ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು ಜುಲೈ 3, 2026
ಮುಂಗಾರು ಮಳೆ ಕೊರತೆಯಿಂದ ತಾಲ್ಲೂಕಿನ ಕೆರೆಗಳ ನೀರಿನ ಪ್ರಮಾಣದಲ್ಲಿ ಭಾರಿ ಕುಸಿತವಾಗಿದ್ದು, ವಾರದೊಳಗೆ ಕಾಲುವೆಗಳಿಗೆ ನೀರು ಹರಿಸದಿದ್ದರೆ ಜನ-ಜಾನುವಾರುಗಳಿಗೆ ತೀವ್ರ ಸಂಕಷ್ಟ ಎದುರಾಗಲಿದೆ.
ತಾಲ್ಲೂಕು ವ್ಯಾಪ್ತಿಯಲ್ಲಿ 152 ಕುಡಿಯುವ ನೀರಿನ ಕೆರೆಗಳಿದ್ದು ಬಹುತೇಕ ಕೆರೆಗಳಲ್ಲಿ ನೀರಿನ ಪ್ರಮಾಣ ಶೇ.20ರಿಂದ 30ರಷ್ಟು ಮಾತ್ರ ಉಳಿದಿದ್ದು, ಇನ್ನೂ ಕೆಲ ಕೆರೆಗಳು ತಳ ಕಂಡಿವೆ. ಹೀಗಾಗಿ ವಾರದೊಳಗೆ ತುಂಗಭದ್ರಾ ನಾಲೆಗೆ ನೀರು ಹರಿಸದೇ ಹೋದರೆ ಸಮಸ್ಯೆ ಉದ್ಭವಿಸುವುದು ಗ್ಯಾರಂಟಿ ಎಂದು ಹಲವು ಗ್ರಾಮಗಳ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಸಮಸ್ಯಾತ್ಮಕ ಗ್ರಾಮಗಳು
ಬಾದರ್ಲಿ, ಹರೇಟನೂರು, ಆರ್.ಎಚ್.ನಂ.5, ತಿಮ್ಮಾಪುರ, ತಿಮ್ಮಾಪುರ ಕ್ಯಾಂಪ್, ಸಿ.ಎಸ್.ಎಫ್.2, ಬಸ್ಸಾಪೂರ.ಕೆ, ದುರ್ಗಾಕ್ಯಾಂಪ್, ಜಂಭುನಾಥನಹಳ್ಳಿ, ಚೆನ್ನಳ್ಳಿ, ಸಿದ್ರಾಂಪುರ, ಮಾವಿನಮಡಗು, ಗೀತಾ ಕ್ಯಾಂಪ್, ದೇವಿಕ್ಯಾಂಪ್, ಉಪ್ಪಳ, ಗಾಂಧಿನಗರ, ವೆಂಕಟೇಶ್ವರ ಕ್ಯಾಂಪ್, ತಾಯಮ್ಮ ಕ್ಯಾಂಪ್, ರಾಜೀವನಗರ ಕ್ಯಾಂಪ್, ಪಾಪಾರಾವ್ ಕ್ಯಾಂಪ್, ವಿಘ್ನೇಶ್ವರ ಕ್ಯಾಂಪ್, ಗೊರೇಬಾಳ, ಗೊರೇಬಾಳ ಕ್ಯಾಂಪ್, ಮೂಡಲಗಿರಿ ಕ್ಯಾಂಪ್, ಭೀಮರಾಜ ಕ್ಯಾಂಪ್, ಬಾಳೆಗಿಡ ಕ್ಯಾಂಪ್, ಶಾಂತಿನಗರ, ಗುಂಜಳ್ಳಿ, ಬನ್ನಟ್ಟಿ ಕ್ಯಾಂಪ್, 7ನೇ ಮೈಲ್ ಕ್ಯಾಂಪ್, ಸತ್ಯನಾರಾಯಣ ಕ್ಯಾಂಪ್, ನಾಗಲಿಂಗೇಶ್ವರ ಕ್ಯಾಂಪ್, ಹೆಡಗಿನಾಳ, ಹಟ್ಟಿ, ಹಟ್ಟಿಕ್ಯಾಂಪ್, ಹಂಚಿನಾಳ.ಕೆ, ಸತ್ಯವತಿಕ್ಯಾಂಪ್, ಬಂಗಾರಿಕ್ಯಾಂಪ್, ಪಾಂಡುರಂಗ ಕ್ಯಾಂಪ್, ಅರಳಹಳ್ಳಿ, ಮಲ್ಕಾಪುರ, ಅಂಬಾನಗರಕ್ಯಾಂಪ್, ಬನ್ನಿಗನೂರುಕ್ಯಾಂಪ್, ಮಣ್ಣಿಕೇರಿಕ್ಯಾಂಪ್, ಹೊಸಳ್ಳಿ.ಇ.ಜೆ, ಸತ್ಯವತಿಕ್ಯಾಂಪ್, ಅಮರಾಪುರ, ಸಾಸಲಮರಿ, ಹನುಮನಗರಕ್ಯಾಂಪ್, ಜಾಲಿಹಾಳ ಸೇರಿದಂತೆ ಹಲವು ಗ್ರಾಮ ಹಾಗೂ ಕ್ಯಾಂಪ್ಗಳ ಕೆರೆಗಳಲ್ಲಿನ ನೀರು ತಳಮಟ್ಟಕ್ಕೆ ಕುಸಿದಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ವಿವಿಧ ಹಳ್ಳಿಗಳ ಕೆರೆಗಳಲ್ಲಿ ಸದ್ಯದ ನೀರಿನ ಸಂಗ್ರಹ ಪ್ರಮಾಣ
ಸಿಂಧನೂರು ತಾಲ್ಲೂಕಿನಲ್ಲಿ 152 ಕೆರೆಗಳಿದ್ದು, ಅದರಲ್ಲಿ 2 ಕೆರೆಗಳು ಸಂಪೂರ್ಣ ಖಾಲಿಯಾಗಿವೆ. 71 ಕೆರೆಗಳಲ್ಲಿ ಶೇ.05ರಿಂದ ಶೇ.25 ರಷ್ಟು ನೀರು ಮಾತ್ರ ಸಂಗ್ರಹವಿದೆ. 67 ಕೆರೆಗಳಲ್ಲಿ ಶೇ.26ರಿಂದ ಶೇ.50ರಷ್ಟು ನೀರಿನ ಪ್ರಮಾಣ ಇದ್ದು, 12 ಕೆರೆಗಳಲ್ಲಿ ಶೇ.51 ರಿಂದ ಶೇ.75ರಷ್ಟು ನೀರಿದೆ. ತಾಲ್ಲೂಕಿನ ಅರ್ಧದಷ್ಟು ಕೆರೆಗಳಲ್ಲಿ ಶೇ.05ರಿಂದ ಶೇ.25ರಷ್ಟು ಮಾತ್ರ ನೀರಿದ್ದು, ಇನ್ನೂ ವಾರ ಇಲ್ಲವೇ 10 ದಿನಗಳವರೆಗೆ ಮಾತ್ರ ಪೂರೈಸಲು ಸಾಧ್ಯ. ತಳಮಟ್ಟದ ನೀರು ಸಂಪೂರ್ಣ ಹೊಂಡು ಮಿಶ್ರಿತವಾಗುವುದ ರಿಂದ ಬಳಕೆಗೆ ಯೋಗ್ಯವಲ್ಲ ಎಂದು ಗ್ರಾಮ ಪಂಚಾಯಿತಿ ಮೂಲಗಳು ತಿಳಿಸಿವೆ. ರವುಡಕುಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಗಾರಿ ಕ್ಯಾಂಪ್ನಲ್ಲಿ ಕೆರೆ ಸಂಪೂರ್ಣ ಖಾಲಿಯಾಗಿದ್ದು, ಬಾಡಿಗೆ ಕೆರೆಯನ್ನು ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನೂ ವಿರುಪಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣೇಶಕ್ಯಾಂಪ್ನಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಗ್ರಾ.ಪಂ.ನ ಮತ್ತೊಂದು ಕೆರೆಯಿಂದ ನೀರು ಪೂರೈಸಲಾಗುತ್ತಿದೆ.
ಆರ್ಡಿಡಬ್ಲ್ಯುಎಸ್ ಇಲಾಖೆ ಕೆರೆಗಳಲ್ಲಿ ಶೇ.30ರಷ್ಟು ಮಾತ್ರ ನೀರು !
ತಾಲ್ಲೂಕಿನ ತುರ್ವಿಹಾಳ ಮತ್ತು ಇತರೆ 33 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಕೆರೆಯಲ್ಲಿ ದಿನಾಂಕ:02-07-2026ರ ಮಾಹಿತಿಯಂತೆ ಶೇ.20, ಮುಕ್ಕುಂದ ಮತ್ತು ಇತರೆ ನಾಲ್ಕು ಹಳ್ಳಿಗಳಿಗೆ ನೀರು ಸರಬರಾಜು ಕೆರೆಯಲ್ಲಿ ಶೇ.30, ಹುಲ್ಲೂರು ಮತ್ತು ಇತರೆ ಹಳ್ಳಿಗಳ ವ್ಯಾಪ್ತಿಗೆ ನೀರು ಪೂರೈಸುವ ಕೆರೆಯಲ್ಲಿ ಶೇ.35, ಆರ್.ಎಚ್.ಕ್ಯಾಂಪ್ ಮತ್ತು ಇತರೆ 25 ಹಳ್ಳಿಗಳಿಗೆ ನೀರೊದಗಿಸುವ ಕೆರೆಯಲ್ಲಿ ಶೇ.30, ಜಂಗಮರಹಟ್ಟ ಮತ್ತು ಸುಲ್ತಾನಪುರ ವ್ಯಾಪ್ತಿಯ ಕುಡಿಯುವ ನೀರಿನ ಕೆರೆಯಲ್ಲಿ ಶೇ.30 ಹಾಗೂ ಹಂಪನಾಳ ಹಾಗೂ ಇತರೆ ಹಳ್ಳಿಗೆ ನೀರೊದಗಿಸುವ ಕೆರೆಯಲ್ಲಿ ಶೇ.30 ರಷ್ಟು ಮಾತ್ರ ನೀರಿನ ಸಂಗ್ರಹವಿದ್ದು, ಇನ್ನೂ 30 ದಿನಗಳವರೆಗೆ ನೀರು ಪೂರೈಸಬಹುದಾಗಿದೆ ಎಂದು ಗ್ರಾಮೀಣ ಕುಡಿಯುವ ನೀರಿನ ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಇಲಾಖೆ ಅಂದಾಜಿಸಿದೆ. ಆದರೆ ಈಗಲೇ ಈ ಗ್ರಾಮಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ.
ಸಚಿವರ ನೇತೃತ್ವದಲ್ಲಿ ಸಭೆ ?
ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ದಿನಾಂಕ: 03-07-2026ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿದೆ ಎಂದು ತಿಳಿದುಬಂದಿದೆ. ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳುವುದು ಸೇರಿದಂತೆ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರದ ಗಮನ ಸೆಳೆಯುವುದು ಸೇರಿದಂತೆ ಹಲವು ವಿಷಯಗಳು ಚರ್ಚಿಸಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಕುಡಿವ ನೀರಿನ ಸಮಸ್ಯೆ ತಾರಕಕ್ಕೆ, ಜನಪ್ರತಿನಿಧಿಗಳಿಗಿಲ್ಲ ಚಿಂತೆ : ಆರೋಪ
ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಧಿಕಾರಿಗಳ ಸಭೆ ನಡೆಸಿ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಚುನಾಯಿತ ಜನಪ್ರತಿನಿಧಿಗಳು ಮಾತ್ರ ಕಾಣುತ್ತಿಲ್ಲ. ಹೀಗಾದರೆ ಜನರು ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಕಾರ್ಮಿಕ ಮುಖಂಡರೊಬ್ಬರು ಹೇಳುತ್ತಾರೆ.
————————————————-
ಕೋಟ್
ಜಿಲ್ಲೆ ಸೇರಿ ಸಿಂಧನೂರು ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನೀರಿನ ಕೆರೆಗಳು ಬಹಳಷ್ಟು ಕಡೆ ಖಾಲಿಯಾಗಿವೆ. ಗ್ರಾಮೀಣ ಪ್ರದೇಶದಲ್ಲಿ ಜನರು ನೀರಿಗಾಗಿ ಅಲೆದಾಡುವಂತಾಗಿದೆ. ಹಳ್ಳ-ಕೆರೆ-ಕಟ್ಟೆಗಳು ಬತ್ತಿರುವುದರಿಂದ ಜಾನುವಾರು, ಕುರಿ, ಆಡುಗಳಿಗೆ ನೀರಿನ ಸಮಸ್ಯೆ ಎದುರಾಗಿದೆ. ಮಳೆ ಕೊರತೆಯಿಂದ ಜನಸಾಮಾನ್ಯರು ಹಾಗೂ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಕೂಡಲೇ ಜಿಲ್ಲಾಡಳಿತ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು, ಕುಡಿಯುವ ನೀರಿನ ಉದ್ದೇಶಕ್ಕೆ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸಬೇಕು ಹಾಗೂ ಬರ ಪರಿಹಾರ ಕಾರ್ಯಗಳನ್ನು ಜಾರಿಗೊಳಿಸಬೇಕು.
– ನಾಗರಾಜ ಪೂಜಾರ್, ಸಿಪಿಐ(ಎಂಎಲ್) ಲಿಬರೇಶನ್, ಜಿಲ್ಲಾ ಕಾರ್ಯದರ್ಶಿ
