ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ, ಹಸಮಕಲ್
ನಮ್ಮ ಸಿಂಧನೂರು, ಮೇ 04, 2026
ನಗರದಲ್ಲಿ ಅಪರೂಪಕ್ಕೆಂಬAತೆ ಅಲ್ಲೊಂದು ಇಲ್ಲೊಂದು ಉಳಿದುಕೊಂಡಿರುವ ಸಾರ್ವಜನಿಕ ಉದ್ಯಾನಗಳು ನಿರ್ವಹಣೆ ಇಲ್ಲದೇ ಪಾಳುಬಿದ್ದಿವೆ. ಗಿಡ-ಮರಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಇದರಿಂದಾಗಿ ಒಣಹವೆ, ಆರ್ದತೆ ಹೆಚ್ಚುತ್ತಿದ್ದು, ಇದಕ್ಕೆ ಪರಿಹಾರ ರೂಪಿಸಬೇಕಾದ ನಗರಸಭೆ ಬೇಜವಾಬ್ದಾರಿ ವಹಿಸಿದೆ ಎನ್ನುವ ಆರೋಪಗಳು ಕೇಳಿಬಂದಿವೆ.
ಹೊಸ ಲೇಔಟ್‌ಗಳಲ್ಲಿ ಕಾಂಕ್ರೀಟ್ ಮನೆಗಳು ವಿಸ್ತಾರ ಪಡೆದುಕೊಳ್ಳುತ್ತಿವೆ. ಜನವಸತಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದರೂ, ಅದಕ್ಕೆ ತಕ್ಕಂತೆ ಗಿಡ-ಮರಗಳಾಗಲೀ, ಉದ್ಯಾನಗಳಾಗಲೀ ಇಲ್ಲ. ಇದರಿಂದ ದಿನದಿಂದ ದಿನಕ್ಕೆ ನಗರ ವಾತಾವರಣದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಜನಸಾಮಾನ್ಯರ ಆರೋಗ್ಯದ ಮೇಲೆಯೂ ಪರಿಣಾಮ ಉಂಟಾಗುತ್ತಿದೆ.
ಬೇಸಿಗೆಯ ಕುದಿ, ಜನರ ಬೇಗುದಿ
ಪ್ರತಿವರ್ಷಕ್ಕಿಂತ ಈ ವರ್ಷ ಅಧಿಕ ತಾಪಮಾನ ದಾಖಲಾಗಿದೆ. ಜೂನ್ 5 ಪರಿಸರ ದಿನಾಚರಣೆಯ ಹೊತ್ತಲ್ಲಿ ನಗರದಲ್ಲಿ ಹಗಲು-ರಾತ್ರಿ ಕುದಿಯ ಜೊತೆಗೆ ಜನರು ಬೇಗುದಿ ಎದುರಿಸಿದ್ದಾರೆ. ಬಿಸಿಲಿಗೆ ಹಗಲಿಡೀ ಸಿಮೆಂಟ್ ತಾರಸಿಗಳು ಕಾದು ಕಬ್ಬಿಣದಂತಾದರೆ, ರಾತ್ರಿ ಒಣ ಹವೆಯಿಂದ ಇಡೀ ಮನೆಯ ಯಾವ ಕಡೆ ಕುಳಿತರೂ ನೆಮ್ಮದಿಯಿಲ್ಲ. ಇನ್ನೂ ಫ್ಯಾನಿಲ್ಲದೇ ನಿದ್ರೆಯಿರಲಿ, ವಿಶ್ರಾಂತಿ ಪಡೆಯುವುದು ಕಷ್ಟ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ. ಒಣಹವೆ, ಆರ್ದತೆಯಿಂದ ಪಾರಾಗಲೂ ಮನೆಯ ಮಹಡಿ ಮೇಲೆ ಏರಿದರೂ ಅದೇ ಪರಿಸ್ಥಿತಿ. ನಗರದ 31 ವಾರ್ಡ್ ವ್ಯಾಪ್ತಿಯಲ್ಲಿ ಹೊಸ ಕಟ್ಟಡಗಳು ಮೇಲಿಂದ ಮೇಲೆ ನಿರ್ಮಾಣಗೊಳ್ಳುತ್ತಿವೆ. ಆದರೆ ಜನವಸತಿ ತಕ್ಕಂತೆ ಗಿಡ-ಮರಗಳ ಪೋಷಣೆ ಹಾಗೂ ಉದ್ಯಾನಗಳ ನಿರ್ಮಾಣ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ.

ವಿಶ್ರಾಂತಿಗಾಗಿ ಹಿರಿಯ ನಾಗರಿಕರ ತೊಳಲಾಟ
ವಿಶ್ರಾಂತಿಗಾಗಿ ಹಿರಿಯ ನಾಗರಿಕರು ಉದ್ಯಾನಗಳಿಗೆ ಭೇಟಿ ಕೊಡುವುದು ಸಾಮಾನ್ಯ. ಇನ್ನೂ ಕೆಲವರು ಬೆಳಿಗ್ಗೆ ಮತ್ತು ಸಾಯಂಕಾಲ ವಾಯುವಿಹಾರಕ್ಕೆಂದು ಉದ್ಯಾನವನಗಳಿಗೆ ಹೋಗುತ್ತಾರೆ. ಉದ್ಯಾನಗಳು ಹಿರಿಯರಿಗೆ ವಿಶ್ರಾಂತಿಯ ತಾಣವಾದರೆ, ಕಿರಿಯರಿಗೆ ಆಟವಾಡಲು ಅಚ್ಚುಮೆಚ್ಚಿನ ಜಾಗವೂ ಹೌದು. ಆದರೆ, ನಿರ್ವಹಣೆ ಇಲ್ಲದೇ ಉದ್ಯಾನಗಳು ಪಾಳು ಬಿದ್ದಿವೆ. ಒಂದೆಡೆ ಎಲ್ಲಿ ಬೇಕೆಂದಲ್ಲಿ ತ್ಯಾಜ್ಯದ ರಾಶಿಗಳಿದ್ದರೆ, ಮತ್ತೊಂದೆಡೆ ಮಕ್ಕಳಿಗೆ ಆಡಲೆಂದೇ ಇರುವ ಜೋಕಾಲಿ, ಜಾರುಗುಂಡಿ ಮುಂತಾದ ಸಾಮಗ್ರಿಗಳು ತುಕ್ಕು ಹಿಡಿದು ಹೋಗಿವೆ.

ಬೀಡಾಡಿ ದನ, ನಾಯಿಗಳ ಆವಾಸಸ್ಥಾನವಾದ ಉದ್ಯಾನಗಳು !?
ನಗರದ ಪ್ರವಾಸಿ ಮಂದಿರದ ಪಕ್ಕದಲ್ಲಿರುವ ಪುಟ್ಟರಾಜ ಗವಾಯಿಗಳ ಸ್ಮರಣಾರ್ಥ ಮಕ್ಕಳ ಉದ್ಯಾನವನ ಅಕ್ಷರಶಃ ಬೀಡಾಡಿ ದನ, ಬೀದಿ ನಾಯಿ, ಹಂದಿಗಳ ಆವಾಸಸ್ಥಾನದಂತಾಗಿದೆ. ಕೆಲ ವರ್ಷಗಳ ಹಿಂದೆ ಅತ್ಯಂತ ಚೊಕ್ಕಟವಾಗಿದ್ದ ಈ ಉದ್ಯಾನ ಇಂದು ಪಾಳು ಬಿದ್ದಿದೆ. ಕೋರ್ಟ್ ಹಿಂಬದಿಯ ರಸ್ತೆಯಲ್ಲಿರುವ ಉದ್ಯಾನವೂ ಕೂಡ ನಿರ್ವಹಣೆ ಇಲ್ಲದೇ ಗಿಡಮರಗಳು ಒಣಗುತ್ತಿವೆ. ವೆಂಕಟೇಶ್ವರ ನಗರದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಉದ್ಯಾನ ಹತ್ತಾರು ಗಿಡಗಳಿಗೆ ಮಾತ್ರ ಸಾಕ್ಷಿಯಾಗಿದೆ. ಇನ್ನೂ ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯಾಲಯದ ಮುಂದಿರುವ ಕಿರು ಉದ್ಯಾನ ನೆಪಕ್ಕುಂಟು, ಆಟಕ್ಕಿಲ್ಲದಂತಿದೆ. ಇರುವ ಮರ‍್ನಾಲ್ಕು ಉದ್ಯಾನಗಳಲ್ಲಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತದೆ. ಮುರಿದು ಹೋದ ಮಕ್ಕಳ ಆಟಿಕೆ ಸಲಕರಣೆಗಳು, ಆಸನಗಳು, ಅಕ್ಕಪಕ್ಕದಲ್ಲಿ ದುರ್ನಾತ ಬೀರುವ ಚರಂಡಿಗಳು, ಬೀದಿ ನಾಯಿ, ದನಗಳ ಆವಾಸ ಸ್ಥಾನ, ಕಳಪೆ ಕಾಮಗಾರಿ ಹೀಗೆ ಸಾಲು ಸಾಲು ಸಮಸ್ಯೆಗಳು ಆವರಿಸಿಕೊಂಡಿವೆ. ಇನ್ನೂ ಕೆಲ ಉದ್ಯಾನಗಳಂತೂ ಕುಡುಕರ, ಪುಂಡ-ಪೋಕರಿಗಳ ತಾಣಗಳಾಗಿ ಮಾರ್ಪಟ್ಟಿವೆ.

‘ನಗರಸಭೆ ಬಳಿ ಸ್ಪಷ್ಟ ಯೋಜನೆಯಿಲ್ಲ’
“ಹಸಿರು ವಲಯಗಳನ್ನು ವೃದ್ಧಿಸುವುದು, ಕೆರೆಗಳನ್ನು ಪುನಶ್ಚೇತನಗಳೊಳಿಸುವುದು, ಗಿಡ-ಮರಗಳನ್ನು ನೆಟ್ಟು ಪೋಷಿಸುವುದು ಇನ್ನು ಮುಂದೆ ಆಯ್ಕೆಯಲ್ಲ ಅನಿವಾರ್ಯತೆಯಾಗಲಿದೆ ಎಂಬುದು ಪರಿಸರ ತಜ್ಞರ ಅಭಿಪ್ರಾಯವಾಗಿದೆ. 2011ರ ಜನಸಂಖ್ಯೆ ವರದಿಯಂತೆ ಸಿಂಧನೂರು ನಗರದಲ್ಲಿ 75 ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅಂದಾಜಿಸಿದರೂ ನಗರದಲ್ಲಿ 1 ಲಕ್ಷಕ್ಕೂ ಮಿಗಿಲು ಜನರಿದ್ದಾರೆ. ಹಾಗಾಗಿ ಈ ಎಲ್ಲ ಜನರಿಗೆ ಶುದ್ಧ ಪರಿಸರ, ಸ್ವಚ್ಛಗಾಳಿ, ನೈರ್ಮಲ್ಯ ವಾತಾವರಣ ಕಲ್ಪಿಸುವಲ್ಲಿ ನಗರಸಭೆಯ ಬಳಿ ಸ್ಪಷ್ಟವಾದ ಯೋಜನೆಯೇ ಇಲ್ಲ” ಎಂಬುದು ನಾಗರಿಕರೊಬ್ಬರ ಆರೋಪವಾಗಿದೆ.

ಹೊಸ ಉದ್ಯಾನಗಳ ಅಭಿವೃದ್ಧಿಗೆ ನಿರ್ಲಕ್ಷ್ಯ
“ವಿವಿಧ ಲೇಔಟ್ ಮಾಲೀಕರು (ವಿನ್ಯಾಸದ ಮಾಲೀಕರು) 2017ರಿಂದ 2024ರವರೆಗೆ ನಗರ ವ್ಯಾಪ್ತಿಯಲ್ಲಿ 47 ಹಾಗೂ ಸಿಂಧನೂರು ತಾಲೂಕು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಲವು ಗ್ರಾಮಗಳ 7 ನಾಗರಿಕ ಸೌಲಭ್ಯದ ನಿವೇಶನಗಳನ್ನು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಇಲ್ಲಿಯವರೆಗೆ ಹಸ್ತಾಂತರಿಸಲಾಗಿದೆ ಎಂಬ ಮಾಹಿತಿ ತಿಳಿದುಬಂಇದೆ. 2024ರಿಂದ ಇಲ್ಲಿಯವರೆಗೂ ನಗರಸಭೆ ವ್ಯಾಪ್ತಿಯಲ್ಲಿ ಬಹಳಷ್ಟು ಲೇಔಟ್‌ಗಳು ಆಗಿದ್ದು, ಆ ಲೇಔಟ್‌ಗಳ ನಾಗರಿಕ ಸೌಲಭ್ಯಕ್ಕೆ ಜಾಗಗಳನ್ನು ಸುಪರ್ದಿಗೆ ಪಡೆದು ಉದ್ಯಾನ ಇಲ್ಲವೇ ನಾಗರಿಕ ಸೌಲಭ್ಯ ಅಭಿವೃದ್ಧಿಗೆ ಇದುವರೆಗೂ ಕೆಲಸಗಳಾಗಿಲ್ಲ. ಇದರಿಂದ ನಗರದಲ್ಲಿ ಗಿಡ-ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ” ಎಂದು ನಾಗರಿಕರೊಬ್ಬರು ಹೇಳುತ್ತಾರೆ.

