ಸಿಂಧನೂರು: ಅರಣ್ಯ ಇಲಾಖೆ ಅಧಿಕಾರಿಗಳಿಂದ ರೈತರ ಮೇಲೆ ದೌರ್ಜನ್ಯ ಅರೋಪ: ಕೆಆರ್‌ಎಸ್ ಖಂಡನೆ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 14, 2026

ತಾಲ್ಲೂಕಿನ ಹೊಗರನಾಳ ಸೀಮಾದಲ್ಲಿ ಸಾಗುವಳಿ ಮಾಡುವ ಭೂಹೀನ ಪರಿಶಿಷ್ಟ ಪಂಗಡ ಸಮುದಾಯದ ಬಡ ರೈತರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಇತ್ತೀಚಿಗೆ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿರುವ ಕರ್ನಾಟಕ ರೈತ ಸಂಘ (ಕೆಆರ್‌ಎಸ್) ಈ ಘಟನೆಯನ್ನು ಖಂಡಿಸಿದೆ.
ಈ ಕುರಿತು ಭಾನುವಾರ ಪತ್ರಿಕಾ ಹೇಳಿಕೆ ನೀಡಿರುವ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಪಾಟೀಲ್ ಭೇರಿಗಿ ಅವರು, “ಹೊರಗನಾಳನ ಸರ್ವೆ ನಂ.103ರಲ್ಲಿ ಕಳೆದ ಐದಾರು ದಶಕಗಳಿಂದ ಭೂಹೀನ ಬಡ ರೈತರು ಹೊಟ್ಟೆಪಾಡಿಗೆ ಸಾಗುವಳಿ ಮಾಡುತ್ತ ಬಂದಿರುತ್ತಾರೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ವಿನಾಃಕಾರಣ ಕೃಷಿ ಚಟುವಟಿಕೆಗೆ ಅಡ್ಡಿಪಡಿಸಿ, ಕೃಷಿಯಲ್ಲಿ ತೊಡಗಿರುವ ಮಹಿಳೆಯರೂ ಸೇರಿದಂತೆ ಸಾಗುವಳಿದಾರನ್ನು ನಿಂದಿಸಿ, ದಬ್ಬಾಳಿಕೆ ಮಾಡಿ ಬೆದರಿಕೆ ಹಾಕಿರುತ್ತಾರೆ. ಭೂಹೀನ ಬಡ ಕುಟುಂಬ ಕಳೆದ ಐದಾರು ದಶಕಗಳಿಂದ ಉಳುಮೆ ಮಾಡುತ್ತ ಜೀವನ ನಿರ್ವಹಣೆ ಮಾಡುತ್ತಿದೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶಿಷ್ಟ ಪಂಗಡದ ಶರಣಪ್ಪ ನಾಯಕ, ನಾಗಪ್ಪ ನಾಯಕ, ದುರುಗಪ್ಪ ನಾಯಕ, ಮಂಜಮ್ಮ, ರಾಮಪ್ಪ ನಾಯಕ, ಹನುಮಮ್ಮ ನಾಗಪ್ಪ ನಾಯಕ, ಸಣ್ಣ ಹನುಮಂತ ನಾಯಕ ಇವರ ಮೇಲೆ ದರ್ಪತೋರಿಸಿ ಕಾನೂನುಬಾಹಿರವಾಗಿ ವರ್ತಿಸಿರುತ್ತಾರೆ.
ಕೃಷಿ ಚಟುವಟಿಕೆಗೆ ಅಡ್ಡಿಪಡಿಸುವುದು ಕಾನೂನು ವಿರೋಧಿ ಕ್ರಮವಾಗಿದೆ. ಇತ್ತ ಉದ್ಯೋಗವಿಲ್ಲದೇ ಸಂಕಷ್ಟಕ್ಕೀಡಾಗಿರುವ ಕುಟುಂಬಕ್ಕೆ, ಅತ್ತ ಹೊಟ್ಟೆಪಾಡಿಗೆ ಕಾಳು-ಕಡಿ ಬೆಳೆಯಲು ಉಳುಮೆ ಮಾಡೋಣವೆಂದರೂ ಅಧಿಕಾರಿಗಳು ನಾನಾ ನೆಪವೊಡ್ಡಿ ಕಿರಿಕಿರಿ ಮಾಡುತ್ತಿರುವುದು ಸಂವಿಧಾನ ವಿರೋಧಿಯಾಗಿದೆ. ಕೂಡಲೇ ತಾಲ್ಲೂಕು ಆಡಳಿತ ಹಾಗೂ ಅರಣ್ಯ ಇಲಾಖೆ ಮೇಲಧಿಕಾರಿಗಳು ಮಧ್ಯಪ್ರವೇಶಿಸಿ ರೈತ ಕುಟುಂಬದ ಮೇಲಾಗುತ್ತಿರುವ ನಿರಂತರ ಕಿರುಕುಳವನ್ನು ತಪ್ಪಿಸಬೇಕು ಹಾಗೂ ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲ ಕಲ್ಪಿಸಬೇಕು. ಇಲ್ಲದೇ ಹೋದರೆ ಕರ್ನಾಟಕ ರೈತ ಸಂಘಟನೆಯ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ರಮೇಶ ಪಾಟೀಲ್ ಭೇರಿಗಿ ಎಚ್ಚರಿಸಿದ್ದಾರೆ


Spread the love

Leave a Reply

Your email address will not be published. Required fields are marked *