಕೂ ಮುನ್ನ ಸಹೋದರಿ ಕರ್ಳಾ ಮುಂಡಾ ಅವರು ಒಡಿಶಾ ಗ್ರಾಮೀಣ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದ 20 ಸಾವಿರ ರೂಪಾಯಿಯನ್ನು ವಾಪಸ್ ನೀಡುವಂತೆ ಜೀತು ಮುಂಡಾ ಅವರು ಹತ್ತಾರು ಬಾರಿ ಬ್ಯಾಂಕ್‌ಗೆ ಅಲೆದಾಡಿದರೂ ಬ್ಯಾಂಕ್ ಅಧಿಕಾರಿಗಳು ದಾಖಲೆ ನೀಡುವಂತೆ ಸತಾಯಿಸಿದ್ದಾರೆ. ಇದರಿಂದ ರೋಸಿಹೋದ ಜೀತು ಮುಂಡಾ ಅವರು ಸಮಾದಿ ಅಗೆದು ಕೊಳೆತ ಸ್ಥಿತಿಯಲ್ಲಿದ್ದ ಸೋದರಿಯ ಶವವನ್ನು ಚೀಲದಲ್ಲಿ ಕಟ್ಟಿಕೊಂಡು ಬ್ಯಾಂಕ್‌ಗೆ ಬಂದಿದ್ದಾರೆ. ಈ ಘಟನೆಗೆ ಬ್ಯಾಂಕ್ ಅಧಿಕಾರಿಗಳ ಅಮಾನವೀಯ ವರ್ತನೆಯೇ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿಪಿಐ(ಎಂಎಲ್) ಲಿಬರೇಶನ್ ತಾಲ್ಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ ಮಾತನಾಡಿ, “ಬ್ಯಾಂಕ್‌ಗಳಲ್ಲಿ ಬಡವರು, ಆದಿವಾಸಿಗಳು, ಶೋಷಿತ ಸಮುದಾಯಗಳಿಗೆ ಸಾಲ ನೀಡುವುದಿರಲಿ, ಠೇವಣಿಯಿಟ್ಟ ಹಣವನ್ನು ವಾಪಸ್ ನೀಡಲು ನೀಡಲು ಸತಾಯಿಸಲಾಗುತ್ತಿದೆ. ಆದರೆ ಸಾವಿರಾರು ಕೋಟಿ ರೂಪಾಯಿ ಹಣವನ್ನು ಉದ್ಯಮಿಗಳು, ಬಂಡವಾಳಿಗರು ಹಾಗೂ ಸಾಲ ಮುಳುಗಿಸುವವರಿಗೆ ನೀಡುವ ಮೂಲಕ ಆರ್ಥಿಕ ತಾರತಮ್ಯ ಮಾಡುತ್ತಿವೆ. ಕಳೆದ 10 ಆರ್ಥಿಕ ವರ್ಷಗಳಲ್ಲಿ ಬ್ಯಾಂಕ್‌ಗಳು ರೈಟ್ ಆಫ್ ಮಾಡಿರುವ ವಸೂಲಾಗದ ಸಾಲದ (ಎನ್‌ಪಿಎ) ಒಟ್ಟು ಮೊತ್ತವು ರೂ.16.35 ಲಕ್ಷ ಕೋಟಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಕಳೆದ ಮಾರ್ಚ್, 2025ರಲ್ಲಿ ಸುದ್ದಿಮಾಧ್ಯಮಗಳಿಗೆ ತಿಳಿಸಿದ್ದರು. ದೇಶದಲ್ಲಿ ದಲಿತ, ದಮನಿತ, ಹಿಂದುಳಿದ ಸಮುದಾಯಗಳಿಗೆ ಸಾಲ ಸೌಲಭ್ಯ ಒದಗಿಸುವಲ್ಲಿ ಹತ್ತಾರು ನಿರ್ಬಂಧಗಳನ್ನು ವಿಧಿಸುವ ಮೂಲಕ ದೇಶದಲ್ಲಿ ಆರ್ಥಿಕ ತಾರತಮ್ಯ ಮಾಡಲಾಗುತ್ತಿದೆ. ಆ ಮೂಲಕ ಸ್ವಾತಂತ್ರö್ಯಪೂರ್ವದಿಂದ ಇಂದಿಗೂ ಆರ್ಥಿಕವಾಗಿ ಶೋಷಿಸುತ್ತ ಬರಲಾಗುತ್ತಿದೆ. ಇದಕ್ಕೆ ಜೀತು ಮುಂಡಾ ಪ್ರಕರಣವೇ ಜ್ವಲಂತ ಸಾಕ್ಷಿ” ಎಂದು ಆಪಾದಿಸಿದರು.
ಒಡಿಶಾದ ಕಿಯೋಂಜಾರ್ ಜಿಲ್ಲೆಯ ಪಟಣಾ ತಾಲ್ಲೂಕಿನ ದೈನಾಳಿ ಬುಡಕಟ್ಟು ಗ್ರಾಮದ ಅನಕ್ಷರಸ್ಥ ಜೀತು ಮುಂಡಾ ಅವರ ಪ್ರಕರಣವನ್ನು ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ನ್ಯಾಯಾಂಗ ತನಿಖೆಗೆ ಒಳಪಡಿಸಿ, ತಪ್ಪಿತಸ್ಥ ಬ್ಯಾಂಕ್ ಅಧಿಕಾರಿಗಳನ್ನು ವಜಾಗೊಳಿಸಬೇಕು, ನೈತಿಕ ಹೊಣೆಹೊತ್ತು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಕೂಡಲೇ ರಾಜೀನಾಮೆ ನೀಡಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಹಕ್ಕೊತ್ತಾಯಗಳ ಮನವಿಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ರಾಘವೇಂದ್ರ ಉಪ್ಪಳ, ಭಗತ್‌ಸಿಂಗ್ ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ, ತುಸಳಪ್ಪ ದಡೇಸುಗೂರು, ಹನುಮಂತ ಟೈಲರ್, ರಾಮಣ್ಣ, ಮಂಜುನಾಥ ಸೇರಿದಂತೆ ಇನ್ನಿತರರಿದ್ದರು.


Spread the love

Leave a Reply

Your email address will not be published. Required fields are marked *