ಸಿಂಧನೂರು: ರೈತರ ಹೋರಾಟಕ್ಕೆ ಎಚ್ಚೆತ್ತ ಸರ್ಕಾರಗಳು !, ಜೋಳ ಬೆಳೆಗಾರರ ಖಾತೆಗೆ ಹಣ ಜಮಾ ಪ್ರಕ್ರಿಯೆ ಚುರುಕು

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 19, 2026

ಬೆಂಬಲ ಬೆಲೆ ಯೋಜನೆಯಡಿ ರೈತರ ಖಾತೆಗೆ ಜೋಳದ ಹಣ ಜಮಾ ಮಾಡಲು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಪೋತ್ನಾಳ್ ಕ್ರಾಸ್ ಬಳಿ ರಸ್ತೆ ಸಂಚಾರ ತಡೆದು ಪ್ರತಿಭಟಿಸಿ ಗಡುವು ನೀಡಿದ ಬೆನ್ನಲ್ಲೇ ಹಣ ಜಮಾ ಪ್ರಕ್ರಿಯೆ ಚುರುಕು ಪಡೆದಿದೆ ಎಂದು ತಿಳಿದುಬಂದಿದೆ.
ದಿನಾಂಕ: 18-06-2026 ಸಂಜೆಯಿಂದಲೇ ರೈತರ ಖಾತೆಗಳಿಗೆ ಹಣ ಜಮಾ ಆಗುತ್ತಿದೆ. ಈ ಕುರಿತು ಕೆಲ ರೈತರು ನಮ್ಮ ಸಂಘಟನೆಯ ಗಮನ ತಂದಿದ್ದಾರೆ ಎಂದು ರೈತ ಸಂಘದ ಮುಖಂಡರೊಬ್ಬರು ತಿಳಿಸಿದ್ದಾರೆ.
8 ದಿನಗಳ ಗಡುವು ನೀಡಲಾಗಿತ್ತು !!
ದಿನಾಂಕ: 15-06-2026ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪೋತ್ನಾಳ್‌ನ ಬಳಗಾನೂರು ಕ್ರಾಸ್‌ನಲ್ಲಿ ರಸ್ತಾರೋಖ ಚಳವಳಿ ನಡೆಸಿ 8 ದಿನದೊಳಗಾಗಿ ರೈತರ ಖಾತೆಗೆ ಬೆಂಬಲ ಬೆಲೆ ಯೋಜನೆಯಡಿ ಜೋಳದ ಹಣ ಜಮಾ ಮಾಡದಿದ್ದರೆ ‘ಸಿಂಧನೂರು ಬಂದ್’ ಮಾಡುವುದಾಗಿ ಗಡುವು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರಗಳು ಹಣ ಬಿಡುಗಡೆಗೆ ಮುಂದಾಗಿವೆ ಎಂದು ರೈತ ಹೋರಾಟಗಾರರು ತಿಳಿಸಿದ್ದಾರೆ.
468 ಕೋಟಿ ರೂಪಾಯಿ
ರಾಯಚೂರು ಜಿಲ್ಲೆಯಲ್ಲಿ 18-03-2026 ರಿಂದ ನಿಗದಿತ ಅವಧಿಯೊಳಗೆ ಮುಂಗಾರು-ಹಿAಗಾರು ಹಂಗಾಮಿನಲ್ಲಿ 22,462 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ರೈತರಿಂದ ಒಟ್ಟು 12,23,112 ಕ್ವಿಂಟಲ್ ಜೋಳ (ಶೇ.82.85) ಖರೀದಿಸಲಾಗಿದ್ದು, 468 ಕೋಟಿ ರೂಪಾಯಿ ಜಿಲ್ಲೆಯ ರೈತರಿಗೆ ಹಣ ಪಾವತಿಸಬೇಕಿದೆ ಎಂಬ ಮಾಹಿತಿ ಇದೆ.


Spread the love

Leave a Reply

Your email address will not be published. Required fields are marked *