ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ
ಸಿಂಧನೂರು, ಸೆಪ್ಟೆಂಬರ್ 27
ಸಿಂಧನೂರಿಗೆ 2020ರಲ್ಲಿ ಮಂಜೂರಾಗಿದ್ದ ತಾಯಿ ಮಕ್ಕಳ ಆಸ್ಪತ್ರೆ ಬರೋಬ್ಬರಿ 5 ವರ್ಷಗಳ ನಂತರ ಶನಿವಾರ ವಿಧ್ಯುಕ್ತವಾಗಿ ಉದ್ಘಾಟನೆ ಕಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಅವರು ರಿಬ್ಬನ್ ಕತ್ತರಿಸುವ ಮೂಲಕ ಆಸ್ಪತ್ರೆ ಉದ್ಘಾಟಿಸಿದರು.
60 ಹಾಸಿಗೆಯ ಆಸ್ಪತ್ರೆ ಇದು
60 ಹಾಸಿಗೆಯ ಆಸ್ಪತ್ರೆ ಕಳೆದ ಎರಡು ವರ್ಷಗಳ ಹಿಂದೆಯೇ ಆರಂಭವಾಗಬೇಕಿತ್ತು. ಚುನಾಯಿತ ಪ್ರತಿನಿಧಿಗಳ ಕಾಳಜಿ ಕೊರತೆ, ಅಧಿಕಾರಿಗಳ ನಿರಾಸಕ್ತಿಯಿಂದ ಇಲ್ಲಿಯವರೆಗೆ ತಳ್ಳುತ್ತ ಬರಲಾಯಿತು. ಕಳೆದ ವರ್ಷ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಸಿಂಧನೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ನಾನಾ ಕಾರಣಗಳಿಂದ ನಾಲ್ವರು ಮಹಿಳೆಯರು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟು, ನಾಲ್ಕು ಮಕ್ಕಳು ಅನಾಥರಾದ ವಿಷಯ ಗಂಭೀರತೆ ಪಡೆದುಕೊಳ್ಳುತ್ತಿದ್ದಂತೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಶೀಘ್ರ ಚಾಲನೆಗೊಳಿಸಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬಂದಿತ್ತು.
ಸಾರ್ವಜನಿಕರ ಸೇವೆ ಯಾವಾಗ ?
ಅಧಿಕೃತವಾಗಿ ಸಚಿವರು ಶನಿವಾರ ಆಸ್ಪತ್ರೆಯನ್ನು ಉದ್ಘಾಟಿಸಿದ್ದು, ಸಾರ್ವಜನಿಕರಿಗೆ ಸೇವೆ ಯಾವಾಗ ಎನ್ನುವುದು ಇನ್ನೂ ನಿಶ್ಚಿತವಾಗಿಲ್ಲ. ಈಗಾಗಲೇ ಡಾ.ನಾಗರಾಜ ಕಾಟ್ವಾ ಅವರನ್ನು ಈ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ಸರ್ಕಾರ ನೇಮಿಸಿದ್ದು, ಅವರೇ ಈ ಕುರಿತು ಸ್ಪಷ್ಟನೆ ನೀಡಬೇಕು. ಆದಷ್ಟು ಬೇಗ ಆಸ್ಪತ್ರೆಯ ಸೇವೆಯನ್ನು ತಾಯಿ ಮತ್ತು ಮಕ್ಕಳಿಗೆ ಒದಗಿಸಬೇಕೆನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
