ಸಿಂಧನೂರು: ನವಲಿ ಜಲಾಶಯ ಜಾರಿಗೆ ಆಗ್ರಹಿಸಿ ಜೂನ್ 25ರಂದು ಮೂರು ರಾಜ್ಯಗಳ ಸಿಎಂ ಅವರಿಗೆ ಮೌನ ಮೆರವಣಿಗೆ ಮೂಲಕ ಮನವಿ: ಚಿಟ್ಟೂರಿ ಶ್ರೀನಿವಾಸ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 19, 2026

ತುಂಗಭದ್ರಾ ಡ್ಯಾಂ ಹೊಸಗೇಟ್‌ಗಳ ಉದ್ಘಾಟನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜೂನ್ 25, 2026ರಂದು ತುಂಗಭದ್ರಾ ಅಣೆಕಟ್ಟೆಗೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಆಗಮಿಸಲಿದ್ದು, ಕಳೆದ ಹಲವು ವರ್ಷಗಳಿಂದ ನನೆಗುದಿ ಬಿದ್ದಿರುವ ನವಲಿ ಸಮಾನಾಂತರ ಜಲಾಶಯ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ, ರೈತಪರ ವಿವಿಧ ಸಂಘಟನೆಗಳು ಹಾಗೂ ಪಕ್ಷಾತೀತವಾಗಿ ಅಂದು ಮೌನ ಮೆರವಣಿಗೆ ನಡೆಸಿ ಮನವಿಪತ್ರ ಸಲ್ಲಿಸಿ ಒತ್ತಾಯಿಸಲಾಗುವುದು ಎಂದು ಮುಖಂಡ ಚಿಟ್ಟೂರಿ ಶ್ರೀನಿವಾಸ ಪಗಡದಿನ್ನಿಕ್ಯಾಂಪ್ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಜೂನ್ 25, 2026ರಂದು ತುಂಗಭದ್ರಾ ಡ್ಯಾಂ ಹೊಸ ಗೇಟ್‌ಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಕರ್ನಾಟಕದ ಸಿಎಂ ಡಿ.ಕೆ.ಶಿವಕುಮಾರ, ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣದ ಸಿಎಂ ರೇವಂತರೆಡ್ಡಿ ಅವರು ಆಗಮಿಸಲಿದ್ದು, ಅಂದು ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ರೈತಪರ ವಿವಿಧ ಸಂಘಟನೆಗಳು ಹಾಗೂ ಪಕ್ಷಾತೀತವಾಗಿ ಬೃಹತ್ ಮೌನ ಮೆರವಣಿಗೆಯ ಮೂಲಕ ಮೂವರು ಮುಖ್ಯಮಂತ್ರಿಗಳಿಗೆ ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಮನವಿಪತ್ರ ಸಲ್ಲಿಸಲು ಯೋಜಿಸಲಾಗಿದೆ. ಈ ಕುರಿತಂತೆ ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳ ಮುಖಂಡರನ್ನು ಸಂಪರ್ಕಿಸಲಾಗುತ್ತಿದೆ” ಎಂದು ಅವರು ಹೇಳಿದರು.
ಶಾಸಕರ ನೇತೃತ್ವದಲ್ಲಿ ಸಭೆ
ಪ್ರತಿ ಬಾರಿ ಎರಡನೇ ಬೆಳೆಗೆ 10 ರಿಂದ 15 ಟಿಎಂಸಿ ನೀರು ಕೊರತೆಯಾಗುತ್ತಿದ್ದು, ಇದರಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ನವಲಿ ಸಮಾನಾಂತರ ಜಲಾಶಯ ಯೋಜನೆ ಜಾರಿಗೆ ಈ ಹಿಂದೆಯೇ ಡಿಪಿಆರ್‌ಗೆ ಆದೇಶಿಸಲಾಗಿದೆ. ಆದರೆ ಇಲ್ಲಿಯವರೆಗೂ ಭೂಸ್ವಾಧೀನ ಸೇರಿದಂತೆ ಹಲವು ಪ್ರಕ್ರಿಯೆಗಳು ನನೆಗುದಿಬಿದ್ದಿವೆ. ಹಾಗಾಗಿ ಬಹಳಷ್ಟು ವಿಳಂಬವಾಗಿದೆ. ರೈತರಿಗೆ ಅನುಕೂಲ ಕಲ್ಪಿಸುವ ಹಿನ್ನೆಲೆಯಲ್ಲಿ ಮತ್ತು ಈ ಭಾಗದ ರೈತರ ಹಿತ ಕಾಯಲು ಆದಷ್ಟು ಬೇಗನೆ ಯೋಜನೆ ಜಾರಿಗೊಳಿಸಬೇಕು. ಈ ಕುರಿತಂತೆ ಸ್ಥಳೀಯ ಶಾಸಕರಾದ ಹಂಪನಗೌಡ ಬಾದರ್ಲಿ ಅವರ ಗಮನಕ್ಕೆ ತರಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಕುರಿತಂತೆ ಶಾಸಕರ ನೇತೃತ್ವದಲ್ಲಿ ಸಭೆ ನಡೆಯಲಿದೆ” ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಡಿ.ಎಚ್.ಕಂಬಳಿ, ವೈ.ನರೇಂದ್ರನಾಥ, ರಾಮರೆಡ್ಡಿ ಇನ್ನಿತರರು ಇದ್ದರು.


Spread the love

Leave a Reply

Your email address will not be published. Required fields are marked *