ಸಿಂಧನೂರು: ಕಣ್ಮರೆಯಾಗುತ್ತಿವೆ ಸಿಎ ಸೈಟುಗಳು, ದುರ್ಭೀನು ಹಾಕಿ ಹುಡುಕಿದರೂ ಕಾಣದ ಉದ್ಯಾನಗಳು !?

Spread the love

ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ, ಹಸಮಕಲ್
ನಮ್ಮ ಸಿಂಧನೂರು, ಮೇ 21, 2026

ಸಿಂಧನೂರಿನ ಉದ್ಯಾನವನಗಳ (ಪಾರ್ಕ್) ಹೆಸರೇಳಿ ಎಂದರೆ ಥಟ್ಟನೇ ನೆನಪಿಗೆ ಬರುವುದಿರಲಿ, ದುರ್ಭೀನು ಹಾಕಿ ಹುಡುಕಿದರೂ ಬೇಗ ಸಿಗುವುದಿಲ್ಲ. ಪುರಸಭೆಯಿಂದ ನಗರಸಭೆಯಾಗಿ, ನಗರ ಯೋಜನಾ ಪ್ರಾಧಿಕಾರವೂ ರಚನೆಯಾಗಿ ಕೊನೆಗೆ ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರವಾಗಿ ಮೇಲ್ದರ್ಜೆಗೇರಿದರೂ ಉದ್ಯಾನವನಗಳ ಅಭಿವೃದ್ಧಿಗೆ ಕಿಂಚಿತ್ತೂ ಕಾಳಜಿ ಇಲ್ಲ. ಈ ನಡುವೆ ಹೊಸ ಲೇಔಟ್‌ಗಳಲ್ಲಿರುವ ಸಿಐ ಸೈಟ್‌ಗಳು ಅತಿಕ್ರಮಣದಾರರ ಪಾಲಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಅರೋಪಗಳು ಕೇಳಿಬಂದಿವೆ.
ನಗರದ ಹಲವು ವಾರ್ಡ್‌ಗಳಲ್ಲಿ ನಾಗರಿಕ ಸೌಲಭ್ಯಕ್ಕಾಗಿ (ಸಿಎ) ನಿಗದಿಪಡಿಸಿದ ‘ನಗರಸಭೆ ಸ್ವತ್ತುಗಳು’ ಮುಳ್ಳುಬೇಲಿಯಲ್ಲಿ, ಚರಂಡಿ ನೀರಿನ ಹೊಂಡವಾಗಿ, ಇನ್ನೂ ಕೆಲವುಕಡೆ ಗುರುತೇ ಇಲ್ಲದಂತೆ ದಿನದಿಂದ ದಿನಕ್ಕೆ ‘ಕಣ್ಮರೆ’ಯಾಗುತ್ತಿವೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸಾರ್ವಜನಿಕ ಸ್ವತ್ತುಗಳು ದಿನಗಳೆದಂತೆ ಅತಿಕ್ರಮಣವಾದರೂ ಅಚ್ಚರಿಯೇನಿಲ್ಲ ! ಎಂದು ನಾಗರಿಕರು ದೂರುತ್ತಾರೆ.
ನಗರ ವೇಗವಾಗಿ ಬೆಳೆಯುತ್ತಿದೆ. ವಾರ್ಡ್‌ಗಳ ವ್ಯಾಪ್ತಿಯೂ ಹಿಗ್ಗುತ್ತಿದೆ. ಹೀಗಾಗಿ ದಿನ ಬೆಳಗಾಗುವುದರೊಳಗಾಗಿ ಹೊಸ ಹೊಸ ಲೇಔಟ್‌ಗಳು ಜನ್ಮತಾಳುತ್ತಿವೆ. ಹೊಸ ಲೇಔಟ್‌ಗಳಲ್ಲಿ ಸಾರ್ವಜನಿಕ ಸೌಲಭ್ಯಕ್ಕಾಗಿ ತೆಗೆದಿರಿಸಿದ ನಿವೇಶನಗಳು ಕಾಳಜಿಯ ಕೊರತೆಯಿಂದ ಅನ್ಯರಪಾಲಾಗುವ ಅನುಮಾನ ವ್ಯಕ್ತವಾಗಿದೆ. ವಿವಿಧ ವಾರ್ಡ್‌ಗಳಲ್ಲಿನ ಹೊಸ ಲೇಔಟ್‌ಗಳಲ್ಲಿ ನಾಗರಿಕರ ಸೌಲಭ್ಯಕ್ಕೆ ನಿಗದಿಪಡಿಸಿದ ಜಾಗೆಗಳಲ್ಲಿ ನಗರಸಭೆಯವವರು ತ್ರಿಭುಜಾಕಾರದ ಸಿಮೆಂಟ್ ಕಂಬ ಅಳವಡಿಸಿ ಫಲಕ ಹಾಕಿ ಕೈಬಿಟ್ಟಿದ್ದು, ತದನಂತರ ಅತ್ತಕಡೆ ಗಮನಹರಿಸಿಲ್ಲ ಎನ್ನುತ್ತಾರ ಸಾರ್ವಜನಿಕರು.

Namma Sindhanuru Click For Breaking & Local News
ಸಿಂಧನೂರಿನ ಗಂಗಾನಗರದಲ್ಲಿರುವ ನಾಗರಿಕ ಸೌಲಭ್ಯದ ಜಾಗದ ಸ್ಥಿತಿ.

54 ಜಾಗ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರ
ವಿವಿಧ ಲೇಔಟ್ ಮಾಲೀಕರು (ವಿನ್ಯಾಸದ ಮಾಲೀಕರು) 2017ರಿಂದ 2024ರವರೆಗೆ ನಗರ ವ್ಯಾಪ್ತಿಯಲ್ಲಿ 47 ಹಾಗೂ ಸಿಂಧನೂರು ತಾಲೂಕು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಲವು ಗ್ರಾಮಗಳ 7 ನಾಗರಿಕ ಸೌಲಭ್ಯದ ನಿವೇಶನಗಳನ್ನು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಇಲ್ಲಿಯವರೆಗೆ ಹಸ್ತಾಂತರಿಸಲಾಗಿದೆ ಎಂಬ ಮಾಹಿತಿ ಇದೆ. 2024ರಿಂದ ಇಲ್ಲಿಯವರೆಗೂ ಬಹಳಷ್ಟು ಲೇಔಟ್‌ಗಳು ವಿವಿಧ ಕಡೆ ಆಗಿದ್ದು, ಆ ಲೇಔಟ್‌ಗಳ ಸಿಐ ಸೈಟ್‌ಗಳನ್ನು ಲೆಕ್ಕಹಾಕಿದರೆ ಒಟ್ಟು ಸಂಖ್ಯೆ ಹೆಚ್ಚಲಿದೆ. ಈ ನಾಗರಿಕ ಸೌಲಭ್ಯದ ಜಾಗಗಳನ್ನು ಪರಿಗಣಿಸಿದರೆ ಸಿಂಧನೂರು ನಗರ ವ್ಯಾಪ್ತಿಯಲ್ಲಿ ಕನಿಷ್ಠ 50ಕ್ಕೂ ಹೆಚ್ಚು ಉದ್ಯಾನವನಗಳು ಇರಬೇಕಿತ್ತು. ಆದರೆ ವಾಸ್ತವದಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ.

Namma Sindhanuru Click For Breaking & Local News
ಸಿಂಧನೂರಿನ ರಾಮಕಿಶೋರ ಕಾಲೋನಿಯಲ್ಲಿ ಉದ್ಯಾನಕ್ಕೆ ತೆಗೆದಿರಿಸಿದ ಜಾಗದಲ್ಲಿ ಮುಳ್ಳಬೇಲಿಗಳು..

ಮುಳ್ಳುಕಂಟಿ ಪಾಲಾದ ಸಾರ್ವಜನಿಕ ಆಸ್ತಿಗಳು
ನಗರದ ವಾರ್ಡ್ ನಂ.14ರ ಗಂಗಾನಗರದ (ವಿದ್ಯಾನಗರ) ವ್ಯಾಪ್ತಿಯಲ್ಲಿರುವ ಚಾಲೇಂಜಿಂಗ್ ಕೋಚಿಂಗ್ ಸೆಂಟರ್, ವಿಕಾಸ ಭಾರತಿ ಶಾಲೆ ಸೇರಿದಂತೆ ಇನ್ನೂ ನಾಲ್ಕಾರು ಕಡೆ ನಗರಸಭೆಯ ‘ನಾಗರಿಕ ಸೌಲಭ್ಯದ ಜಾಗೆ’ಗಳು ಮುಳ್ಳುಕಂಟಿಗಳ ಪಾಲಾಗಿವೆ. ಹಲವು ಕೆಲವು ಕಡೆ ಚರಂಡಿ ನೀರು ಮಡುಗಟ್ಟಿ ಹೊಂಡ ನಿರ್ಮಾಣವಾಗಿದೆ. ಕೆಲ ಆಸ್ತಿಗಳ ವ್ಯಾಪ್ತಿಯಲ್ಲಿ ಸಿಮೆಂಟ್ ಕಂಬ, ಫಲಕ, ತಂತಿಬೇಲಿ ಹಾಕಿದ್ದು ಬಿಟ್ಟರೆ ಇನ್ನೂ ಬಹಳಷ್ಟು ಕಡೆ ಹಾಗೆಯೇ ಬಿಡಲಾಗಿದೆ. ಕಳೆದ ಎರಡ್ಮೂರು ವರ್ಷಗಳ ಹಿಂದೆ ಅಳವಡಿಸಿದ್ದ ಸಿಮೆಂಟ್ ಕಂಬಗಳು ಮುರಿದು ಹೋಗಿದ್ದು, ತಂತಿಬೇಲಿ ಕಿತ್ತಿಹೋಗಿದೆ.

Namma Sindhanuru Click For Breaking & Local News
ಸಿಂಧನೂರಿನ ವಿದ್ಯಾನಗರದಲ್ಲಿ ಉದ್ಯಾನಕ್ಕೆ ತೆಗೆದಿರಿಸಿದ ಜಾಗ…

ಸರಣಿ ಲೇಔಟ್‌ಗಳು, ಮೂಲ ಸೌಕರ್ಯ ಅಧ್ವಾನ !
ನಗರದ ಒಳಬಳ್ಳಾರಿ ರಸ್ತೆ, ಮಸ್ಕಿ ರಸ್ತೆ, ರಾಯಚೂರು ರಸ್ತೆ, ಗಂಗಾವತಿ ರಸ್ತೆ, ವಿರುಪಾಪುರ ರಸ್ತೆ, ರೈಲ್ವೆ ಸ್ಟೇಶನ್ ಮಾರ್ಗ ಸೇರಿದಂತೆ ನಗರದ ಹಲವು ವಾರ್ಡ್ ವ್ಯಾಪ್ತಿಯಲ್ಲಿ 2021ರಿಂದ ಹೊಸ ಹೊಸ ಲೇಔಟ್‌ಗಳು ತಲೆ ಎತ್ತಿವೆ. ಇನ್ನೂ ಹಲವು ಕಡೆ ಲೇಔಟ್‌ಗಳು ಜನ್ಮ ತಳೆಯುವ ಲಕ್ಷಣ ಕಾಣುತ್ತಿವೆ. ಕಾಂಕ್ರೀಟ್ ಕಾಡು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದರೂ, ಅದಕ್ಕೆ ತಕ್ಕಂತೆ ಮೂಲ ಸೌಕರ್ಯಗಳನ್ನು, ನಾಗರಿಕ ಸೌಲಭ್ಯಗಳನ್ನು ವೃದ್ಧಿಸದಿರುವುದು ಮುಂಬರುವ ದಿನಗಳಲ್ಲಿ ಕಷ್ಟಕರ ಪರಿಸ್ಥಿತಿಯನ್ನು ತಂದೊಡ್ಡಲಿದೆ ಎನ್ನುತ್ತಾರೆ ಪರಿಸರ ತಜ್ಞರು.
‘ಉದ್ಯಾನಗಳು ಆಕ್ಸಿಜನ್ ಬ್ಯಾಂಕ್ ಇದ್ದಂತೆ’
“ಈ ಬಾರಿಯ ಬೇಸಿಗೆ ನಗರದ ಜನರನ್ನು ಜೀವ ಹಿಂಡಿದೆ. ಫ್ಯಾನಿಲ್ಲದೇ ನಿದ್ದೆ ಅಸಾಧ್ಯ ಎನ್ನುವಂತಾಗಿದೆ. ರಾತ್ರಿ ವಿದ್ಯುತ್ ಕೈಕೊಟ್ಟಾಗ ಜಾಗರಣೆ ಮಾಡುವ ದುಸ್ಥಿತಿ ಎದುರಾಗಿದೆ. ಇನ್ನೂ ಕೆಲವು ಬಡಾವಣೆಗಳು ಅತ್ಯಂತ ಇಕ್ಕಟ್ಟಾಗಿದ್ದು, ಚಿಕ್ಕಮಕ್ಕಳು, ವೃದ್ಧರು ಉಸಿರಾಡಲೂ ಪರಿತಪಿಸುತ್ತಿದ್ದಾರೆ. ಸಿಟಿಯಲ್ಲಿ ಹಿಂದಿನಂತೆ ಗಿಡ-ಮರಗಳಿಲ್ಲ, ಗಾಳಿ ಪರಿಸರವಿಲ್ಲ. ಎತ್ತ ಹೋದರೂ ಕಾಂಕ್ರೀಟು ಕಾಡು, ಚರಂಡಿಯ ದುರ್ನಾತ, ರಾತ್ರಿ ಇರಲಿ, ಹಗಲೊತ್ತು ತಣ್ಣಗೆ ಕುಳಿತುಕೊಳ್ಳೋಣವೆಂದರೂ ಒಂದು ಚೆಂದನೆಯ ಉದ್ಯಾನವಿಲ್ಲ, ಶುದ್ಧ ಗಾಳಿ ಬೇಕೆಂದರೆ, ಕುಷ್ಟಗಿ ರೋಡಿನ ಪದವಿ ಕಾಲೇಜು ಕಡೆ ಹೋಗಬೇಕು, ಇಲ್ಲವೇ ಜೂನಿಯರ್ ಕಾಲೇಜು ಮೈದಾನಕ್ಕಿಳಿಯಬೇಕು. ಉದ್ಯಾನ ವನಗಳನ್ನು ಅಭಿವೃದ್ಧಿಪಡಿಸದೇ ಹೋದರೆ ಮುಂದಿನ ನಗರ ನಿವಾಸಿಗಳ ಪಾಡು ಹೇಳತೀರದು” ಎಂದು ಹಿರಿಯ ನಾಗಕರಿರೊಬ್ಬರು ಕಳವಳ ವ್ಯಕ್ತಪಡಿಸುತ್ತಾರೆ.

Namma Sindhanuru Click For Breaking & Local News
ಸಿಂಧನೂರಿನ ಗಂಗಾನಗರದಲ್ಲಿ ಉದ್ಯಾನಕ್ಕೆ ತೆಗೆದಿರಿಸಿದ ಜಾಗ…(ಸಂಗ್ರಹ ಚಿತ್ರ)

ಕಾಗದದಲ್ಲಿ ಕಂಗೊಳಿಸುತ್ತಿರುವ ಉದ್ಯಾನಗಳು ?
ನಗರದಲ್ಲಿ 31 ವಾರ್ಡ್‌ಗಳಿದ್ದು ಈ ಹಿಂದೆ ಸಾರ್ವಜನಿಕ ಉಪಯೋಗಕ್ಕಾಗಿ ಅಲ್ಲಲ್ಲಿ ಗುರುತಿಸಿದ್ದ ಉದ್ಯಾನಗಳು ಹಾಗೂ ಸಾರ್ವಜನಿಕ ಜಾಗೆಗಳು ಮೂಲ ಸ್ವರೂಪವನ್ನೇ ಕಳೆದುಕೊಂಡಿವೆ. ಕೆಲವು ಉದ್ಯಾನಗಳ ಕಾಗದದಲ್ಲಿ ಮಾತ್ರ ಕಂಗೊಳಿಸುತ್ತಿದ್ದು, ಬಹಳಷ್ಟು ಕಡೆ ಅನ್ಯರಪಾಲಾಗಿವೆ ಎಂಬ ಆರೋಪಗಳಿದ್ದು, ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಆ ಬಗ್ಗೆ ಚಕಾರವೆತ್ತದೇ ಸುಮ್ಮನಿದ್ದಾರೆ ಎಂದು ಹೇಳಲಾಗುತ್ತಿದೆ. ಹೊಸ ಲೇಔಟ್ ಸೇರಿದಂತೆ ಹಲವು ಕಡೆ ನಗರಸಭೆ ತೆಗೆದಿರಿಸಿದ ಸಾರ್ವಜನಿಕ ಸ್ವತ್ತುಗಳನ್ನು ರಕ್ಷಣೆ ಮಾಡದೇ ಹೋದರೆ ಇವುಗಳು ಕೂಡ ‘ಅನ್ಯರಪಾಲಾಗುವುದು’ ಗ್ಯಾರಂಟಿ ಎನ್ನುತ್ತಾರೆ ಸಂಘಟನೆಯೊಂದರ ಮುಖಂಡರು.

Namma Sindhanuru Click For Breaking & Local News
ಸಿಂಧನೂರಿನ ಗಂಗಾನಗರದಲ್ಲಿ ಉದ್ಯಾನಕ್ಕೆ ತೆಗೆದಿರಿಸಿದ ಜಾಗ…(ಸಂಗ್ರಹ ಚಿತ್ರ)

ʼನಗರಸಭೆ, ಪಾಧಿಕಾರಿಗಕ್ಕೂ ಕಾಳಜಿಯಿಲ್ಲʼ
“ನಗರದ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಗರಿಷ್ಠ ಮಾತಿರಲಿ, ಕನಿಷ್ಠ ಉದ್ಯಾನವನಗಳ ಫೋಷಣೆಯಾದರೂ ಮಾಡುತ್ತಿಲ್ಲ. ನಾಗರಿಕ ಸೌಲಭ್ಯದ ಜಾಗಗಳು ಖಾಲಿ ಬಿದ್ದು ಕಸದ ಕೊಂಪೆಗಳಾಗಿ, ಅತಿಕ್ರಮಣದಾರರ ಪಾಲಾಗಿ, ಅತ್ತ ಚರಂಡಿ ಮಡುವಾದರೂ ತಮಗೂ ಈ ಜಾಗೆಗಳಿಗೂ ಸಂಬಂಧವಿಲ್ಲ ಎನ್ನುವಂತೆ ನಗರಸಭೆಯವರು ಹಾಗೂ ಪ್ರಾಧಿಕಾರ ವರ್ತಿಸುತ್ತಿರುವುದು ಬೇಜವಾಬ್ದಾರಿಯ ಪರಮಾವಧಿ ಎನ್ನುತ್ತಾರೆ” ನಗರದ ನಾಗರಿಕರೊಬ್ಬರು.


Spread the love

Leave a Reply

Your email address will not be published. Required fields are marked *