ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 5
ರಾಜ್ಯದ ಮುಖ್ಯ ಲೋಕಾಯುಕ್ತರಾದ ಬಿ.ಎಸ್.ಪಾಟೀಲ್ ಅವರು ದಿನಾಂಕ:07-01-2026ರಂದು ರಾಯಚೂರು ಜಿಲ್ಲೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ, ತಾಲೂಕಿನ ವಿವಿಧ ಇಲಾಖೆಯ ಸಿಬ್ಬಂದಿ ಅಟೆನ್ಷನ್‌ನಲ್ಲಿರುವುದು ಸೋಮವಾರ ಕಂಡುಬಂತು.
ಲೋಕಾಯುಕ್ತ ಇಲಾಖೆಯ ಅಧಿಕಾರಿಗಳ ತಂಡವೊಂದು ಇಲಾಖೆಯೊಂದರ ಕಚೇರಿಗೆ ಭೇಟಿ ನೀಡಿದೆ ಎಂಬ ಸಾರ್ವಜನಿಕರೊಬ್ಬರ ಮಾಹಿತಿಯನ್ನು ಆಧರಿಸಿ ಸೋಮವಾರ ಅಲ್ಲಿಗೆ ಭೇಟಿ ನೀಡಿದಾಗ ಯಾವುದೇ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡದೇ ಇರುವುದು ತಿಳಿದುಬಂತು.
ಮೇಲಧಿಕಾರಿಗಳ ಕಟ್ಟುನಿಟ್ಟಿನ ಸೂಚನೆ
ಮುಖ್ಯ ಲೋಕಾಯುಕ್ತರು ಜಿಲ್ಲೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ವಿವಿಧ ಇಲಾಖೆಯ ಮೇಲಧಿಕಾರಿಗಳು ಕೆಳ ಹಂತದ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆಂದು ಹೇಳಲಾಗುತ್ತಿದ್ದು, ಜ.1ನೇ ತಾರೀಖಿನಿಂದ ಜ.10ನೇ ತಾರೀಖಿನವರೆಗೆ ಯಾವುದೇ ರಜೆ ಕೇಳಬೇಡಿ. ಸಾರ್ವಜನಿಕರೊಂದಿಗೆ ಉತ್ತಮವಾಗಿ ವರ್ತಿಸಿ, ಕೆಲಸ ಕಾರ್ಯಗಳನ್ನು ಚಾಚೂ ತಪ್ಪದೇ ನಿರ್ವಹಿಸಿ ಎಂದು ಆಜ್ಞೆ ವಿಧಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಲೋಕಾಯುಕ್ತ ತಂಡಗಳು ಬರಲಿವೆಯಾ ?
ಪಾರದರ್ಶಕ ಆಡಳಿತ ಹಾಗೂ ಸಾರ್ವಜನಿಕರಿಗೆ ಸಕಾಲಕ್ಕೆ ಸೇವೆ ಒದಗಿಸುವ ನಿಟ್ಟಿನಲ್ಲಿ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮುಖ್ಯ ಲೋಕಾಯುಕ್ತರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆAದು ಹೇಳಲಾಗುತ್ತಿದ್ದು, ಹಲವು ತಂಡಗಳನ್ನು ರಚಿಸಿ, ಯಾವುದೇ ಇಲಾಖೆಯ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಸೂಚಿಸಿದ್ದಾರೆಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಯಾ ಇಲಾಖೆಗಳಿಗೆ ಲೋಕಾಯುಕ್ತರ ತಂಡಗಳು ಬಂದು ತನಿಖೆ ನಡೆಸಲಿವೆ ಎಂದು ತಿಳಿದುಬಂದಿದೆ.
ಲೋಕಾಯುಕ್ತ ತಂಡ ಬರುವಿಗಾಗಿ ಕಾಯುತ್ತಿರುವ ದೂರುದಾರರು, ಸಾಮಾಜಿಕ ಕಾರ್ಯಕರ್ತರು !
ವಿವಿಧ ಇಲಾಖೆಗಳಲ್ಲಿ ನಡೆದ ಹಲವು ಭ್ರಷ್ಟಾಚಾರ ಹಾಗೂ ಕಳಪೆ ಕಾಮಗಾರಿಗಳ ಕುರಿತು ದಾಖಲೆಗಳನ್ನು ರೆಡಿ ಇಟ್ಟುಕೊಂಡಿರುವ ಕೆಲ ಸಂಘಟನೆಗಳ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ದೂರುದಾರರು ಲೋಕಾಯುಕ್ತ ತಂಡದವರು ಬರುವಿಕೆಗಾಗಿ ಚಾತಕಪಕ್ಷಿಯಂತೆ ಕಾಯುತ್ತ ಕುಳಿತಿರುವುದು ತಿಳಿದುಬಂದಿದೆ. “ಕೆಲ ಇಲಾಖೆಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ, ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊAಡಿದ್ದೇವೆ. ತಂಡ ಬರುವುದಷ್ಟೇ ತಡ ಅವರಿಗೆ ದೂರು ಕೊಡುತ್ತೇವೆ” ಎಂದು ಹೆಸರಳೇಲಿಚ್ಚಿಸದ ಸಾಮಾಜಿಕ ಕಾರ್ಯಕರ್ತರೊಬ್ಬರು ವೆಬ್ ತಾಣಕ್ಕೆ ಸೋಮವಾರ ತಿಳಿಸಿದ್ದಾರೆ.

