ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 29
ವಿಪರೀತ ಮಳೆಯಿಂದ ಸಿಂಧನೂರು, ಮಸ್ಕಿ ತಾಲೂಕಿನಲ್ಲಿ ಅತೀವೃಷ್ಟಿ ಉಂಟಾಗಿ ಬೆಳೆ ನಷ್ಟದ ಭೀತಿಗೊಳಗಾದ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಇದಕ್ಕೂ ನಮಗೂ ಸಂಬಂಧವೇ ಇಲ್ಲವೆಂಬಂತೆ ಎರಡೂ ಕ್ಷೇತ್ರಗಳ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಟೊಂಕಕಟ್ಟಿಕೊಂಡು ಸಂಭ್ರಮದಲ್ಲಿ ಓಡಾಡುತ್ತಿದ್ದಾರೆ ಎಂದು ಉಭಯ ತಾಲೂಕುಗಳ ವಿವಿಧ ಜನಪರ ಸಂಘಟನೆಗಳ ಮುಖಂಡರು ಹಾಗೂ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಗ್ಗು ಪ್ರದೇಶದ ತೊಗರಿಗೆ ನುಗ್ಗಿದ ನೀರು, ಬಿರು ಮಳೆಗೆ ಉದುರುತ್ತಿರುವ ಮೊಗ್ಗು
“ಒಣ ಬೇಸಾಯಿ ಆಶ್ರಿತ ಗ್ರಾಮಗಳಲ್ಲಿನ ರೈತರ ತೊಗರಿ ಬೆಳೆ ಜಮೀನಿಗೆ ನೀರು ನುಗ್ಗಿದ್ದರಿಂದ ಕಾಂಡ ಕೊಳೆಯುತ್ತಿದೆ. ಹಲವು ರೈತರ ಜಮೀನಿನಲ್ಲಿ ನೆಟೆರೋಗದಿಂದ ಎಲೆಗಳು ಒಣಗಿವೆ. ಆಗಾಗ ಸುರಿಯುತ್ತಿರುವ ಬಿರು ಮಳೆಯಿಂದ ತೊಗರಿ ಬೆಳೆ ಮೊಗ್ಗು ಉದುರುತ್ತಿವೆ. ಹೊಲದಲ್ಲಿನ ನೀರು ಹರಿಮಾಡಿ ಬೇರೆ ಕಡೆ ಹರಿಸುವುದರೊಳಗೆ ದಿನವೂ ಒಂದಿಲ್ಲೊಂದು ಬಾರಿ ಮಳೆ ಸುರಿಯುತ್ತಿರುವುದರಿಂದ ಒಡ್ಡಿನ ಭಾಗ ಸೇರಿದಂತೆ ಇನ್ನಿತರೆ ಕಡೆ ನೀರು ನಿಲ್ಲುತ್ತಿದೆ. ರೈತರು ಏನೆಲ್ಲಾ ಹರಸಾಹಸಪಟ್ಟರೂ ಪ್ರಯೋಜನಕ್ಕೆ ಬರುತ್ತಿಲ್ಲ” ಎನ್ನುತ್ತಾರೆ ಉಭಯ ತಾಲೂಕಿನ ಗ್ರಾಮಗಳ ರೈತರು.

ನೀರು ಪಾಲಾದ ಜೋಳ, ಸಿಂಧನೂರು ತಾಲೂಕು ವ್ಯಾಪ್ತಿಯ ಎಲ್ಲೆಲ್ಲಿ ಬೆಳೆ ನಷ್ಟ ?
“ಸಿಂಧನೂರು ತಾಲೂಕು ವ್ಯಾಪ್ತಿಯ ಉದ್ಬಾಳ.ಜೆ, ಗೋಮರ್ಸಿ, ಜೋಳದರಾಶಿ, ಮಾಡಸಿರವಾರ, ಬೆಳಗುರ್ಕಿ, ಕಾತರಕಿ.ಡಿ, ಮಲದಿನ್ನಿ.ಡಿ, ಗೊಣ್ಣಿಗನೂರು, ಅಲಬನೂರು, ಹರಟೇನೂರು, ಬಾದರ್ಲಿ, ವಳಬಳ್ಳಾರಿ, ಗಿಣಿವಾರ, ಗೋನವಾರ, ರಾಮತ್ನಾಳ, ಕಗ್ಗಲ್.ಡಿ ಸೇರಿದಂತೆ ಇನ್ನಿತರೆ ಗ್ರಾಮಗಳ ಸೀಮೆ ವ್ಯಾಪ್ತಿಯಲ್ಲಿ ಸಾವಿರಾರು ಎಕರೆಯಲ್ಲಿ ರೈತರು ಹೈಬ್ರಿಡ್ ಜೋಳ ಬಿತ್ತನೆ ಮಾಡಿದ್ದಾರೆ. ಗೇಣು- ದೀಡು ಗೇಣು ಹಂತದಲ್ಲಿರುವ ಜೋಳದ ಹೊಲದ ತುಂಬೆಲ್ಲಾ ಮಳೆ ನೀರು ನಿಂತಿದ್ದು, ಕೊಳೆಯುವ ಹಂತ ತಲುಪಿವೆ. ಕೆಲವೊಂದು ಜೋಳದ ಹೊಲಗಳು ಥೇಟ್ ಭತ್ತದ ಗದ್ದೆಗಳಂತಾಗಿದ್ದು, ದಿನದಿಂದ ದಿನಕ್ಕೆ ಬೆಳೆ ಕೊಳೆಯುತ್ತಿವೆ. ಕೆಲವು ರೈತರ ಜಮೀನುಗಳಲ್ಲಿನ ಬಿತ್ತನೆ ಮಾಡಿದ ಜೋಳ ಮೊಳಕೆಯೊಡೆದಿಲ್ಲ” ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಜೋಳ ಬೆಳೆ ಬಿತ್ತನೆ ಮತ್ತು ಫೋಷಣೆಗೆ ರೈತರು ಮಾಡಿದ ಖರ್ಚು-ವೆಚ್ಚ
“1 ಹೈಬ್ರಿಡ್ ಜೋಳದ ಪಾಕೀಟ್ ಬೆಲೆ 1350 ರೂಪಾಯಿ, 2 ಎಕರೆಗೆ 2700, 2 ಎಕರೆಗೆ 1 ಚೀಲಕ್ಕೆ 1450 ರೂ. ದರದ 2 ಚೀಲ ಡಿಎಪಿ 2900 ರೂ. ಗೊಬ್ಬರ ಹಾಕಲಾಗಿದೆ. ಎರಡನೇ ಬಾರಿ 2 ಎಕರೆಗೆ 1400 ಬೆಲೆಯ 20-20 ಗೊಬ್ಬರ 2800 ರೂ, ಮತ್ತೊಂದು ಬಾರಿ 2 ಚೀಲ ಡಿಎಪಿ 2900, 2 ಸಲ ಕ್ರಿಮಿನಾಶಕ 1000 ರೂ, 2 ಎಕರೆಗೆ ಬಿತ್ತಲು ಎಲ್ಲ ಸೇರಿ 3000 ರೂ, ಉಳುಮೆ ಮಾಡುವ ಮುನ್ನ ಟಿಲ್ಲರ್ ಕುಂಟೆ ಹೊಡೆಯಲು ಎರಡು ಬಾರಿ 3000 ರೂ, ಕೊನೆಯ ಬಾರಿ 1 ಸಲ ಟ್ರ್ಯಾಕ್ಟರ್ ಕುಂಟೆ ಹೊಡೆಯಲು 600 ರೂ. ಒಟ್ಟು ಲೆಕ್ಕ ಹಾಕಿದರೆ 2 ಎಕರೆಗೆ 18,900 ರೂ.ಖರ್ಚಾಗುತ್ತದೆ. ಜಮೀನಿನ ರೈತರ ಮಾನವ ಶ್ರಮ ಲೆಕ್ಕಹಾಕಿದರೆ ಎಕರೆ 10 ಸಾವಿರ ರೂಪಾಯಿಗೂ ಹೆಚ್ಚು ನಷ್ಟವಾಗಿದೆ” ಎಂದು ರೈತರೊಬ್ಬರು ನೊಂದು ಹೇಳುತ್ತಾರೆ.

ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ವರುಣಾರ್ಭಟಕ್ಕೆ ತತ್ತರಿಸಿದ ತೊಗರಿ ಬೆಳೆ
ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿರೇಬೇರಿಗಿ, ವೀರಾಪುರ, ರತ್ನಾಪುರ, ಕಲ್ಮಂಗಿ, ಉಮಲೂಟಿ, ಬುಕ್ಕನಹಟ್ಟಿ, ಗೊರಲೂಟಿ, ಹೊಸೂರು, ಹತ್ತಿಗುಡ್ಡ, ಗುಂಡಾ, ಗಂಟೇರಹಟ್ಟಿ, ಮಂಗನಮ್ಮನ ಹಟ್ಟಿ, ರತ್ನಾಪುರ ಹಟ್ಟಿ, ಬೊಮ್ಮನಾಳ, ಮಾಂಪುರ, ಸಂಕನಾಳ, ಹೊಗರನಾಳ-ಗುಡಿಹಾಳ, ಹೊಕ್ರಾಣಿ, ಬಪ್ಪೂರು ಗ್ರಾಮಗಳ ಸೀಮಾದ ರೈತರ ಹೊಲಗಳಲ್ಲಿ ತೊಗರಿ ಬೆಳೆಯಲ್ಲಿ ನೀರು ನಿಂತಿದೆ. ಇದರಿಂದ ತಂಪು ಹೆಚ್ಚಾಗಿ ಕೆಲವು ಕಡೆ ತೊಗರಿಯ ಕಾಂಡ ಕೊಳೆಯುತ್ತಿದೆ. ಇನ್ನೂ ಹಲವು ಕಡೆ ನೆಟೆ ರೋಗ ಹೆಚ್ಚಿದೆ. ಸುರಿಯುತ್ತಿರುವ ಮಳೆಗೆ ಮೊಗ್ಗುಗಳು ಉದುರುತ್ತಿವೆ. ತೊಗರಿ ಬೆಳೆ ಎಕರೆಗೆ 5 ಸಾವಿರ ಖರ್ಚು ಮಾಡಲಾಗಿದೆ. ವಿಪರೀತ ಮಳೆಯಿಂದಾಗಿ ಬೆಳೆ ನಷ್ಟವಾದರೆ ಸಾಲದ ಹೊರೆ ಇನ್ನಷ್ಟು ಹೆಚ್ಚಲಿದೆ ಎಂದು ರೈತರು ಹೇಳುತ್ತಾರೆ.
“ಹೊಲ್ದ ತುಂಬೆಲ್ಲಾ ನೀರು ನಿಂತೈತ್ರಿ, ತೊಗರಿ ಈ ಸಲ ಕೈಗೆ ಹತ್ತಂಗಿಲ್ಲಂತ ಗ್ಯಾರಂಟಿ ಆಗೇತಿ”
“ನಮ್ಮ ತೊಗರಿ ಹೊಲ್ದಾಗ ಮಳಿ ನೀರು ನಿಂತು, ಹತ್ತು-ಹದಿನೈದು ಎಕ್ರೆ ಸಂಪೂರ್ಣ ಹಾಳಾಗೈತ್ರಿ. ಹಿಂಗಾಗಿ ಈ ಸಲ ತೊಗರಿ ಬೆಳಿ ಕೈಗೆ ಹತ್ತಂಗಿಲ್ಲಂತ ನಮಗ ಗ್ಯಾರಂಟಿ ಆಗೇತಿ. ಮಾಡಿದ ಖರ್ಚೆಲ್ಲ ಈ ಬಾರಿ ತಲೆಮ್ಯಾಲೆ ಬಿದ್ದಂಗ. ಏನ್ ಮಾಡಬಕನು ತಿಳಿವಲ್ದು. ರೈತರು ಇಷ್ಟೆಲ್ಲಾ ಸಮಸ್ಯೆದೊಳಗ ಇದ್ರೂ ಯೊವೊಬ್ಬ ಅಧಿಕಾರಿ ಕೂಡ, ಜನಪ್ರತಿನಿಧಿ ಕೂಡ ನಮ್ಮ ಕಷ್ಟ ಕೇಳ್ಯಾಕ ಬಂದಿಲ್ಲ ನೋಡ್ರಿ” ಎಂದು ಕಲ್ಮಂಗಿ ಗ್ರಾಮದ ಶರಣೇಗೌಡ ಕುಲಕರ್ಣಿಯವರು ಅಳಲು ತೋಡಿಕೊಂಡಿದ್ದಾರೆ.
“ಈ ಸಲ ಹತ್ತಿ ಬೆಳೆದವರ ಕಷ್ಟ ಹೇಳಾಂಗ್ರಿಲ್ಲ ನೋಡ್ರಿ”
“ಈ ಸಲ ಹತ್ತಿ ಬೆಳೆದವರ ಪಾಡು ಹೇಳಾಂಗಿಲ್ಲ ನೋಡ್ರಿ. ಮೂರು ಎಕ್ರೆದಾಗ ಹತ್ತಿ ಬಿತ್ತೀನಿ. ಒಂದೇ ಸಮನೆ ದಿನಾ ದಿನಾ ಮಳಿ ಹೊಡತಕ್ಕ ಬಿಟ್ಟಿದ್ದ ಹತ್ತಿ ಜಂಗ್ ಹಿಡದೈತಿ. ಕಾಯಿ ಹುಳುಕು ಬಿದ್ದಾವ. ಹತ್ತಿ ಬೆಳಿ ಎಲಿ ಎಲ್ಲಾ ಕಂದು ಬಣ್ಣ ತಿರುಗಿ ಹೊಲದ ತುಂಬೆಲ್ಲಾ ನೀರು ನಿಂತು ಅದ್ರ ಫಜೀತಿ ನೋಡಬಾರ್ದ ರ‍್ರೀ. ನಮ್ಮ ಊರಾಗ ಏನೆಲ್ಲಾ ಅಂದ್ರೂ ಅರವತ್ತು ಎಪ್ಪತ್ತು ಎಕ್ರದಾಗ ರೈತ್ರು ಹತ್ತಿ ಬೆಳದಾರ. ಅವ್ರುದು ಈ ವರ್ಷ ಪೂರಾ ಲಾಸ್ ನೋಡ್ರಿ” ಎಂದು ಹಿರೇಬೇರಿಗಿಯ ರೈತ ಉಮೇಶ ನೋವು ತೋಡಿಕೊಂಡಿದ್ದಾರೆ.
ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ಡೋಂಟ್ ಕೇರ್ ?
“ತೊಗರಿ, ಜೋಳ, ಸಜ್ಜೆ ಹಾಗೂ ಹತ್ತಿ ಬೆಳೆ ನಷ್ಟದ ಸಮೀಕ್ಷೆ ಕುರಿತಂತೆ ರೈತರು ಕಂದಾಯ ಇಲಾಖೆ ಅಧಿಕಾರಿಗಳು, ಕೃಷಿ ಇಲಾಖೆಯವರನ್ನು ಸಂಪರ್ಕಿಸಿದರೆ, ಸರ್ಕಾರದಿಂದ ನಮಗೆ ಸ್ಪಷ್ಟ ನಿರ್ದೇಶನ, ಆದೇಶ ಬಂದಿಲ್ಲ, ನಾವು ಏನು ಮಾಡಬೇಕು. ನೀವು ಯಾರಿಗಾದರೂ ಹೇಳಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತದ ಮೇಲೆ ಒತ್ತಡ ತರಬೇಕಾದ ಉಭಯ ತಾಲೂಕುಗಳ ಚುನಾಯಿತ ಜನಪ್ರತಿನಿಧಿಗಳೇ ನಿರಾಸಕ್ತಿ ವಹಿಸಿದಾಗ, ಇನ್ನೂ ತಾಲೂಕುಗಳ ತಹಸೀಲ್ದಾರ್ ಅವರೂ ಅಲಕ್ಷಿಸಿದಾಗ ಕೆಳ ಹಂತದ ಅಧಿಕಾರಿಗಳಾದರೂ ಏನು ಮಾಡುತ್ತಾರೆ” ಎಂದು ಸಂಘಟನೆಯ ಮುಖಂಡರೊಬ್ಬರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
“ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟನೆ ಕಾರ್ಯಕ್ರಮಕ್ಕೆ ಮಾತ್ರ ಬರ‍್ತಾರೆ”
“ಸಿಂಧನೂರು, ಮಸ್ಕಿ ತಾಲೂಕಿನ ರೈತರು ಅತಿವೃಷ್ಟಿಯಿಂದ ಸಮಸ್ಯೆ ಅನುಭವಿಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ಮಾತ್ರ ಈ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸಿಲ್ಲ. ಇವರು ಉದ್ಘಾಟನೆ ಕಾರ್ಯಕ್ರಮಗಳಿಗೆ ಮಾತ್ರ ಬಂದು ಜನರಿಗೆ ಕೈಗೆ ಸಿಗದಂತೆ ಹೋಗುತ್ತಾರೆ. ಕೆಲ ದಿನಗಳ ಹಿಂದೆ ಜೋಳದ ಬೆಂಬಲ ಬೆಲೆಗೆ ಆಗ್ರಹಿಸಿ ಹೋರಾಟ ನಡೆಸಿದಾಗಲೂ ಸರ್ಕಾರ ಮಟ್ಟದಲ್ಲಿ, ಸದನಲ್ಲಿ ಧ್ವನಿ ಎತ್ತದ ಇವರು, ರೈತರು ಸಿಂಧನೂರು ಬಂದ್ ಮಾಡಿ ಹೋರಾಟ ಮಾಡಿದರೂ ಇಲ್ಲಿಗೆ ಬರಲಿಲ್ಲ. ರೈತರ ಬಗ್ಗೆ ಇವರಿಗೆ ಎಳ್ಳಷ್ಟೂ ಕಾಳಜಿ ಇಲ್ಲ” ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
