ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 10
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ಶೂ ಎಸೆದು, ಸಂವಿಧಾನ ಮತ್ತು ನ್ಯಾಯಾಂಗದ ಮೇಲೆ ದಾಳಿ ನಡೆಸಿದ ಮನುವಾದಿಯ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ವತಿಯಿಂದ ಗ್ರೇಡ್ 2 ತಹಸೀಲ್ದಾರ್ ಚಂದ್ರಶೇಖರ ಹಟ್ಟಿ ಅವರ ಮೂಲಕ ರಾಷ್ಟ್ರಪತಿಯವರಿಗೆ ಶುಕ್ರವಾರ ಮನವಿಪತ್ರ ರವಾನಿಸಲಾಯಿತು
ಈ ವೇಳೆ ವಿದಾರ್ಥಿ ಮುಖಂಡ ಇ.ಎಚ್.ನಾಯಕ ಎಲೆಕೂಡ್ಲಿಗಿ ಮಾತನಾಡಿ, “ಮನುವಾದಿ-ಜಾತಿವಾದಿ-ಸನಾತನ ಮನಸ್ಥಿತಿಯ ವಕೀಲನೊಬ್ಬ ಕೋರ್ಟ್ ಕಲಾಪದ ಸಮಯದಲ್ಲೇ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿಯವರತ್ತ ಶೂ ಎಸೆದಿರುವುದು ಹೇಯ ಕೃತ್ಯವಾಗಿದ್ದು, ಈ ಆಘಾತಕಾರಿ ಘಟನೆಯನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಈ ಕೂಡಲೇ ತಪ್ಪಿತಸ್ಥನನ್ನು ಬಂಧಿಸಿ ದೇಶದ್ರೋಹಿ ಕೇಸ್ ದಾಖಲಿಸಿ ಶಿಕ್ಷಿಸಬೇಕು” ಎಂದು ಆಗ್ರಹಿಸಿದರು.
“ಜಾತಿವಾದಿಗಳು, ಸನಾತನವಾದಿಗಳು ಹಾಗೂ ಮನುವಾದಿಗಳು ದೇಶಕ್ಕೆ ಸ್ವಾತಂತ್ರö್ಯ ಬಂದು 78 ವರ್ಷಗಳಾದರೂ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಗೌರವಿಸುತ್ತಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇದು ಕೇವಲ ಒಬ್ಬ ನ್ಯಾಯಾಧೀಶರ ಮೇಲಿನ ದಾಳಿಯಲ್ಲ ಇದು ಇಡೀ ಸಂವಿಧಾನ ಮತ್ತು ನ್ಯಾಯಾಂಗದ ಮೇಲಿನ ದಾಳಿಯಾಗಿರುತ್ತದೆ. ಇತ್ತೀಚೆಗೆ ಬಿಜೆಪಿ ನಾಯಕರ ಜಾತಿವಾದ, ಮನುವಾದಿ ಮತ್ತು ಕೋಮುವಾದಿ ಹೇಳಿಕೆಗಳು ಇಂತಹ ಕೃತ್ಯಗಳಿಗೆ ಉತ್ತೇಜನ ನೀಡಿವೆ. ಇದು ಸಂಘ ಪರಿವಾರದ ಅಸಹಿಷ್ಣುತೆ ಮತ್ತು ಹಿಂದುತ್ವ ಶಕ್ತಿಗಳು ದೇಶದಾದ್ಯಂತ ಹರಡಿದ ವಿಭಜಕ ಸಿದ್ಧಾಂತಕ್ಕೆ ಸಾಕ್ಷಿಯಾಗಿದೆ. ಸಂಘ ಪರಿವಾರ ಹರಡಿದ ಕೋಮುವಾದಿ ಮತ್ತು ಜಾತಿವಾದಿ ವಿಷವು ದಲಿತ ನ್ಯಾಯಾಧೀಶರಾದ ಸಿಜೆಐ ಅವರನ್ನು ಸಹ ಬಹಿರಂಗವಾಗಿ ಗುರಿಯಾಗಿಸುವ ಹಂತವನ್ನು ತಲುಪಿರುವುದು ಇಡೀ ದೇಶದ ನಾಗರಿಕರಿಗೆ ಎಚ್ಚರಿಕೆ ಗಂಟೆಯಾಗಿದೆ” ಎಂದು ನಾಯಕ ಕಳವಳ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಮುಖಂಡ ದುರುಗೇಶ ಸಾಬಾಳ ಮಾತನಾಡಿ, “ದಲಿತ ಸಮುದಾಯದಿಂದ ಬಂದು, ಈ ದೇಶದ ಅತ್ಯುನ್ನತ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಪದವಿಯನ್ನು ಅಲಂಕರಿಸಿರುವುದನ್ನು ಸಹಿಸದ ಮನುವಾದ ಶಕ್ತಿಗಳು ದಾಳಿ ಮಾಡುವ ಹಂತಕ್ಕೂ ಹೋಗಿರುವುದು ದೇಶದ ಪ್ರಜಾಪ್ರಭುತ್ವಕ್ಕೆ ಎದುರಾದ ಆಪತ್ತಾಗಿದೆ. ಇಂತಹ ಸಂದರ್ಭದಲ್ಲಿ ದಲಿತ ಸಮುದಾಯಗಳಿಗೆ ರಕ್ಷಣೆ ಎಲ್ಲಿ ಎನ್ನುವ ಆತಂಕ ನಮ್ಮನ್ನು ಕಾಡುತ್ತಿದೆ. ಐಪಿಎಲ್, ಏಕದಿನ ಕ್ರಿಕೆಟ್ ಪಂದ್ಯಾವಳಿ ಫಲಿತಾಂಶ ಬಂದಾಗ ಇಲ್ಲವೇ ಸಮಾಜದ ಮೇಲ್ವರ್ಗಗಳ ಪ್ರಶಸ್ತಿ, ಗೌರವಗಳ ಬಗ್ಗೆ ತತ್‌ಕ್ಷಣ ಪ್ರತಿಕ್ರಿಯಿಸುವ ಪ್ರಧಾನಿ ನರೇಂದ್ರ ಮೋದಿಯವರು, ದೇಶದ ಅತ್ಯುನ್ನತ ಪದವಿಯಲ್ಲಿರುವ ಸುಪ್ರಿಂಕೋಟ್ ನ್ಯಾಯಾಧೀಶರ ಮೇಲೆ ದಾಳಿ ನಡೆದು 9 ಗಂಟೆಗಳ ನಂತರ ಪ್ರತಿಕ್ರಿಯಿಸಿರುವುದು ನೋಡಿದರೆ, ಇವರಿಗೆ ನ್ಯಾಯಾಂಗದ ಬಗ್ಗೆ ಇರುವ ಗೌರವದ ಬಗ್ಗೆ ಗೊತ್ತಾಗುತ್ತದೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಡೀ ಅಧಿಕಾರಶಾಹಿ ಆಡಳಿತ ವ್ಯವಸ್ಥೆಯನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡಿರುವ ಫ್ಯಾಸಿಸ್ಟ್ ಶಕ್ತಿಗಳು ಈಗ ನ್ಯಾಯಾಂಗದ ಮೇಲೆ ಆಕ್ರಮಣ ಮಾಡಲು ಬಹಿರಂಗ ದಾಳಿಗಿಳಿದಿವೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲೆಯೇ ಇಂತಹ ದಾಳಿಗಳು ನಡೆದರೆ, ಇನ್ನುಳಿದ ಕೋರ್ಟ್ನ ನ್ಯಾಯಾಧೀಶರ ಪರಿಸ್ಥಿತಿ ಹೇಗೆ ? ಇಡೀ ನ್ಯಾಯಾಂಗ ವ್ಯವಸ್ಥೆಯ ಮೇಲೆಯೇ ಸನಾತನವಾದಿಗಳು ನಮ್ಮ ಪರವಾಗಿ ತೀರ್ಪು ನೀಡದೇ ಹೋದರೆ ನಾವು ಸುಮ್ಮನಿರುವುದಿಲ್ಲ ಎಂದು ಪರೋಕ್ಷವಾಗಿ ಬೆದರಿಕೆ ಹಾಕಿದಂತಾಗಿದೆ ಎಂದು ಸಂಘಟನೆಯ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಶೂ ಎಸೆದ ವಕೀಲನ ವಿರುದ್ಧ ದೇಶದ್ರೋಹಿ ಕಾನೂನಿನಡಿ ಕೇಸ್ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಮಾನ್ಯ ಬಿ.ಆರ್.ಗವಾಯಿ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು, ಇಂತಹ ದುಷ್ಕೃತ್ಯಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ರಾಷ್ಟçಪತಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಈ ವೇಳೆ ವಿದ್ಯಾರ್ಥಿ ಮುಖಂಡರಾದ ಯಲ್ಲಾಲಿಂಗಪ್ಪ, ನಿರುಪಾದಿ, ರಾಜೇಶ್, ರಮೇಶ, ಹುಲ್ಲೇಶ, ಚಂದಪ್ಪ, ಸೂರ್ಯಶ ಇನ್ನಿತರರಿದ್ದರು.
