ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 10
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ದಾಳಿಗೆ ಯತ್ನಿಸಿದ ಸನಾತನಿ-ಮನುವಾದಿ ವ್ಯಕ್ತಿಯ ವಿರುದ್ಧ ದೇಶದ್ರೋಹ ಅಡಿ ಕೇಸ್ ದಾಖಲಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಸಂವಿಧಾನ ರಕ್ಷಣಾ ಸಮಿತಿ ಆಗ್ರಹಿಸಿದೆ. ಸುಪ್ರಿಂ ಮುಖ್ಯ ನ್ಯಾಯಾಧೀಶರ ಮೇಲೆ ನಡೆದ ದಾಳಿ ಖಂಡಿಸಿ ಅ.14ರಂದು ಎಪಿಎಂಸಿಯಿAದ ತಹಸಿಲ್ ಕಚೇರಿವರೆಗೆ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ಮೆರವಣಿಗೆ ಹಿನ್ನೆಲೆಯಲ್ಲಿ, ನಗರದ ಮಿಲಾಪ್ ಶಾದಿಮಹಲ್‌ನಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಮುಖಂಡರು, ಈ ಘಟನೆಯು ವೈಯಕ್ತಿಕ ಅಸಹನೆ ಮಾತ್ರವಾಗಿರದೇ, ಸಮಸ್ತ ಭಾರತೀಯರಿಗೆ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಕಲ್ಪಿಸುವ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಬಹುದೊಡ್ಡ ಷಡ್ಯಂತ್ರದ ಭಾಗವಾಗಿದೆ.ದೇಶದಲ್ಲಿ ಆವರಿಸಿಕೊಳ್ಳುತ್ತಿರುವ ಅಮಾನವೀಯ ಧಾರ್ಮಿಕ ಮೂಲಭೂತವಾದದ ಸಂಕೇತವಾಗಿದೆ. ಇದು ಕೇವಲ ನ್ಯಾಯಮೂರ್ತಿ ಗವಾಯಿ ಅವರ ಮೇಲಿನ ದಾಳಿಯಾಗಿರದೇ ಸಂವಿಧಾನ, ನ್ಯಾಯಾಂಗ ಹಾಗೂ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಸಿದ್ಧಾಂತದ ಮೇಲೆ ನಡೆದ ಬಹುದೊಡ್ಡ ಹಲ್ಲೆಯಾಗಿದೆ ಎಂದು ವಿಶ್ಲೇಷಿಸಿದರು.

ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಇದುವರೆಗೂ ಯಾವುದೇ ಕ್ರಮ ಆಗಿರುವುದಿಲ್ಲ, ಹಾಗಾಗಿ ಕೂಡಲೇ ಈ ವ್ಯಕ್ತಿಯ ವಿರುದ್ಧ ಕೇಸ್ ದಾಖಲಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಇಲ್ಲದೇ ಹೋದರೆ ಇಂತಹ ಘಟನೆಗಳು ಮರುಕಳಿಸುವ ಸಾಧ್ಯತೆ ಇದ್ದು, ದುಷ್ಕೃತ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ಜಾತಿ ಮನಸ್ಥಿತಿಯ ಸನಾತನವಾದಿ ಸಿಜೆಐ ಅವರು ದಲಿತ ಸಮುದಾಯದಿಂದ ಬಂಧಿದ್ದಾರೆ ಎನ್ನುವ ಕಾರಣಕ್ಕೆ ಕೊಳಕು ಜಾತಿ ಮನಸ್ಥಿತಿಯಿಂದಾಗಿ ಇಂತಹ ದುಷ್ಕೃತ್ಯಕ್ಕೆ ಕೈಹಾಕಿದ್ದಾನೆ. ಇದು ದೇಶದಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಜಾತಿಯನ್ನು ಮೂಲೋತ್ಪಾಟನೆ ಮಾಡದ ಹೊರತು ದಲಿತ ಸಮುದಾಯಗಳಿಗೆ, ಹಿಂದುಳಿದ ಸಮುದಾಯಗಳಿಗೆ ಅಸ್ತಿತ್ವವಿಲ್ಲ. ಸಂವಿಧಾನ ಮತ್ತು ಪ್ರಜಾತಂತ್ರ ವಿರೋಧಿಗಳ ವಿರುದ್ಧ ಸಂವಿಧಾನಪರ ಮನಸ್ಸುಗಳು ಒಗ್ಗೂಡಿ ಹೋರಾಟ ನಡೆಸಬೇಕಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು.

