ಸಿಂಧನೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಸೌಧೆ ಒಲೆಯಲ್ಲಿ ಚಹಾ ತಯಾರಿಸಿ ಪ್ರತಿಭಟನೆ

Spread the love

ಲೋಕಲ್ ನ್ಯೂಸ್ ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 03, 2026

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಹಾಗೂ ಅಡುಗೆ ಅನಿಲ ಬೆಲೆಯನ್ನು ಮೇಲಿಂದ ಮೇಲೆ ಏರಿಕೆ ಮಾಡುವ ಮೂಲಕ ದುಡಿಯುವ ಜನರ ಮೇಲೆ ತೆರಿಗೆ ಹೊರೆಯನ್ನು ಹೇರಿದೆ ಆರೋಪಿಸಿ, ಭಗತ್‌ಸಿಂಗ್ ಆಟೋ ಚಾಲಕರ ಸಂಘ ಹಾಗೂ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ದಿಂದ ನಗರದ ಗಾಂಧಿ ಸರ್ಕಲ್‌ನಲ್ಲಿ ಸೌಧೆ ಒಲೆಯಲ್ಲಿ ಚಹಾ ತಯಾರಿಸುವ ಮೂಲಕ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಸರ್ಕಾರ ಇಂಧನ ಬೆಲೆ ಏರಿಸಿ ದುಡಿಯುವ ಜನರ ಬೆನ್ನೆಲುಬು ಮುರಿದಿದೆ: ನಾಗರಾಜ ಪೂಜಾರ್‌
ಎಐಸಿಸಿಟಿಯು ರಾಜ್ಯ ಸಹ ಕಾರ್ಯದರ್ಶಿ ನಾಗರಾಜ ಪೂಜಾರ್ ಮಾತನಾಡಿ, “ಕೇಂದ್ರ ಸರ್ಕಾರ ಮೇ 15ರಿಂದ ಮೇ 25ರ ಒಳಗೆ ಕೇವಲ 11 ದಿನಗಳಲ್ಲಿ ಪೆಟ್ರೋಲ್ 7.38 ರೂಪಾಯಿ ಹಾಗೂ ಡಿಸೇಲ್ 7.52 ರೂಪಾಯಿ ಹಾಗೂ ಸಿಎನ್‌ಜಿ 6 ರೂಪಾಯಿ ಹಾಗೂ ವಾಣಿಜ್ಯ ಸಿಲಿಂಡರ್ ಗ್ಯಾಸ್ ಬೆಲೆಯನ್ನು 3113 ರೂಪಾಯಿಗೆ ಏರಿಕೆ ಮಾಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 92ರಿಂದ 96 ಆಸುಪಾಸಿನಲ್ಲಿದ್ದರೂ ಪೆಟ್ರೋಲ್ ಶೇ 42.8ರಷ್ಟು ಮತ್ತು ಡೀಸೆಲ್ ಶೇ 67.9ಕ್ಕೂ ಹೆಚ್ಚು ಏರಿಕೆ ಮಾಡಲಾಗಿದೆ. ಇಂಧನ ಬೆಲೆ ಏರಿಕೆಯು ಸಾರಿಗೆ ಸಂಪರ್ಕದಿಂದ ಹಿಡಿದು ಆಹಾರ ಪದಾರ್ಥಗಳವರೆಗೆ ಪ್ರತಿಯೊಂದು ವಲಯದ ಮೇಲೂ ಪ್ರಭಾವ ಬೀರಿದ್ದು, ಮೋದಿ ಸರ್ಕಾರವು ಸಾಮಾನ್ಯ ಜನರು ಸೇರಿದಂತೆ ಎಲ್ಲ ದುಡಿಯುವ ಜನರ ಬೆನ್ನೆಲುಬನ್ನು ಮುರಿದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿಯವರು ಅಚ್ಛೇ ದಿನ, ಬುರೇ ದಿನ ದಿನ ತಂದಿದ್ದಾರೆ: ಬಸವರಾಜ ಕೊಂಡೆ ಆರೋಪ
ಭಗತ್‌ಸಿಂಗ್ ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ ಮಾತನಾಡಿ “ಹೊಗೆಮುಕ್ತ ಮನೆಯ ಹೆಸರಿನಲ್ಲಿ ಉಜ್ವಲ ಯೋಜನೆಯನ್ನು ಜಾರಿಗೆ ತಂದು, ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ನಾಲ್ಕೈದು ನೂರು ರೂಪಾಯಿಗೆ ಸಿಗುತ್ತಿದ್ದ 14.2 ಕೆ.ಜಿ.ಯ ಗ್ಯಾಸ್ ಸಿಲಿಂಡರ್‌ನ್ನು 933 ರೂಪಾಯಿವರೆಗೆ ಏರಿಸಿ ಹಗಲು ದರೋಡೆಗೆ ನಿಂತಿದೆ. ಬೆಲೆ ಏರಿಕೆಯಿಂದ ಗ್ಯಾಸ್ ಕೊಳ್ಳಲಾಗದ ಮಹಿಳೆಯರು ಪುನಃ ಕಟ್ಟಿಗೆ ಒಲೆಗೆ ಮೊರೆ ಹೋಗುತ್ತಿದ್ದು, ಮತ್ತೆ ಹೊಗೆಯಲ್ಲಿ ದಿನವೂ ಕಣ್ಣೀರು ಸುರಿಸುತ್ತಿದ್ದಾರೆ. ಇದು ಬಿಜೆಪಿ ಸರ್ಕಾರದ ಗೋಮುಖ ವ್ಯಾಘ್ರ ನೀತಿಗೆ ಜ್ವಲಂತ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರ ಅಚ್ಛೇ ದಿನ್ ಎನ್ನುತ್ತಲೇ ಮಹಿಳೆಯರಿಗೆ (ಬುರೇ ದಿನ್) ಕೆಟ್ಟ ದಿನಗಳನ್ನು ತೋರಿಸಿದೆ” ಎಂದು ವ್ಯಂಗ್ಯವಾಗಾಡಿದರು.

Namma Sindhanuru Click For Breaking & Local News

ಜನರು ಬೀದಿಗಿಳಿಯುವ ಮುನ್ನೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಲಿ: ಬಸವರಾಜ ಬೆಳಗುರ್ಕಿ
ಸಿಪಿಐ(ಎಂಎಲ್) ಲಿಬರೇಶನ್ ತಾಲ್ಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ ಮಾತನಾಡಿ “ಕೇಂದ್ರ ಸರ್ಕಾರ ಕಾರ್ಪೊರೇಟ್ ಬಂಡವಾಳಿಗರ ಏಜೆಂಟ್‌ರಂತೆ ವರ್ತಿಸುತ್ತಿದೆ. ಕೃಷಿ ಸಂಬಂಧಿತ ವಲಯಗಳು, ವಸತಿ, ಸಮಾಜ ಕಲ್ಯಾಣ ಹಾಗೂ ಇತರೆ ಸಂಬAಧಿತ ಸಬ್ಸಿಡಿಗಳು ಮತ್ತು ಉದ್ಯೋಗ ಸಂಬಂಧಿತ ವಲಯಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಗಳನ್ನು ವರ್ಷದಿಂದ ವರ್ಷಕ್ಕೆ ಭಾರಿ ಪ್ರಮಾಣದಲ್ಲಿ ಕಡಿತಗೊಳಿಸುವ ಮೂಲಕ ಬಡವರಿಗೆ, ಮಧ್ಯಮ ವರ್ಗದವರಿಗೆ ಹೆಚ್ಚು ತೆರಿಗೆ, ಶ್ರೀಮಂತರಿಗೆ ಹಾಗೂ ಕಾರ್ಪೊರೇಟ್ ಕಂಪನಿ ಬಂಡವಾಳಿಗರಿಗೆ ಕಡಿಮೆ ತೆರಿಗೆ ನೀತಿ ಅನುಸರಿಸುವ ಮೂಲಕ ದೇಶದ ನಾಗರಿಕರಿಗೆ ದ್ರೋಹ ಬಗೆದಿದೆ. ಪ್ರಧಾನಿಯವರು ತಮ್ಮ ಭಾಷಣದಲ್ಲಿ ಮಿತವಾಗಿ ಇಂಧನ ಬಳಸಬೇಕು, ಬಂಗಾರವನ್ನು ಕೊಂಡುಕೊಳ್ಳಬಾರದು ಹೀಗೆ ದೇಶದ ನಾಗರಿಕರಿಗೆ ಹತ್ತು ಹಲವು ಸಲಹೆಗಳನ್ನು ನೀಡುವ ಅವರು ತಾವೇ ದುಬಾರಿ ವಿಮಾನದಲ್ಲಿ ದೇಶ ದೇಶ ಸುತ್ತುತ್ತಿದ್ದಾರೆ. ದೇಶದಲ್ಲಿ ಹಸಿವು, ಬಡತನ, ನಿರುದ್ಯೋಗ, ಬೆಲೆ ಏರಿಕೆ ಮಿತಿ ಮೀರಿದ್ದು, ಜನರು ಬೀದಿಗಿಳಿದು ಹೋರಾಟ ಮಾಡುವ ಮುನ್ನ ಕೇಂದ್ರ ಸರ್ಕಾರ ಇಂಧನ ಹಾಗೂ ಅಡುಗೆ ಅನಿಲ ಬೆಲೆ ಏರಿಕೆಯನ್ನು ವಾಪಸ್ ಪಡೆಯಬೇಕು” ಎಂದು ಆಗ್ರಹಿಸಿದರು.
ರಾಷ್ಟ್ರಪತಿಯವರಿಗೆ ಮನವಿ ರವಾನೆ
ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಹಾಗೂ ಅಡುಗೆ ಅನಿಲ ಬೆಲೆಯನ್ನು ಕೂಡಲೇ ಇಳಿಕೆ ಮಾಡಬೇಕು, ಜೀವನಾವಶ್ಯಕ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಕೂಡಲೇ ನಿಯಂತ್ರಣಕ್ಕೆ ತರಬೇಕು, ಪೆಟ್ರೋಲ್-ಡೀಸೆಲ್ ಇಂಧನದ ಬೆಲೆಯನ್ನು ಮುಕ್ತ ಮಾರುಕಟ್ಟೆಗೆ ಬಿಡದೇ ಕೇಂದ್ರ ಸರಕಾರವೇ ನಿರ್ಧರಿಸಿ ನಿಯಂತ್ರಿಸಬೇಕು ಎಂದು ಒತ್ತಾಯಿಸಿ ಶಿರಸ್ತೆದಾರ್ ಅಂಬಾದಾಸ್ ಅವರ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಭಗತ್‌ಸಿಂಗ್ ಆಟೋ ಚಾಲಕರ ಸಂಘದ ಶೇಕ್ಷಾವಲಿ, ಖಾಜಾಹುಸೇನ್, ಶೌಕತ್, ಅಕ್ಬರ್, ಹುಸೇನ್‌ಬಾಷ, ಸಲೀಮ್, ಮಹ್ಮದ್ ರಫಿ, ಹುಸೇನ್‌ಸಾಬ್, ರಾಜ, ಪಂಪಾಪತಿ, ಮಹ್ಮದ್ ರಫಿ, ರಾಜಶೇಖರ್, ದುರುಗಪ್ಪ, ಮಹ್ಮದ್ ರಫಿ, ಅಲಿಬಾಬಾ, ಅಂಬರೇಶ್, ಮಹೆಬೂಬ್, ರಾಘವೇಂದ್ರ ಉಪ್ಪಳ, ಮಹಾದೇವ ಅಮರಾಪುರ ಸೇರಿದಂತೆ ಇನ್ನಿತರರಿದ್ದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *