ಸಿಂಧನೂರು: ಪಿಡಬ್ಲ್ಯುಡಿ ಕ್ಯಾಂಪಿನಲ್ಲಿ ಅಪ್ರಾಪ್ತೆ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣ, ತಪ್ಪಿತಸ್ಥನಿಗೆ ಕಠಿಣ ಶಿಕ್ಷೆ ವಿಧಿಸಲು ಸಂಘಟನೆಗಳ ಆಗ್ರಹ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 19, 2026

ನಗರದ ಪಿಡಬ್ಲ್ಯುಡಿ ಕ್ಯಾಂಪಿನಲ್ಲಿ ಜೂನ್ 15, 2026ರಂದು ಅಪ್ರಾಪ್ತೆ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ದುಷ್ಕರ್ಮಿಗೆ ಕಠಿಣ ಶಿಕ್ಷೆ ವಿಧಿಸುವಂತೆ, ಸಿಂಧನೂರು ತಾಲ್ಲೂಕು ಖಾಸಗಿ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕಕರ ಸಂಘ, ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಹಾಗೂ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯಪಾಲರನ್ನು ಒತ್ತಾಯಿಸಿವೆ.
ಈ ಕುರಿತು ಪತ್ರಿಕಾ ಭವನದಲ್ಲಿ ಮಾತನಾಡಿದ ಖಾಸಗಿ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ವೈ.ನರೇಂದ್ರನಾಥ, “ಪೋಷಕರು ಕೂಲಿ ಕೆಲಸಕ್ಕೆ ಹೋಗಿದ್ದ ವೇಳೆ ಅಪ್ರಾಪ್ತ ಬಾಲಕಿಯರ ಮನೆಗೆ ನುಗ್ಗಿದ ದುಷ್ಕರ್ಮಿ ಅತ್ಯಾಚಾರ ನಡೆಸಿ, ಪೈಶಾಚಿಕವಾಗಿ ವರ್ತಿಸಿರುವ ಘಟನೆಯು ಆಘಾತಕಾರಿಯಾಗಿದ್ದು, ನಮ್ಮ ಸಂಘಟನೆಗಳು ಇದನ್ನು ಖಂಡಿಸುತ್ತವೆ. ಪೊಲೀಸರು ಈಗಾಗಲೇ ದುಷ್ಕರ್ಮಿಯನ್ನು ಬಂಧಿಸಿದ್ದಾರೆ. ಬಂಧಿತ ದುಷ್ಕರ್ಮಿಗೆ ಕಠಿಣಾತಿ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ತಾಲ್ಲೂಕು, ಜಿಲ್ಲಾ ವಕೀಲರ ಸಂಘ ಹಾಗೂ ಉಚ್ಛ ನ್ಯಾಯಾಲಯದ ವಕೀಲರ ಸಂಘದ ಯಾರೂ ಕೂಡ ದುಷ್ಕರ್ಮಿಯ ಪರವಾಗಿ ವಕಾಲತ್ತು ಹಾಕಬಾರದು” ಎಂದು ಅವರ ವಕೀಲರಲ್ಲಿ ಮನವಿ ಮಾಡಿದರು.
ಸರಸ್ವತಿ ಪಾಟೀಲ್ ಮಾತನಾಡಿ, “ಬಡ ಕುಟುಂಬಗಳು ತಮ್ಮ ಮಕ್ಕಳನ್ನು ಒಂಟಿಯಾಗಿ ಬಿಟ್ಟು ಕೂಲಿ ಕೆಲಸಕ್ಕೆ ಹೋಗುವುದು ಅನಿವಾರ್ಯವಾಗಿದ್ದು, ಇಂತಹ ಸಮಯವನ್ನು ಬಳಸಿಕೊಂಡು ದುಷ್ಕರ್ಮಿ ಮುಗ್ದ ಮಕ್ಕಳ ಮೇಲೆ ಮೃಗದಂತೆ ಎರಗಿ ಅತ್ಯಾಚಾರವೆಸಗಿರುವುದು ಇಡೀ ಮಾನವ ಕುಲವೇ ತಲೆತಗ್ಗಿಸುವ ವಿಷಯವಾಗಿದೆ. ಹಾಗಾಗಿ ಇಂತಹ ಬಡ ಕುಟುಂಬಗಳ ಮಕ್ಕಳಿಗೆ ಸೂಕ್ತ ಭದ್ರತೆ ಮತ್ತು ರಕ್ಷಣೆ ಸಿಗಬೇಕಿದೆ. ಈ ಕುರಿತು ತಾಲ್ಲೂಕು, ಜಿಲ್ಲಾಡಳಿತಗಳು ಕ್ರಮ ಕೈಗೊಳ್ಳಬೇಕು ಹಾಗೂ ಸಂತ್ರಸ್ತ ಬಾಲಕಿಯರ ಕುಟುಂಬಕ್ಕೆ ಪರಿಹಾರ ಬಿಡುಗಡೆ ಮಾಡಬೇಕು” ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಬಸವರಾಜ, ರಾಜ್ಯ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ಕುಲಕರ್ಣಿ, ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ತಿರುಪತಿ ನಾಯಕ್, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಮಾದೇವಿ ಶಂಭೋಜಿ ಇನ್ನಿತರರಿದ್ದರು.


Spread the love

Leave a Reply

Your email address will not be published. Required fields are marked *