ಲೋಕಲ್ ನ್ಯೂಸ್ ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 04, 2026
ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ, ಕೂಡಲೇ ಬೆಲೆ ಇಳಿಕೆ ಮಾಡಲು ಆಗ್ರಹಿಸಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ 05-06-2026 ಶುಕ್ರವಾರದಂದು ನಗರದ ಬಸವ ಸರ್ಕಲ್‌ನಿಂದ ತಹಸಿಲ್ ಕಾರ್ಯಾಲಯದವರೆಗೆ ಹಗ್ಗದಿಂದ ಟ್ರ್ಯಾಕ್ಟರ್ ಎಳೆದು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ರವಾನಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಈ ಕುರಿತು ಗುರುವಾರ ಪ್ರಕಟಣೆ ನೀಡಿರುವ ಅವರು, “ಇಂಧನ ಬೆಲೆ ಏರಿಕೆಯಿಂದ ಸಾರಿಗೆ ಸಂಪರ್ಕದಿಂದ ಹಿಡಿದು ಆಹಾರ ಪದಾರ್ಥಗಳವರೆಗೆ ಬೆಲೆ ಏರಿಕೆಯಾಗಿದ್ದು, ಪ್ರತಿಯೊಂದು ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ಡೀಸೆಲ್ ಕೊರತೆ ಉಂಟಾಗಿದೆ. ಇದರಿಂದ ರೈತರು ಕೃಷಿಕಾರ್ಯಗಳನ್ನು ಕೈಗೊಳ್ಳಲು ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೇ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಮಾಡುವ ಮೂಲಕ ಬಡವರಿಗೆ ಹೆಚ್ಚಿನ ತೆರಿಗೆಯ ಹೊರೆಯನ್ನು ಹಾಕಿದೆ. ಇದರಿಂದ ಜನಸಾಮಾನ್ಯರು ತೀವ್ರ ಸಮಸ್ಯೆಗೀಡಾಗಿದ್ದು, ಕೇಂದ್ರ ಸರ್ಕಾರ ಇಂಧನಗಳ ಬೆಲೆಯನ್ನು ಕೂಡಲೇ ಇಳಿಕೆ ಮಾಡಬೇಕು” ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮನವಿ
ಪ್ರತಿಭಟನೆಯಲ್ಲಿ ಪ್ರಗತಿಪರ, ಎಡಪಕ್ಷಗಳು, ರೈತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳೆ, ಜನಪರ, ದಲಿತ, ದಮನಿತ, ಅಲ್ಪಸಂಖ್ಯಾತ ಸಂಘಟನೆಗಳು ಹಾಗೂ ಎಲ್ಲ ದುಡಿಯುವ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.
