ಸಿಂಧನೂರು ಕ್ಷೇತ್ರಕ್ಕೆ ಈ ಬಾರಿ ಸಚಿವ ಸ್ಥಾನ ಸಿಗುತ್ತಾ ?

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ, ಹಸಮಕಲ್
ನಮ್ಮ ಸಿಂಧನೂರು, ಜೂನ್ 14, 2026

ಕಲ್ಯಾಣ ಕರ್ನಾಟಕ ಭಾಗದಲ್ಲೇ ಸಿಂಧನೂರು ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ವ್ಯಾಪಾರ-ವಹಿವಾಟು, ಉದ್ಯೋಗ, ಮಾರುಕಟ್ಟೆ ಹೀಗೆ ಹತ್ತು ಹಲವು ಮಜಲುಗಳಲ್ಲಿ ತನ್ನದೇ ಆದ ಪಾರಮ್ಯ ಮೆರೆದಿದೆ. ಅತ್ಯಂತ ಟಕ್ಕಫರ್ ಚುನಾವಣೆಗಳಲ್ಲೊಂದಾದ ಈ ಕ್ಷೇತ್ರವನ್ನು ಕಾಂಗ್ರೆಸ್ ಅತಿಹೆಚ್ಚು ಬಾರಿ ತನ್ನ ಮಡಿಲಿಗೆ ಹಾಕಿಕೊಂಡಿದೆ. ಆದರೆ ಇಲ್ಲಿಯವರೆಗೂ ಕಾಂಗ್ರೆಸ್‌ನ ಯಾರೊಬ್ಬ ಸದಸ್ಯರೂ ಸಚಿವ ಸ್ಥಾನ ಅಲಂಕರಿಸಿಲ್ಲ !
14 ಚುನಾವಣೆಗಳಲ್ಲಿ 8 ಬಾರಿ ಕೈ ಅಭ್ಯರ್ಥಿಗಳು ಗೆಲುವು
1952ರಿಂದ 2023ರವರೆಗೆ ಒಟ್ಟು 14 ಚುನಾವಣೆಗಳು ನಡೆದಿದ್ದು, ಇದರಲ್ಲಿ 8 ಬಾರಿ ಕಾಂಗ್ರೆಸ್‌ನ ಅಭ್ಯರ್ಥಿಗಳೇ ಬರೋಬ್ಬರಿ 8 ಬಾರಿ ವಿಜಯಶಾಲಿಗಳಾಗಿದ್ದಾರೆ. ಕಾಂಗ್ರೆಸ್‌ನ ಭದ್ರಕೋಟೆಯೆಂದೇ ಈ ಕ್ಷೇತ್ರ ಪರಿಗಣಿಸಲ್ಪಟ್ಟಿದ್ದು, ಏನೇ ರಾಜಕೀಯ ಬದಲಾವಣೆಗಳಾದರೂ ಇಲ್ಲಿನ ಮತದಾರರು ಅತಿಹೆಚ್ಚು ಬಾರಿ ಕಾಂಗ್ರೆಸ್‌ನ ಅಭ್ಯರ್ಥಿಗಳಿಗೆ ಬೆಂಬಲಿಸಿದ್ದಾರೆ. ಆದರೆ ಇಲ್ಲಿನ ಚುನಾಯಿತ ಪ್ರತಿನಿಧಿಗಳಿಗೆ ರಾಜ್ಯಮಟ್ಟದಲ್ಲಿ ಪಕ್ಷದ ಹೈಕಮಾಂಡ್ ಪ್ರಮುಖ ಹುದ್ದೆಗಳನ್ನು ನೀಡಿಲ್ಲ ಎನ್ನುವ ಆರೋಪ ಇದೆ.
ಚುನಾವಣೆ ಪ್ರಚಾರಕ್ಕೆ ಬಂದಿದ್ದ ರಾಹುಲ್ ಗಾಂಧಿ
2013, ಏಪ್ರಿಲ್ 23ರಂದು ಅಂದಿನ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಎಐಸಿಸಿಯ ರಾಹುಲ್ ಗಾಂಧಿ ಅವರು ಸಿಂಧನೂರಿಗೆ ಆಗಮಿಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಂಪನಗೌಡ ಬಾದರ್ಲಿ ಅವರ ಪರ ಬಿರುಸಿನ ಪ್ರಚಾರ ನಡೆಸಿದ್ದರು. ಪಿಡಬ್ಲುö್ಯಡಿ ಕ್ಯಾಂಪಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಹಾಕಿದ್ದ ಬೃಹತ್ ವೇದಿಕೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಬಹಿರಂಗ ಭಾಷಣ ಮಾಡಿದ್ದರು. ಅವರೊಂದಿಗೆ ಎಐಸಿಸಿನ ಪ್ರಮುಖ ಮುಖಂಡರು ಆಗಮಿಸಿದ್ದರು.
ಶಾಸಕ ಹಂಪನಗೌಡ ಬಾದರ್ಲಿ 5 ಬಾರಿ ವಿನ್ !
ಶಾಸಕ ಹಂಪನಗೌಡ ಬಾದರ್ಲಿ ಅವರು ಕ್ಷೇತ್ರವನ್ನು ಪ್ರತಿನಿಧಿಸಿ 5 ಬಾರಿ ವಿಜಯಶಾಲಿಯಾಗುವ ಮೂಲಕ ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ. ಒಂದು ಬಾರಿ ಎಂಎಸ್‌ಐಎಲ್‌ನ ಅಧ್ಯಕ್ಷರಾಗಿಯೂ ಕಾರ್ಯನಿರ್ವ ಹಿಸಿದ್ದಾರೆ. ಈ ಬಾರಿ ಸಚಿವ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹಂಪನಗೌಡ ಬಾದರ್ಲಿ ಅವರು ಸಚಿವ ಸ್ಥಾನಕ್ಕೆ ತಮ್ಮದೇ ರೀತಿಯಲ್ಲಿ ಲಾಭಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಎಮ್ಮೆಲ್ಸಿ ಬಸನಗೌಡ ಬಾದರ್ಲಿಯೂ ಸಚಿವ ಸ್ಥಾನದ ಆಕಾಂಕ್ಷಿ
ಯೂತ್ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರಾಗಿ ವರ್ಚಸ್ಸು ವೃದ್ಧಿಸಿಕೊಂಡಿರುವ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರು ಸಿಎಂ ಡಿ.ಕೆ.ಶಿವಕುಮಾರ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಸಚಿವ ಸ್ಥಾನಕ್ಕೆ ತೆರೆಮರೆಯಲ್ಲಿ ತಮ್ಮದೇ ದಾಟಿಯಲ್ಲಿ ಲಾಭಿ ನಡೆಸಿದ್ದಾರೆಂದು ಹೇಳಲಾಗುತ್ತಿದೆ. 34 ಸಚಿವ ಸ್ಥಾನದ ಗಾತ್ರದಲ್ಲಿ, ಈಗಾಗಲೇ ಸಿಎಂ ಸೇರಿ 14 ಪ್ರತಿನಿಧಿಗಳು ಪ್ರಮಾಣ ವಚನ ಸ್ವೀಕರಿಸಿ ಹುದ್ದೆ ಅಲಂಕರಿಸಿದ್ದು, ಇನ್ನೂ 20 ಚುನಾಯಿತ ಪ್ರತಿನಿಧಿಗಳಿಗೆ ಮಾತ್ರ ಸಚಿವ ಸ್ಥಾನದ ಅವಕಾಶ ಇದೆ. ಹೀಗಾಗಿ ಹತ್ತು ಹಲವು ಮಾನದಂಡಗಳ ನಡುವೆ ಯಾರಿಗೆ ಸ್ಥಾನ ದೊರೆಯುತ್ತದೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ಹರಕೆ ಮತ್ತು ಪಾದಯಾತ್ರೆಗಳು…
ಶಾಸಕ ಹಂಪನಗೌಡ ಬಾದರ್ಲಿ ಅವರ ಬೆಂಬಲಿಗರು ಹಾಗೂ ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರ ಬೆಂಬಲಿಗರು, ಸಚಿವ ಸ್ಥಾನ ದೊರೆಯಲಿ ಎಂದು ಹರಕೆ ಮತ್ತು ಪಾದಯಾತ್ರೆ, ಬೈಕ್ರ್ಯಾಲಿಯನ್ನು ನಡೆಸುತ್ತಿದ್ದು, ಕ್ಷೇತ್ರದ ಜನರ ಗಮನ ಸೆಳೆದಿದೆ. ಪಕ್ಷದ ಹೈಕಮಾಂಡ್ ಈ ಬಾರಿಯಾದರೂ ಕ್ಷೇತ್ರದ ಪ್ರತಿನಿಧಿಗಳಿಗೆ ಮಣೆ ಹಾಕುತ್ತಾ ಇಲ್ಲವಾ ? ಎನ್ನುವುದು ಕಾದು ನೋಡಬೇಕಿದೆ.


Spread the love

Leave a Reply

Your email address will not be published. Required fields are marked *