ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ, ಹಸಮಕಲ್
ನಮ್ಮ ಸಿಂಧನೂರು, ಮೇ 7, 2026
ಖಾಸಗಿ ಕಾಲೇಜುಗಳ ಪ್ರಚಾರದ ಭರಾಟೆ ನಡುವೆ ಇಲ್ಲೊಂದು ಸರ್ಕಾರಿ ಕಾಲೇಜು ಸದ್ದಿಲ್ಲದೇ ಸಾಧನೆ ಮಾಡಿದೆ. ಶಿಸ್ತುಬದ್ಧ ಪಠ್ಯ ಚಟುವಟಿಕೆಗಳು, ಉತ್ಸಾಹಿ ಉಪನ್ಯಾಸಕ ಬಳಗ, ವಿದ್ಯಾರ್ಥಿಗಳ ನಿರಂತರ ಪ್ರಯತ್ನದಿಂದ 2025-26ನೇ ಸಾಲಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಶೇ.90ರಷ್ಟು ಫಲಿತಾಂಶ ಪಡೆಯುವ ಮೂಲಕ ಅಭೂತಪೂರ್ವ ಯಶಸ್ಸು ಗಳಿಸಿದ್ದಾರೆ.
ಸರ್ಕಾರಿ ಕಾಲೇಜಿನ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಹೊಗಳಿಕೆಗಿಂತ ತೆಗಳಿಕೆಗಳೇ ಜಾಸ್ತಿ. ಆದರೆ ಸಿಂಧನೂರು ನಗರದ ಪಿಡಬ್ಲ್ಯುಡಿ ಕ್ಯಾಂಪಿನ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಅದನ್ನು ಅಲ್ಲಗಳೆದಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಶ್ರೇಯೋಭಿವೃದ್ಧಿಗೆ ಅವಿರತ ಶ್ರಮಿಸುವ ಮೂಲಕ, ಖಾಸಗಿ ಕಾಲೇಜುಗಳಿಗೆ ಪೈಪೋಟಿ ನೀಡಿದೆ. ಪ್ರಸಕ್ತ ಸಾಲಿನ ಪಿಯು ವಿಜ್ಞಾನ ವಿಭಾಗದ ಫಲಿತಾಂಶ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮುನ್ನುಡಿ ಬರೆದಿದ್ದು, ಪಾಲಕ ಸಮುದಾಯದ ಆತಂಕವನ್ನು ದೂರ ಮಾಡಿದೆ. ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆದ 134 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಪಾಸಾಗಿದ್ದು, ಉಳಿದಂತೆ ಹಲವು ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ ಹಾಗೂ ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಕಾಲೇಜಿನ ವಿಜ್ಞಾನ ವಿಭಾಗದ ಒಟ್ಟು ಫಲಿತಾಂಶ ಶೇ.90ರಷ್ಟಾಗಿದೆ.

ಹಳ್ಳಿ ವಿದ್ಯಾರ್ಥಿಗಳ ಆಶಾಕಿರಣ
ಖಾಸಗಿ ಕಾಲೇಜುಗಳು ವಿಧಿಸುವ ಸಾವಿರಾರು ರೂಪಾಯಿ ಶುಲ್ಕ ಪಾವತಿಸಿ ಪ್ರವೇಶ ಪಡೆಯಲು ಗ್ರಾಮೀಣ ಪ್ರದೇಶದ ಅದರಲ್ಲೂ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಅಸಾಧ್ಯದ ಮಾತಾಗಿದೆ. ಅಂತಹ ಬಡ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗರದ ಬಾಲಕರ ಸರಕಾರಿ ಪದವಿಪೂರ್ವ ವಿಜ್ಞಾನ ವಿಭಾಗ ವರದಾನವಾಗಿ ಪರಿಣಮಿಸಿದೆ. ಆರ್ಥಿಕವಾಗಿ ದುರ್ಬಲರು, ಶೋಷಿತ ಸಮುದಾಯಗಳ ಹಿನ್ನೆಲೆಯಿಂದ ಬಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇಲ್ಲಿ ಅತ್ಯಂತ ಕಡಿಮೆ ಶುಲ್ಕದಲ್ಲಿ ಪ್ರವೇಶಾವಕಾಶ ಪಡೆದುಕೊಳ್ಳುವ ಮೂಲಕ ಖಾಸಗಿ ಕಾಲೇಜಿನವರು ಹುಬ್ಬೇರಿಸುವಂತೆ ಸಾಧನೆ ಮಾಡಿದ್ದಾರೆ.
“ನಮ್ದು ಸುಲ್ತಾನಪುರ ರೀ. ಈ ಕಾಲೇಜ್ನಾಗ ಒಳ್ಳೆ ಎಜುಕೇಶನ್ ಕೊಡ್ತಾರೆ. ಜಾಸ್ತಿ ಫೀಸ್ ಕಟ್ಟಿ ಪ್ರೈವೇಟ್ ಕಾಲೇಜ್ನಾಗ ಓದಾಕ ನಮ್ಮತ್ರ ಶಕ್ತಿ ಇಲ್ರಿ. ವಿದ್ಯಾರ್ಥಿನಿಯರಿಗೆ ವಾರ್ಷಿಕ ಕೇವಲ ಒಂದು ಸಾವಿರ ರೂಪಾಯಿ ಶುಲ್ಕ ಇರೋದ್ರಿಂದ ನಮ್ಗ ಯಾವುದೇ ರೀತಿ ಹೊರೆಯಾಗಿಲ್ಲ. ಹಿಂಗಾಗಿ ಭಾಳ ಜನ ಇಲ್ಲಿ ಅಡ್ಮಿಷನ್ ಮಾಡಿಸ್ತಿದ್ದಾರೆ. ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ವಿಶೇಷವಾಗಿ ಆದ್ಯತೆ ನೀಡಿದ್ದು, ಮಾರ್ಚ್ 23ರಿಂದ ದಿನವೂ ಸ್ಪೆಷಲ್ ಕ್ಲಾಸ್ ನಡೀತಿವೆ. ವಿದ್ಯಾರ್ಥಿಗಳ ಅಭ್ಯಾಸಕ್ಕೆ ಇಲ್ಲಿನ ಉಪನ್ಯಾಸಕರು ವಿಶೇಷ ಕಾಳಜಿ ವಹಿಸಿದ್ದು, ಪ್ರೋತ್ಸಾಹ ನೀಡುತ್ತಿದ್ದಾರೆ” ಎಂದು ದ್ವಿತೀಯ ಪಿಯು ವಿದ್ಯಾರ್ಥಿನಿಯೊಬ್ಬರು ಹೇಳುತ್ತಾರೆ.

ಸುಸಜ್ಜಿತ ಕೊಠಡಿ, ಸೈನ್ಸ್ ಪ್ರಯೋಗಾಲಯ
ತರಗತಿ ಕೊಠಡಿಗಳು ಸುಸಜ್ಜಿತವಾಗಿದ್ದು, ವಿಜ್ಞಾನ ವಿಭಾಗದ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಕಂಪ್ಯೂಟರ್ ಸೈನ್ಸ್ ಪ್ರಯೋಗಾಲಯಗಳನ್ನು ಚೊಕ್ಕವಾಗಿ ವ್ಯವಸ್ಥೆಗೊಳಿಸಲಾಗಿದೆ. ವಿದ್ಯಾರ್ಥಿಗಳು ಪ್ರಯೋಗಾಲಯದಲ್ಲಿ ಪ್ರಾಯೋಗಿಕ ಪರೀಕ್ಷೆ ಸೇರಿದಂತೆ ಪ್ರಾಕ್ಟಿಕಲ್ ತರಗತಿ ದೃಷ್ಟಿಯಿಂದ ಎಲ್ಲ ರೀತಿಯ ಉಪಕರಣಗಳನ್ನು ವ್ಯವಸ್ಥೆಗೊಳಿಸಲಾಗಿದ್ದು, ಅಭ್ಯಾಸಕ್ಕೆ ಅನುಕೂಲಕರವಾಗಿದೆ. ಪ್ರತಿ ಕೊಠಡಿಯಲ್ಲೂ ಡಿಜಿಟಲ್ ಬೋರ್ಡ್, ಡಿಜಿಟಲ್ ಲೈಬ್ರರಿ ಹಾಗೂ ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಪೂರಕವಾಗಿವೆ.

ಮಾರ್ಚ್ 23ರಿಂದಲೇ ದ್ವಿತೀಯ ಪಿಯು ಸೈನ್ಸ್ ವಿದ್ಯಾರ್ಥಿಗಳಿಗೆ ಕ್ಲಾಸ್
“ನಮ್ಮಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸೇರಿದಂತೆ ಬಹಳಷ್ಟು ಬಡ, ಪ್ರತಿಭಾವಂತ ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದರಿಂದ ಅವರಿಗೆ ವಿಜ್ಞಾನ ವಿಭಾಗದ ವಿಷಯಗಳ ಬಗೆಗಿನ ಹಿಂಜರಿಕೆ, ಭಯ ಹೋಗಲಾಡಿಸಲು ಮತ್ತು ಮನೋಸ್ಥೈರ್ಯ ತುಂಬುವ ಉದ್ದೇಶದಿಂದ ಮಾರ್ಚ್ 23ರಿಂದಲೇ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ವಿಷಯವಾರು ಕ್ಲಾಸ್ ಆರಂಭಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಹಕಾರಿಯಾಗಿದೆ” ಎಂದು ಗಣಿತ ಉಪನ್ಯಾಸಕರಾದ ಸುಜಾವುದ್ದೀನ್ ಅವರು ಹೇಳುತ್ತಾರೆ.

ಪಿಯು ಸೈನ್ಸ್ ಪ್ರವೇಶ
ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈಗಾಗಲೇ ಪ್ರವೇಶಾತಿ ಆರಂಭವಾಗಿದೆ. ಪ್ರವೇಶಾತಿ ಪ್ರಕ್ರಿಯೆ ಮುಗಿದ ಬಳಿಕ ಮೇ 25, 2026ರಿಂದ ತರಗತಿಗಳು ಆರಂಭವಾಗಲಿವೆ. ದಂಡ ಶುಲ್ಕವಿಲ್ಲದ ದಾಖಲಾತಿ 30-6-2026, ವಿಳಂಬ ದಾಖಲಾತಿ ಶುಲ್ಕ ರೂ.670 ದೊಂದಿಗೆ 01-07-2026ರಿಂದ 10-07-2026 ಹಾಗೂ ವಿಶೇಷ ದಂಡ ಶುಲ್ಕ ರೂ.2890 ದೊಂದಿಗೆ 11-07-2026 ರಿಂದ 30-7-2026ರವರೆಗೆ ಸಮಯದ ನಿಗದಿಪಡಿಸಲಾಗಿದೆ. ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕಾಲೇಜಿಗೆ ದಿನವೂ ಭೇಟಿ ನೀಡುತ್ತಿದ್ದು, ನೋಂದಣಿಗೆ ಮುಂದಾಗಿದ್ದಾರೆ.

ಪ್ರವೇಶಕ್ಕೆ ಏನೇನು ದಾಖಲಾತಿ ಬೇಕು
ಭರ್ತಿ ಮಾಡಿದ ದಾಖಲಾತಿ ಅರ್ಜಿ, ಮೂಲ ವರ್ಗಾವಣೆ ಪ್ರಮಾಣಪತ್ರ ಹಾಗೂ 2 ಝರಾಕ್ಸ್ ಪ್ರತಿಗಳು, ಆನ್ಲೈನ್ ಎಸ್.ಎಸ್.ಎಲ್.ಸಿ ಅಂಕಪಟ್ಟಿ 2 ಪ್ರತಿಗಳು ಮುಖ್ಯೋಪಾಧ್ಯಾಯ ಸಹಿಯೊಂದಿಗೆ, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳ 2 ದೃಢೀಕೃತ ಝರಾಕ್ಸ್ ಪ್ರತಿಗಳು, ಎಸ್ಎಸ್ಎಲ್ಸಿ ಹಾಲ್ ಟಿಕೇಟ್ನ ಝರಾಕ್ಸ್ ಪ್ರತಿ 1, ಆಧಾರ್ಕಾರ್ಡ್ ಝರಾಕ್ಸ್ ಪ್ರತಿ 2, ಬ್ಯಾಂಕ್ ಪಾಸ್ಬುಕ್ ಝರಾಕ್ಸ್ ಪ್ರತಿ 1, ಬಿ.ಪಿ.ಎಲ್.ಕಾರ್ಡ್ ಇದ್ದರೆ ಝರಾಕ್ಸ್ ಪ್ರತಿ 1, ಇತ್ತೀಚಿನ ಪಾಸ್ಪೋರ್ಟ್ ಸೈಜಿನ 4, ಸ್ಟಾಂಪ್ ಸೈಜಿನ 2 ಫೋಟೋಗಳು.
ವಿಜ್ಞಾನ ವಿಭಾಗದ ಕೋರ್ಸ್ಗಳು
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವ ಶಾಸ್ತ್ರ (ಪಿಸಿಎಂಬಿ), ಭೌತಶಾಶಾಸ್ತ್ರ, ರಸಾಯನಶಾಶಾಸ್ತ್ರ, ಗಣಿತ, ಕಂಪ್ಯೂಟರ ವಿಜ್ಞಾನ (ಪಿಸಿಎಂಸಿಎಸ್) ಈ ಎರಡು ಸಂಯೋಜನೆಗಳನ್ನು ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳು ಅಭ್ಯಾಸ ಮಾಡಬಹುದಾಗಿದೆ.
ಅತ್ಯಂತ ಕಡಿಮೆ ಶುಲ್ಕ
ವಿಜ್ಞಾನ ವಿಭಾಗದಲ್ಲಿ ಪ್ರವೇಶ ಪಡೆಯಲು ಅತ್ಯಂತ ಕಡಿಮೆ ಶುಲ್ಕ ಇದ್ದು, ಆರ್ಥಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಿದೆ. ಸಾಮಾನ್ಯ ವಿದ್ಯಾರ್ಥಿಗಳಿಗೆ ರೂ.2700, ವಿದ್ಯಾರ್ಥಿನಿಯರಿಗೆ ರೂ.1000, ಪ.ಜಾ & ಪ.ಪಂ. ವಿದ್ಯಾರ್ಥಿಗಳಿಗೆ ರೂ.1000 ಹಾಗೂ ಸಿ1, 2ಎ, 2ಬಿ, 3ಎ, 3ಬಿ ಮತ್ತು ಐ.ಸಿ. ವಿದ್ಯಾರ್ಥಿಗಳಿಗೆ ರೂ.1770 ಶುಲ್ಕ ನಿಗದಿಪಡಿಸಿದೆ.

ಶೇ.92.83 ಅಂಕ ಪಡೆದ ಟಾಪರ್ ಮೌನೇಶ
ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿ ಮೌನೇಶ ತಂದೆ ಅಮರೇಶ, ಖಾಸಗಿ ಕಾಲೇಜಿನವರೂ ಹುಬ್ಬೇರಿಸುವಂತಹ ಸಾಧನೆ ತೋರಿದ್ದಾರೆ. ಪ್ರಾಚಾರ್ಯರು ಹಾಗೂ ಉಪನ್ಯಾಸಕರ ಪ್ರೋತ್ಸಾಹ ಹಾಗೂ ಸ್ವಯಂ ಪ್ರತಿಭೆಯಿಂದ ಪ್ರಸಕ್ತ ಸಾಲಿನ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಶೇ.92.83 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಕಾಲೇಜಿನ ಕೀರ್ತಿ ಪತಾಕೆ ಹಾರಿಸಿದ್ದಾನೆ. ನಫೀಸ್ ಫಾತೀಮಾ ಶೇ.92.17, ನೇಹಾ ಶೇ.91.67, ರವಿಕುಮಾರ ಶೇ.91.33, ಆರತಿ ಪೊಲೀಸ್ ಪಾಟೀಲ್ ಶೇ.90.50, ಮೌನೇಶ ಶೇ.90.50, ಈರಮ್ಮ ಶೇ.90.00, ಕೆ.ಪೂಜಾ ಶೇ.88.50, ಯಶ್ವಂತ್ ಶೇ.88.33, ವೈಷ್ಣವಿ ಶೇ.88.00, ಆಯೇಷಾ ಶೇ 87.83, ಸಿಂಧು.ಕೆ. ಶೇ.87.00, ವೀರೇಶ ಶೇ.86.83, ಸಂಜನಾ ಎಚ್ ಶೇ.85.67, ಮಂಜುನಾಥ ಶೇ.85.17, ಚಂದ್ರಕಲಾ ಶೇ.85.00 ಅಂಕಗಳನ್ನು ಪಡೆಯುವ ಮೂಲಕ 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಹೊಂದಿ ಸಾಧನೆ ಮಾಡಿದ್ದಾರೆ.
ಕಲಾ ಮತ್ತು ವಾಣಿಜ್ಯ ವಿಭಾಗದಲ್ಲೂ ಸಾಧನೆ
ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಜೊತೆಗೆ ಕಲಾ ಮತ್ತು ವಾಣಿಜ್ಯ ವಿಭಾಗವೂ ಇದ್ದು, ಈ ವಿಭಾಗದಲ್ಲೂ ವಿದ್ಯಾರ್ಥಿಗಳೂ ಅತ್ಯುತ್ತಮ ಸಾಧನೆ ತೋರಿದ್ದಾರೆ. ಕಲಾ ವಿಭಾಗದಲ್ಲಿ ಆಕಾಶ್ ಶೇ.90.33, ಹುಸೇನ್ಭಾಷಾ ಶೇ.90, ಅಭಿಷೇಕ್ ಶೇ.89.33, ಕಿರಣಕುಮಾರ ಶೇ.89.33 ಹಾಗೂ ವಾಣಿಜ್ಯ ವಿಭಾಗದಲ್ಲಿ ಅಭಿಷೇಕ್ ಶೇ.79.83, ಪ್ರಭು.ಕೆ.71.17 ಅಂಕಗಳನ್ನು ಪಡೆದಿದ್ದಾರೆ.
ಕೋಟ್
ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಅದರಲ್ಲೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಒದಗಿಸಲಾಗುತ್ತಿದ್ದು, ಇದು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಹಕಾರಿಯಾಗಿದೆ.
-ಶೇಖರಯ್ಯಸ್ವಾಮಿ, ಪ್ರಾಚಾರ್ಯರು
