ಸಿಂಧನೂರು: ‘ಜೋಳದ ಹಣ ರೈತರ ಖಾತೆಗೆ ಜಮಾ ಮಾಡಲು ಆಗ್ರಹಿಸಿ ರೈತ ಸಂಘದಿಂದ ಜೂನ್ 15ರಂದು ಪೋತ್ನಾಳ್‌ನ ಬಳಗಾನೂರು ಕ್ರಾಸ್ ಬಳಿ ರಸ್ತಾರೋಖ’

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 14, 2026

ಖರೀದಿ ಕೇಂದ್ರಗಳಿಗೆ ಜೋಳ ಮಾರಾಟ ಮಾಡಿ 3 ತಿಂಗಳು ಕಳೆದರೂ ಇಲ್ಲಿಯವರೆಗೂ ರೈತರ ಖಾತೆಗಳಿಗೆ ಹಣ ಜಮಾ ಮಾಡಿಲ್ಲ. ಇದರಿಂದಾಗಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಕಾರ್ಯ ಕೈಗೊಳ್ಳಲು ರೈತರು ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದು, ಕೂಡಲೇ ಹಣ ಜಮಾ ಮಾಡುವಂತೆ ಆಗ್ರಹಿಸಿ ಮಾನ್ವಿ ತಾಲ್ಲೂಕಿನ ಪೋತ್ನಾಳ್‌ನ ಬಳಗಾನೂರು ಕ್ರಾಸ್ ಬಳಿ ದಿನಾಂಕ: 15-06-2026 ಸೋಮವಾರದಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ರಸ್ತಾರೋಖ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಬಸವರಾಜ ಹಂಚಿನಾಳ ತಿಳಿಸಿದ್ದಾರೆ.
ಈ ಕುರಿತು ಭಾನುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, “ಖರೀದಿ ಕೇಂದ್ರಗಳಿಗೆ ಜೋಳ ಮಾರಾಟ ಮಾಡಿದ ರೈತರು ಚಾತಕ ಪಕ್ಷಿಯಂತೆ ಕಾಯುತ್ತ ಕುಳಿತಿದ್ದು, ಇದುವರೆಗೂ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಮುಂಗಾರು ಹಂಗಾಮು ಆರಂಭವಾಗಿದ್ದು ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಹಣಕಾಸಿ ತೊಂದರೆ ಎದುರಿಸುತ್ತಿದ್ದು, ಖಾಸಗಿ ಲೇವಾದೇವಿದಾರರ ಬಳಿ ಅಲೆಯುವಂತಾಗಿದೆ. ಬೆಳೆ ಬೆಳೆಯಲು ಮೂರು ತಿಂಗಳು, ಫಸಲು ಮಾರಾಟ ಮಾಡಿ 3 ತಿಂಗಳಾಯಿತು. ಒಟ್ಟು 6 ಕಳೆದರೂ ರೈತರ ಕೈಗೆ ಇನ್ನೂ ನಯಾ ಪೈಸೆ ಹಣ ದೊರೆತಿಲ್ಲವೆಂದರೆ ಇನ್ನೂ ಎಷ್ಟು ದಿನ ಕಾಯಬೇಕು, ರೈತರು ಹೇಗೆ ಕೃಷಿ ಮಾಡಬೇಕು” ಎಂದು ಅವರು ಪ್ರಶ್ನಿಸಿದ್ದಾರೆ.
‘34 ಕೋಟಿ ರೂಪಾಯಿ ಮಂಜೂರು’
ಕುಂಬಕರ್ಣನಿಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ಮುಂಗಾರು ಹಂಗಾಮಿನಲ್ಲಿ ಮಾರ್ಚ್ 14ರಿಂದ ಮಾರ್ಚ್ 24ರ ಒಳಗೆ ಖರೀದಿ ಕೇಂದ್ರಗಳಿಗೆ ಜೋಳ, ರಾಗಿ, ಮೆಕ್ಕೆಜೋಳ ಮಾರಾಟ ಮಾಡಿದ ರೈತರಿಗೆ ಇಡೀ ರಾಜ್ಯಕ್ಕೆ ಕೇವಲ 34 ಕೋಟಿ ರೂ ಬಿಡುಗಡೆಯಾಗಿದೆ. ಅದರಲ್ಲಿ ಸಿಂಧನೂರು ತಾಲ್ಲೂಕಿನ ಬೆರಳೆಣಿಕೆ ಫಲಾನುಭವಿಗಳಿಗೆ ಮಾತ್ರ ಹಣ ಜಮಾ ಆಗಿದೆ. ಉಳಿದ ಬಹುತೇಕ ರೈತರ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ. ರಾಯಚೂರು ಜಿಲ್ಲೆಯಲ್ಲೇ ಮುಂಗಾರು ಹಂಗಾಮಿನಲ್ಲಿ ಸರ್ಕಾರ ರೈತರ ಖಾತೆಗೆ 304 ರೂ ಕೋಟಿ ಹಣ ಪಾವತಿಸಬೇಕಿದೆ” ಎಂದು ಅವರು ತಿಳಿಸಿದ್ದಾರೆ.
“ಬೇಡಿಕೆ ಈಡೇರಿಕೆಗೆ ರಸ್ತಾರೋಖ ಚಳವಳಿ”
“ಜೋಳ ಮಾರಾಟ ಮಾಡಿದ ಎಲ್ಲ ರೈತರ ಖಾತೆಗಳಿಗೆ ಕೂಡಲೇ ಹಣ ಜಮಾ ಮಾಡುವಂತೆ ಆಗ್ರಹಿಸಿ ಅಂದು ಬೆಳಿಗ್ಗೆ 11 ಗಂಟೆಗೆ ಪೋತ್ನಾಳ್‌ನ ಬಳಗಾನೂರು ಕ್ರಾಸ್ ಬಳಿ ರಸ್ತಾರೋಖ ಚಳವಳಿ ನಡೆಸಲಾಗುವುದು. ಈ ಹೋರಾಟದಲ್ಲಿ ವಿವಿಧ ಗ್ರಾಮಗಳ 500ಕ್ಕೂ ಹೆಚ್ಚು ರೈತರು ಪಾಲ್ಗೊಳ್ಳಲಿದ್ದಾರೆ” ಎಂದು ಬಸವರಾಜ ಹಂಚಿನಾಳ ತಿಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *