ಹಾಸ್ಯಲೋಕ : ಬಸವರಾಜ ಹಳ್ಳಿ
‘ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ’, ‘ರೊಕ್ಕ ಸಮಿತಿಯದ್ದು, ಪ್ರಚಾರ ನಮ್ದು’ ‘ಕ್ಯಾಮೆರಾ ನೋಡಿ ಹಾಕು ಸ್ಟೆಪ್ಪು’ ‘ಫ್ರೀ ಪ್ರಚಾರ-ಹಾಕು ಜೈಕಾರ’… ಇತ್ತೀಚೆಗೆ ಮುಗಿದ ಉತ್ಸವೊಂದರಲ್ಲಿ ‘ರೀಲ್ಸ ಪಟಾಲಮ್ಮಿನ’ ತರಹೇವಾರಿ ಥಕ ಥೈ ಕುಣಿತ ಹಾಗೂ ಫೋಸುಗಳನ್ನು ಕಂಡವರು ಹಳೆ ಗಾದೆಗಳಿಗೆ ಉರಿಹೊಡೆದು ಹಾದಿಬೀದಿಯಲ್ಲಿ ನಗಾಡುತ್ತಿದ್ದಾರೆ..!?
ಕೈಬೀಸಿದರೆ ರೀಲ್ಸು, ಥೈ ಥಕ ಕುಣಿದರೆ ರೀಲ್ಸು, ಕಾಯಿ ಹೊಡೆಯಲು ರೀಲ್ಸು, ಕೇಕೆ ಹಾಕಲು ರೀಲ್ಸು, ಗೊಮಾಳ ಆ ಕಡೆಯಿಂದ ಈಕಡೆ ತಿರುಗಿಸಿದರೂ ರೀಲ್ಸು” ಉತ್ಸವದ ಮುಂದಾಳುಗಳನ್ನೇ ಹಿಂದಿಕ್ಕಿದ ಇಂತಿಪ್ಪ ರೀಲ್ಸುಗಾರರ ರೀಲ್ಸುಗಳನ್ನು ನೋಡಿ ನೋಡಿ ಕಣ್ಣು ನೋಯಿಸಿಕೊಂಡವರು ಇದಪ್ಪಾ! ರೀಲ್ಸ್ ರಾಜರ ತಾಕತ್ತು !! ನಾವೂ ಹೋಗಿದ್ದರೆ ನಮ್ಮವೂ ಒಂದಿಷ್ಟು ರೀಲ್ಸು ಮಾಡಬಹುದಿತ್ತು ಎಂದು ಕೈಕೈ ಹಿಸುಕಿಕೊಂಡಿದ್ದಾರಂತೆ !?
ರೀಲ್ಸುಗಾರರ ಎಡರು-ತೊಡರು ಕುಣಿತ ಸೆರೆ ಹಿಡಿಯಲು ಕ್ಯಾಮೆರಾಗಾರರು ಪಟ್ಟಪಾಡು ಅಷ್ಟಿಷ್ಟಲ್ಲ ಎಂದು ಉತ್ಸವದ ಪಡಸಾಲೆಯಲ್ಲಿ ಗುಸು ಗುಸು ಅನುರಣಿಸುತ್ತಿದೆ. “ನನ್ನದು ಒಂದು ರೀಲ್ಸ್ ಹೀಗಿರಲಿ, ನಂದೂ ಒಂದು ಹಿಂಗಿರಲಿ, ನಾನು ಮುಂದೆ ಬರುವಾಗ ರೀಲ್ಸ್ ಮಾಡು, ನನ್ನ ವಿಡಿಯೋ ಸ್ವಲ್ಪ ಜಾಸ್ತಿ ಫೋಕಸ್ ಮಾಡು…” ಹಲವು ಗಿಳಿಪಾಠಗಳಿಗೆ ಕ್ಯಾಮೆರಾಗಾರರು ಕಿವಿ ಕೆರೆದುಕೊಳ್ಳುವಂತಾಗಿತ್ತು ಎನ್ನುವುದು ಇದನ್ನು ಕೇಳಿಸಿಕೊಂಡವರ ಒಂದು ಇದು ಆಗಿದೆ…! ಸಾರಿ ಅಭಿಪ್ರಾಯವಾಗಿದೆ.!!
ಯಾರೇ ಕೂಗಾಡಲಿ, ಊರೇ ಮಾತಾಡಲಿ.. ನಮ್ಮ ರೀಲ್ಸುಗಳು ಹಬ್ಬಿ ಹಾರಾಡಿದರೆ ಸಾಕೆಂದು… ಪೈಪೋಟಿಗೆ ಬಿದ್ದವರಂತೆ ರೀಲ್ಸು ಮೇಲೆ ರೀಲ್ಸು ಮಾಡಿಸಿದವರ ಬಗ್ಗೆ ಹಲವರು ಬಾಯಾರೇ ವ್ಯಂಗ್ಯವಾಡಿದ್ದಂತೂ ನಿಜ..! ಅಂತೂ ಇಂತೂ ಉತ್ಸವ ಮುಗಿದರೂ ರೀಲ್ಸುಗಳ ಸುರಿಮಳೆಯಂತೂ ಇದ್ದೇ.. ಇದೆ..!! ಅಂತಾರ ಒಬ್ರು..!
