ಸಿಂಧನೂರು: ‘ಲೋಕಾಯುಕ್ತ ತಂಡ ತಾಲೂಕಿನ ಇಲಾಖೆಗಳನ್ನು ಪರಿಶೀಲಿಸಲಿ’

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 6

ಜಿಲ್ಲಾ ಕೇಂದ್ರ ರಾಯಚೂರಿಗೆ ದಿನಾಂಕ: 07-01-2026ರಂದು ರಾಜ್ಯ ಮುಖ್ಯ ಲೋಕಾಯುಕ್ತರು ಭೇಟಿ ನೀಡಲಿದ್ದು, ಸಿಂಧನೂರು ತಾಲೂಕು ಕೇಂದ್ರಕ್ಕೂ ಲೋಕಾಯುಕ್ತ ಅಧಿಕಾರಿಗಳ ತಂಡ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು, ಆ ಮೂಲಕ ಸಾರ್ವಜನಿಕರಿಗೆ ವಿಳಂಬ ಮತ್ತು ಭ್ರಷ್ಟಾಚಾರ ರಹಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಜನಪರ ಸಂಘಟನೆಗಳು ಒತ್ತಾಯಿಸಿವೆ.
ತಾಲೂಕಿನ ಹಲವು ಇಲಾಖೆಗಳಲ್ಲಿ ಕಡತಗಳ ವಿಲೇವಾರಿಯಲ್ಲಿ ವಿಳಂಬ, ವಿಲೇವಾರಿಯಾಗದ ಅರ್ಜಿಗಳ ಸ್ಥಿತಿ-ಗತಿ, ಸಿಬ್ಬಂದಿಗಳ ಹಾಜರಾತಿ, ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳ ಗುಣಮಟ್ಟ, ದಾಖಲೆಗಳ ಅಸಮರ್ಪಕ ನಿರ್ವಹಣೆ, ಹಣ ಕೊಟ್ಟವರಿಗೆ ಕೆಲಸ ಮಾಡಿಕೊಡುವುದು, ಏಜೆಂಟ್‌ಗಳ ಮೂಲಕ ಸಾರ್ವಜನಿಕರಿಂದ ಹಣ ವಸೂಲಿ, ವಿವಿಧ ಕಾಮಗಾರಿಗಳ ಹೆಸರಲ್ಲಿ ಬೋಗಸ್ ಬಿಲ್ ಎತ್ತುವಳಿ, ಇಲಾಖಾ ನಿಯಮಗಳ ಉಲ್ಲಂಘನೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಹತ್ತು ಹಲವು ಲೋಪಗಳು ಇದ್ದು, ಈ ಕುರಿತು ಲೋಕಾಯುಕ್ತರು ಪಾರದರ್ಶಕ ಆಡಳಿತಕ್ಕಾಗಿ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ತಾಲೂಕು ಕೇಂದ್ರಕ್ಕೆ ಭೇಟಿಕೊಟ್ಟು ವಿವಿಧ ಇಲಾಖೆಗಳ ಪರಿಶೀಲನೆ ನಡೆಸಬೇಕು ಎಂದು ಸಂಘಟನೆಯ ಮುಖಂಡರೊಬ್ಬರು ಲೋಕಾಯುಕ್ತರಲ್ಲಿ ಮನವಿ ಮಾಡಿದ್ದಾರೆ.
‘ಹಣ ಕೊಟ್ಟವರಿಗೆ ಬೇಗ ಕೆಲಸ, ಇಲ್ಲದಿದ್ದರೆ ಅಲೆದಾಟ’
ತಾಲೂಕಿನ ಕೆಲ ಇಲಾಖೆಗಳ ಅಧಿಕಾರಿಗಳು ಹಣ ಕೊಟ್ಟವರಿಗೆ ಬೇಗ ಸರ್ಕಾರದ ಸೇವೆ ಒದಗಿಸುತ್ತಿದ್ದು, ನಿಯಮಗಳ ಅನ್ವಯ ಅರ್ಜಿ ಹಾಕಿ ಇಲಾಖೆ ಕಚೇರಿಗೆ ಭೇಟಿ ನೀಡಿದರೂ ವಿನಾಃಕಾರಣ ಅಲೆದಾಡಿಸುತ್ತಾರೆ. ಇದರಿಂದ ಹಲವು ಇಲಾಖೆಗಳಲ್ಲಿ ಕಡತಗಳು ಬಹಳಷ್ಟು ಬಾಕಿ ಉಳಿದುಕೊಂಡಿವೆ. ಹೀಗಾದರೆ ಸಾರ್ವಜನಿಕರು ಏನು ಮಾಡಬೇಕು. ಇಂತಹ ಇಲಾಖೆಗಳಿಗೆ ಚುರುಕು ಮುಟ್ಟಿಸಲು ಲೋಕಾಯುಕ್ತರು ಭೇಟಿ ಕೊಟ್ಟು ಪರಿಶೀಲನೆ ನಡೆಸಬೇಕು ಎಂದು ನಾಗರಿಕರೊಬ್ಬರು ಒತ್ತಾಯಿಸುತ್ತಾರೆ.
‘ಕಾಗದದಲ್ಲಷ್ಟೇ ಅಭಿವೃದ್ಧಿ, ಬೋಗಸ್ ಬಿಲ್‌ಗಿಲ್ಲ ಕಡಿವಾಣ’
“ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ಅಂದಾಜು ಪತ್ರಿಕೆಯಂತೆ ಕೆಲಸ ನಿರ್ವಹಿಸದೇ ಅರೆ-ಬರೆ ಕಾಮಗಾರಿ ಮಾಡಿ ಹಣ ದುರುಪಯೋಗಪಡಿಸಿಕೊಂಡಿದ್ದು, ಒಂದೆಡೆಯಾದರೆ ಭೌತಿಕವಾಗಿ ಕಾಮಗಾರಿ ಕೈಗೊಳ್ಳದೇ ಹಣ ದುರ್ಬಳಕೆ ಮಾಡಿಕೊಂಡಿರುವ ಹಲವು ಪ್ರಕರಣಗಳು ತಾಲೂಕಿನಲ್ಲಿವೆ. ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳ ತಂಡದಿಂದ ಸಮಗ್ರ ತನಿಖೆಯಾದರೆ ಎಲ್ಲ ಬಣ್ಣ ಬಯಲಾಗಲಿದೆ” ಎಂದು ಸಂಘಟನೆಯೊಂದರ ಮುಖಂಡರು ಹೇಳುತ್ತಾರೆ.
ರಾಯಚೂರು ಜಿಲ್ಲೆಯಲ್ಲೇ ಸಿಂಧನೂರು ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಇಲ್ಲಿ ಹಲವು ಇಲಾಖೆಗಳು ಕಾರ್ಯನಿರ್ವಹಿಸುತ್ತವೆ. ಇತ್ತೀಚೆಗೆ ಕೆಲವು ಇಲಾಖೆಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದ ಬಗ್ಗೆ ಸಾರ್ವಜನಿಕರು ಬಹಿರಂಗವಾಗಿ ಆರೋಪ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಹಲವು ದೂರುಗಳನ್ನು ಲೋಕಾಯುಕ್ತರಿಗೆ ಸಲ್ಲಿಸಲಾಗಿದೆ ಎಂದು ಹೇಳುತ್ತಾರೆ. ನಿಗದಿತ ದಿನಾಂಕಗಳಂದು ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಭೇಟಿ ಕೊಟ್ಟದ್ದು ಹೊರತುಪಡಿಸಿ, ಇತ್ತೀಚೆಗೆ ಆರ್‌ಡಿಪಿಆರ್ ಇಲಾಖೆ ಕಚೇರಿಗೆ ದಾಳಿ ಮಾಡಿದ್ದು ಹೊರತುಪಡಿಸಿ, ಭ್ರಷ್ಟಚಾರ ನಡೆಸುವವರ ಮೇಲೆ ಕ್ರಮಗಳಾಗುತ್ತಿಲ್ಲ ಎಂದು ನಾಗರಿಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Spread the love

Leave a Reply

Your email address will not be published. Required fields are marked *