ಸಿಂಧನೂರು: ಎರಡ್ಮೂರು ದಿನದಲ್ಲಿ ಜೋಳದ ಹಣ ರೈತರ ಖಾತೆಗೆ ಪಾವತಿಸದಿದ್ದರೆ ಹೋರಾಟ: ಮಾಜಿ ಸಚಿವ ವೆಂಕಟರಾವ್ ನಾಡಗೌಡ ಎಚ್ಚರಿಕೆ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ, ಹಸಮಕಲ್
ನಮ್ಮ ಸಿಂಧನೂರು, ಜೂನ್ 13, 2026

“ಹೈಬ್ರಿಡ್ ಜೋಳ ಮಾರಾಟ ಮಾಡಿ ಮೂರು ತಿಂಗಳು ಕಳೆದರೂ ಇಲ್ಲಿಯವರೆಗೂ ಸಮರ್ಪಕವಾಗಿ ರೈತರ ಖಾತೆಗಳಿಗೆ ಹಣ ಜಮಾ ಮಾಡಿಲ್ಲ. ಇನ್ನೂ ಎರಡ್ಮೂರು ದಿನಗಳಲ್ಲಿ ರೈತರಿಗೆ ಹಣ ಪಾವತಿಸದೇ ಹೋದರೆ ಜೆಡಿಎಸ್‌ನಿಂದ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಮಾಜಿ ಸಚಿವ ಹಾಗೂ ಕೆಒಎಫ್ ಅಧ್ಯಕ್ಷ ವೆಂಕಟರಾವ್ ನಾಡಗೌಡ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. “ಈ ಹಿಂದೆ ಜೋಳ ಖರೀದಿ ಪ್ರಕ್ರಿಯೆಯಲ್ಲೂ ಮರ‍್ನಾಲ್ಕು ತಿಂಗಳ ವಿಳಂಬ ಮಾಡಲಾಯಿತು. ಈಗ ಹಣ ಪಾವತಿಸದೇ ಸತಾಯಿಸಲಾಗುತ್ತಿದೆ. ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ಹಣವಿಲ್ಲದೇ ರೈತರು ಹೇಗೆ ಉಳುಮೆಕಾರ್ಯದಲ್ಲಿ ತೊಡಗಬೇಕು. ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ರೈತರನ್ನು ಸಂಪೂರ್ಣ ಕಡೆಗಣಿಸಿದ್ದಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
‘ಮಂತ್ರಿಗಿರಿ ಗದ್ಲದಲ್ಲಿ ಇಬ್ಬರು ಶಾಸಕರು ರೈತರನ್ನು ಮರೆತಿದ್ದಾರೆ
“ಸಿಂಧನೂರಿನಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್‌ನ ಇಬ್ಬರು ಶಾಸಕರಿದ್ದು, ಸಚಿವ ಸ್ಥಾನಕ್ಕಾಗಿ ಪೈಪೋಟಿಗಿಳಿದಿದ್ದಾರೆ. ಒಬ್ಬರು ಕಡೆಯವರು ಪಾದಯಾತ್ರೆ ಮಾಡಿದರೆ, ಇನ್ನೊಬ್ಬರ ಕಡೆಯವರು ಬೈಕ್ರ‍್ಯಾಲಿ ನಡೆಸುತ್ತಿದ್ದಾರೆ. ತಮ್ಮ ತಮ್ಮ ಹಿತಾಸಕ್ತಿಗಾಗಿ ನಾ ಮುಂದೆ ತಾ ಮುಂದೆ ಎಂದು ವರ್ತಿðಸುತ್ತಿದ್ದು, ರೈತರು ಹಾಗೂ ಕ್ಷೇತ್ರದ ಜನರನ್ನು ಮರೆತಿದ್ದಾರೆ. ಹೀಗಾದರೆ ರೈತರ ಕಷ್ಟವನ್ನು ಕೇಳುವವರು ಯಾರು ?” ಎಂದು ನಾಡಗೌಡ ಪ್ರಶ್ನಿಸಿದರು.
“ಇಬ್ರು ಮಂತ್ರಿಯಾದ್ರೆ ಡಬಲ್ ಸ್ವಾಗತ”
“ಕಳೆದ ಹಲವು ದಿನಗಳಿಂದ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರು ಮಂತ್ರಿ ಸ್ಥಾನಕ್ಕಾಗಿ ಬೆಂಗಳೂರು, ದೆಹಲಿ ಓಡಾಟ ನಡೆಸುತ್ತಿದ್ದಾರೆ. ಯಾರಿಗಾದರೂ ಮಂತ್ರಿ ಸ್ಥಾನ ಸಿಗಲಿ, ಒಂದು ವೇಳೆ ಇಬ್ರು ಮಂತ್ರಿಯಾದರೂ ಡಬಲ್ ಸ್ವಾಗತ. ಮಂತ್ರಿಗಿರಿ ಓಡಾಟದಲ್ಲಿ ಜನರ ಕೆಲಸಗಳನ್ನು ಮಾಡುವವರು ಯಾರು ?” ಎಂದು ನಾಡಗೌಡ ವ್ಯಂಗ್ಯವಾಡಿದರು.
“ಖುರ್ಚಿ, ಖಾತೆಗಾಗಿನ ಗಲಾಟೆ ಸರ್ಕಾರ ಇದು”
“ಈ ಸರ್ಕಾರ ಕಳೆದ ಐದಾರು ತಿಂಗಳಿAದ ಗಲಾಟೆಯಲ್ಲೆ ನಡೆದಿದೆ. ಇವ್ರು ಏನು ಮಾಡುತ್ತಿದ್ದಾರೆ ಎಂಬುದು ಅಧಿಕಾರಿಗಳಿಗೆ ಗೊತ್ತಿಲ್ಲ, ಮಂತ್ರಿಗಳಿಗೂ ತಿಳಿಯುತ್ತಿಲ್ಲ. ಬಹಳಷ್ಟು ಆಕಾಂಕ್ಷಿಗಳು ಖುರ್ಚಿ ಮತ್ತು ಖಾತೆಗೆ ತಗಾದೆ ತೆಗೆಯುತ್ತಿದ್ದಾರೆ. ನಾನು ಕೇಳಿದ ಖಾತೆ ಕೊಟ್ಟಿಲ್ಲ ಎಂದು ಸಚಿವರೊಬ್ಬರು 24 ಗಂಟೆಯಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಇನ್ನೊಬ್ಬ ಮಂತ್ರಿ ನನಗೆ ಪೂರ್ಣ ಖಾತೆ ಕೊಟ್ಟಿಲ್ಲ, ಪೂರ್ಣ ಖಾತೆ ಕೊಟ್ಟರೆ ಮಾತ್ರ ನಾನು ಆ ಸಚಿವ ಸ್ಥಾನ ಪಡೆಯುತ್ತೇನೆ ಇಲ್ಲದಿದ್ದರೆ ಇಲ್ಲ ಎನ್ನುತ್ತಾರೆ. ಇನ್ನೊಬ್ಬ ಮಂತ್ರಿ ನನಗೆ ಡಿಸಿಎಂ ಸ್ಥಾನದ ಜೊತೆಗೆ ಇಂತದ್ದೇ ಖಾತೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇಂತಹ ಗೊಂದಲದ ಸರ್ಕಾರವನ್ನು ನನ್ನ ರಾಜಕೀಯ ಜೀವಮಾನದಲ್ಲೇ ನೋಡಿಲ್ಲ” ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಹರಿಹಾಯ್ದರು.
“ಸಚಿವ ಸ್ಥಾನಕ್ಕಾಗಿ 50 ಮಂದಿ ಕ್ಯೂ”
“ಸಚಿವ ಸ್ಥಾನಕ್ಕಾಗಿ ಇನ್ನೂ 50 ಮಂದಿ ಕ್ಯೂನಲ್ಲಿದ್ದಾರೆ. ಸಚಿವ ಸ್ಥಾನ ದೊರೆತ ಕೆಲವರು ಯಾವ ದಿಕ್ಕಿಗೆ ಖುರ್ಚಿ ಇಡಬೇಕು, ಯಾವ ಕಡೆ ಬಾಗಿಲು ಇಡಬೇಕು ಎಂದು ಆಲೋಚಿಸುತ್ತಿದ್ದಾರೆ. ಕೆಲ ಸಚಿವರು ಐತಿಹಾಸಿಕ ಕಟ್ಟಡ ಕುಮಾರಕೃಪಾದಲ್ಲಿ ಯಾವ್ಯಾವ ಕಡೆ ಗೋಡೆ ಒಡೆದು, ಯಾವ ಕಡೆ ಬಾಗಿಲು ಇಡುತ್ತಾರೆನ್ನುವುದು ಯಕ್ಷಪ್ರಶ್ನೆಯಾಗಿದೆ. ಜನಸಾಮಾನ್ಯರು ಸಂಕಷ್ಟು ಅನುಭವಿಸುತ್ತಿದ್ದರೆ, ಈ ಸರ್ಕಾ ಖಾತೆ ಕಲಃಹದಲ್ಲೇ ಮುಳುಗಿದೆ” ಎಂದು ಕಿಡಿಕಾರಿದರು.
“ನನ್ನ ಆಡಳಿತದಲ್ಲಿ ರೈತರಿಗೆ ಈ ರೀತಿ ಸಮಸ್ಯೆ ಆಗಿಲ್ಲ”
“ನನ್ನ ಆಡಳಿತಾವಧಿಯಲ್ಲಿ ಜೋಳ ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ಹಿನ್ನೆಲೆಯಲ್ಲಿ ಕಟಾವು ಆದ 15 ದಿನದಲ್ಲೇ ಖರೀದಿ ಕೇಂದ್ರ ಆರಂಭಿಸಿ, ಆದಷ್ಟು ಶೀಘ್ರ ರೈತರ ಖಾತೆಗೆ ಹಣ ಪಾವತಿ ಮಾಡಲಾಗುತ್ತಿತ್ತು. ಆದರೆ ಖರೀದಿ ಕೇಂದ್ರಕ್ಕೆ ಜೋಳ ಕೊಟ್ಟು ಮರ‍್ನಾಲ್ಕು ತಿಂಗಳಾದರೂ ಹಣ ಬರದೇ ಇದ್ದರೆ ಬಡ ರೈತರು ಹೇಗೆ ಜೀವನ ನಡೆಸಬೇಕು, ಬಿತ್ತನೆ ಕಾರ್ಯಕ್ಕೆ ಮುಂದಾಗಬೇಕು” ಎಂದು ನಾಡಗೌಡ ಅವರು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಮೈಲಾರ, ದಾಸರಿ ಸತ್ಯನಾರಾಯಣ, ಅಲ್ಲಮಪ್ರಭು ಪೂಜಾರ್ ಸೇರಿದಂತೆ ಇನ್ನಿತರರಿದ್ದರು.


Spread the love

Leave a Reply

Your email address will not be published. Required fields are marked *