ಸಿಂಧನೂರು: ನಗರದಲ್ಲಿ ಹೆಚ್ಚುತ್ತಿರುವ ಅವಘಡ, ಸಾರ್ವಜನಿಕರ ಸಾವಿಗೆ ಹೊಣೆ ಯಾರು ? ಸುರಕ್ಷತಾ ನಿಯಮಗಳ ಪಾಲಕರು ಯಾರು ?

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮೇ 15, 2026

ನಗರ ವ್ಯಾಪ್ತಿಯಲ್ಲಿ ಇತ್ತೀಚಿಗೆ ಅಪಘಾತದಿಂದಾಗಿ ಸಾವು ನೋವಿನ ಘಟನೆಗಳು ಮರುಕಳುಹಿಸುತ್ತಿದ್ದು, ಅದರಲ್ಲೂ ಮಹಿಳೆಯರೇ ಇದಕ್ಕೆ ಬಲಿಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರ ಸಾವಿಗೆ ಹೊಣೆ ಯಾರು ? ಸುರಕ್ಷತಾ ನಿಯಮಗಳ ಪಾಲಕರು ಯಾರು ? ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳೆದ್ದಿವೆ.
ಯಾವುದೇ ಅವಘಡ ಸಂಭವಿಸಿದ ತಕ್ಷಣ ಇಲ್ಲವೇ ತದನಂತರದ ಒಂದೆರಡು ದಿನಗಳವರೆಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕಾಳಜಿ ವಹಿಸಿದಂತೆ, ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದಂತೆ ಮಾಡಿ ಕೈಚೆಲ್ಲುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಮಹಿಳೆಯರು, ವಿದ್ಯಾರ್ಥಿನಿಯರು ಅಪಘಾತಗಳಿಗೆ ಬಲಿಯಾಗುತ್ತಿರುವುದು, ಮಹಿಳಾ ಸಮುದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವುದಲ್ಲದೇ ಅವರು ಶಾಸನಬದ್ಧ ಹಕ್ಕುಗಳನ್ನು ಅಡೆ-ತಡೆಯನ್ನುಂಟು ಮಾಡುತ್ತದೆ ಎನ್ನುವ ಅಭಿಪ್ರಾಯ ಕೇಳಿಬಂದಿವೆ.

Namma Sindhanuru Click For Breaking & Local News
ಸಿಂಧನೂರಿನ ಬಸ್‌ ನಿಲ್ದಾಣದಲ್ಲಿ ಕೆಲ ದಿನಗಳ ಹಿಂದೆ ಅಪಘಾತ ಸಂಭವಿಸಿದ ವೇಳೆ ಜಮಾಯಿಸಿದ್ದ ಜನಸ್ತೋಮ. (ಸಂಗ್ರಹ ಚಿತ್ರ)

ಬಸ್ ನಿಲ್ದಾಣದಲ್ಲಿ ಮಹಿಳೆ ಧಾರುಣ ಸಾವಿನ ಘಟನೆ
ಮಾರ್ಚ್ 16, 2026ರಂದು ನಗರದ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಮಧ್ಯಾಹ್ನ 12.50ರ ಸುಮಾರು ಸಾರಿಗೆ ಸಂಸ್ಥೆಯ ಬಸ್ ಹಾಯ್ದು ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣ ಸಮೀಪದ ಬೇವಿನಾಳ ಗ್ರಾಮದ ದೊಡ್ಡ ಈರಮ್ಮ ಬಸಣ್ಣ(38) ಮೃತಪಟ್ಟಿದ್ದರು. ರಾಯಚೂರಿನಿಂದ ಬಳ್ಳಾರಿಗೆ ತೆರಳುತ್ತಿದ್ದ ಕೆಕೆಆರ್‌ಟಿಸಿಯ ರಾಯಚೂರಿನ 3ನೇ ಬಸ್ ಡಿಪೋದ ಕೆಎ-36 ಎಫ್-1415 ನಂಬರಿನ ಬಸ್ ಸಿಂಧನೂರಿನ ಬಸ್ ನಿಲ್ದಾಣದ ಮುಖ್ಯದ್ವಾರ ಪ್ರವೇಶಿಸುತ್ತಿದ್ದಾಗ ದೊಡ್ಡ ಈರಮ್ಮ ಅವರ ಮೇಲೆ ಹರಿದಿತ್ತು. ಅಪಘಾತದ ರಭಸಕ್ಕೆ ಮಹಿಳೆಯ ತಲೆ ಬುರುಡೆ ಒಡೆದು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Namma Sindhanuru Click For Breaking & Local News

ಕಾಲೇಜು ವಿದ್ಯಾರ್ಥಿನಿಯರ ಮೇಲೆ ಹರಿದ ಥಾರ್ ಕಾರು
ಮೇ 8, 2026 ನಗರದ ಎ.ವಿ.ಎಸ್ ಬ್ರಿಲಿಯಂಟ್ ಪಿಯು ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಹಾಗೂ ಚೇತನ ಆಸ್ಪತ್ರೆ ಬಳಿ ಮಧ್ಯಾಹ್ನ 4.30ರ ಸುಮಾರು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಭೂಮಿಕಾ, ಭೂಮಿಕಾ, ಮಹೇಶ್ವರಿ, ಜೈಬಾ ಹಾಗೂ ಮೇಘನಾ ಅವರ ಮೇಲೆ ಕೆಎ-02/ಎಂಡಬ್ಲ್ಯು-0333 ನಂಬರಿನ ಕಾರು ಏಕಾಏಕಿ ಹಿಂಬದಿಯಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ಭೂಮಿಕಾ ತಂದೆ ವೀರರಾಜು ಸ್ಥಳದಲ್ಲೇ ಮೃತಪಟ್ಟಿದ್ದರು. ವಿದ್ಯಾರ್ಥಿನಿಯರಾದ ಜೈಬಾ, ಮೇಘನಾ ಹಾಗೂ ಮಹೇಶ್ವರಿ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಈ ಕುರಿತು ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಅತಿಕ್ರಮಣ ತೆರವುಗೊಳಿಸಿದರೂ ನಿಲ್ಲದ ಅವಘಡಗಳು ?
ಕಳೆದ ಡಿಸೆಂಬರ್ 24, 2024ರಂದು ಪ್ರಮುಖ ರಸ್ತೆಗಳಲ್ಲಿದ್ದ ಬೀದಿ ಬದಿ ವ್ಯಾಪಾರಸ್ಥರ ಸಣ್ಣಪುಟ್ಟ ಅಂಗಡಿಗಳನ್ನು ಕಾರ್ಯಾಚರಣೆ ಮೂಲಕ ತೆರವು ಪ್ರಕ್ರಿಯೆ ಕೈಗೊಳ್ಳಲಾಯಿತು. ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಹಾಗೂ ಹೈಕೋರ್ಟ್ ಆದೇಶದಂತೆ ನಗರದ ರಾಯಚೂರು, ಕುಷ್ಟಗಿ ಹಾಗೂ ಗಂಗಾವತಿ ಮಾರ್ಗದ ರಸ್ತೆ ಸೇರಿದಂತೆ ಇನ್ನಿತರೆ ಸರ್ಕಾರಿ ಜಾಗೆಗಳಲ್ಲಿ ರಸ್ತೆ ಅತಿಕ್ರಮಣವನ್ನು ತೆರವುಗೊಳಿಸಲಾಯಿತು. ತೆರವು ಕಾರ್ಯಾಚರಣೆಗಿಂತ ಮುಂಚೆ ರಸ್ತೆಯನ್ನು ಅತಿಕ್ರಮಣ ಮಾಡಿದ್ದರಿಂದ ಅಪಘಾತಗಳಾಗುತ್ತಿವೆ. ತೆರವು ಕಾರ್ಯಾಚರಣೆಯ ನಂತರ ಸಂಚಾರ ಸುಗಮವಾಗಲಿದ್ದು, ಸಾರ್ವಜನಿಕರು ಹಾಗೂ ಪಾದಾಚಾರಿಗಳ ಭಯ ನಿವಾರಣೆಯಾಗಿ ಸುರಕ್ಷತೆ ಮತ್ತು ಭದ್ರತೆ ಹೆಚ್ಚಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ತೆರವು ಕಾರ್ಯಾಚರಣೆಯ ನಂತರ ಮೇಲಿಂದ ಮೇಲೆ ಅವಘಡಗಳು ಘಟಿಸುತ್ತಿದ್ದು, ಇದಕ್ಕೆ ಹೊಣೆ ಯಾರು ? ಇಲಾಖೆಗಳು ಎಲ್ಲಿ ವಿಫಲವಾಗುತ್ತಿವೆ ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಬಲಾಢ್ಯರಿಗೊಂದು, ಬಡಪಾಯಿಗಳಿಗೊಂದು ನಿಯಮ ?
“ದಿನವೂ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿರುವುದಕ್ಕೆ ಮೂಲ ಕಾರಣ ಆಯಾ ಇಲಾಖೆಗಳು ಬಲಾಢ್ಯರಿಗೊಂದು ಮತ್ತು ಬಡಪಾಯಿಗಳೊಂದು ನಿಯಮ ಅನುಸರಿಸುತ್ತಿವೆ. ಈ ರೀತಿ ತಾರತಮ್ಯ ಮಾಡುತ್ತಿರುವುದರಿಂದ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿರುವುದಲ್ಲದೇ ಪಾದಾಚಾರಿಗಳು ಸುರಕ್ಷತೆ ಕ್ಷೀಣಿಸಿದೆ” ಎಂದು ಸಾರ್ವಜನಿಕರೊಬ್ಬರು ದೂರುತ್ತಾರೆ. “ಪಾರ್ಕಿಂಗ್ ವ್ಯವಸ್ಥೆ ಇಲ್ಲದ ದೊಡ್ಡ ದೊಡ್ಡ ಅಂಗಡಿ ಮುಂಗಟ್ಟುಗಳು, ಹೊಟೆಲ್‌ಗಳು, ವಾಣಿಜ್ಯ ಸಂಕೀರ್ಣಗಳು ಫುಟ್‌ಪಾತ್ ಆಪೋಶನ ಪಡೆದಿದ್ದು, ಪಾದಚಾರಿಗಳು ರಸ್ತೆಯಲ್ಲಿ ನಡೆದಾಡುವಂತಾಗಿದೆ. ತೆರವು ಕಾರ್ಯಾಚರಣೆಯ ನಂತರ ಫುಟ್‌ಪಾತ್‌ಗಳು ವಾಹನ ಪಾರ್ಕಿಂಗ್ ತಾಣಗಳಾಗಿದ್ದು, ಸೋಮವಾರ ಮತ್ತು ಮಂಗಳವಾರ ಕೆಲ ಪ್ರದೇಶಗಳಲ್ಲಿ ಕೊಸರಾಡಿಕೊಂಡು ರಸ್ತೆ ದಾಟುವ ಇಲ್ಲವೇ ಸಂಚರಿಸುವ ಅವ್ಯವಸ್ಥೆ ಉಂಟಾಗುತ್ತದೆ ಎಂದು ಪಾದಾಚಾರಿಯೊಬ್ಬರು ಆಪಾದಿಸುತ್ತಾರೆ.


Spread the love

Leave a Reply

Your email address will not be published. Required fields are marked *