ಸಿಂಧನೂರು: ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಆಗ್ರಹಿಸಿ ನಗರದಲ್ಲಿ ಜೂನ್ 20ರಂದು ಪ್ರತಿಭಟನೆ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 19, 2026

ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡುವಂತೆ ಒತ್ತಾಯಿಸಿ, ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿಯಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹ 1500 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ದಿನಾಂಕ: 20-06-2026ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಿಂಧನೂರು ತಾಲೂಕು ಏಮ್ಸ್ ಹೋರಾಟ ಸಮಿತಿಯ ಸಂಚಾಲಕರಾದ ಡಿ.ಎಚ್.ಕಂಬಳಿ, ದೇವೇಂದ್ರಗೌಡ, ಟಿ.ಹುಸೇನ್‌ಸಾಬ್ ಹಾಗೂ ನಾಗರಾಜ ಪೂಜಾರ್ ತಿಳಿಸಿದ್ದಾರೆ.
ಈ ಕುರಿತು ಶುಕ್ರವಾರ ಜಂಟಿ ಹೇಳಿಕೆ ನೀಡಿರುವ ಅವರು, “1500 ದಿನಗಳಿಂದ ರಾಯಚೂರಿನ ಕ್ರೀಡಾಂಗಣದಲ್ಲಿ ನಿರಂತರ ಧರಣಿ ನಡೆಯುತ್ತಿದೆ. ಈ ಕುರಿತು ರಾಜ್ಯ ಸರ್ಕಾರವೂ ಸಹ ಕೇಂದ್ರ ಸರ್ಕಾರಕ್ಕೆ ಹಲವಾರು ಬಾರಿ ಶಿಫಾರಸು ಮಾಡಿ ಮಹತ್ವಾಕಾಂಕ್ಷೆಯ ಜಿಲ್ಲೆಯಾಗಿರುವ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡುವಂತೆ ಮನವಿ ಸಲ್ಲಿಸಿದೆ. ರಾಜ್ಯದ ಎಲ್ಲ ಸಂಸದರಿಗೂ ಈ ಕುರಿತು ಗಮನ ಸೆಳೆಯಲಾಗಿದೆ. ಆದಾಗ್ಯೂ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸದೇ ಏಮ್ಸ್ ಮಂಜೂರು ಮಾಡಲು ನಿರ್ಲಕ್ಷಿಸಿರುವುದನ್ನು ಪ್ರತಿಭಟಿಸಿ ಜೂನ್ 20 ರಂದು ರಾಯಚೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಅದನ್ನು ಬೆಂಬಲಿಸಿ ನಗರದಲ್ಲಿಯೂ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರತಿಭಟನಾ ಮೆರವಣಿಗೆ
ಜೂನ್ 20, 2026ರಂದು ಬೆಳಿಗ್ಗೆ 10 ಗಂಟೆಗೆ, ಏಮ್ಸ್ ಹೋರಾಟ ಸಮಿತಿ ಹಾಗೂ ಜನಪರ ಸಂಘಟನೆಗಳ ನೇತೃತ್ವದಲ್ಲಿ ನಗರದ ಪ್ರವಾಸಿ ಮಂದಿರದಿಂದ ತಹಸಿಲ್ ಕಾರ್ಯಾಲಯದವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ ತಹಸೀಲ್ದಾರ್ ಮೂಲಕ ಸಾಗಿ ಕೇಂದ್ರ ಸರ್ಕಾರಕ್ಕೆ ಮನವಿ ರವಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *